ಅವರವರ ಸ್ಟೇಷನ್ ಸಿಕ್ಕಾಗ ಇಳಿಯಲೇ ಬೇಕಲ್ವಾ?- ಶಿವಾನಂದ ತಗಡೂರ

ಬದುಕು ಹಾಗೆ…

ಬದುಕಿನ ಪಯಣದಲ್ಲಿ, ಯಾರ್ಯಾರು ಯಾವ್ಯಾವ ಸ್ಟೇಷನ್ ನಲ್ಲಿ ಇಳಿಯುತ್ತಾರೊ ಗೊತ್ತಿರುವುದಿಲ್ಲ. ನಮ್ಮ ಜೊತೆಗೆ ಕೊನೆಯ ತನಕ ಅವರೂ ಪಯಣಿಗರು ಎನ್ನುವುದು ನಮ್ಮ ನಿರೀಕ್ಷೆ ಅಷ್ಟೆ. ವಾಸ್ತವವೇ ಬೇರೆ. ರೈಲಿನ ಸ್ಟೇಷನ್ ಇಳಿದರೆ ಅಲ್ಲಿಗೆ ಅವರ ಪಯಣದ ಋಣ ತೀರಿದಂತೆ. ನಿಜ ಇದೆಲ್ಲವೂ ವಿಧಿಯಾಟ!

೧.
ಮೊನ್ನೆ ನಿವೃತ್ತ ವಾರ್ತಾಧಿಕಾರಿ ಕೆ.ಆರ್.ತೋಪೇಗೌಡ ಅವರ ಸಾವಿನ ಸುದ್ದಿ ಬಂದಾಗ ಹಾಸನಕ್ಕೆ ಹೋಗಲು ಆಗಿರಲಿಲ್ಲ.
ಸುದ್ದಿ ಮನೆಯಲ್ಲಿ ಅಧಿಕಾರಿಯಾಗಿ ಗಮನ ಸೆಳೆದ ಮಾನವೀಯ ತುಡಿತದ ಅಧಿಕಾರಿ ತೋಪೇಗೌಡರಿಗೆ ಸಾವು ಇಷ್ಟು ಬೇಗ ಬಂದು ಅಪ್ಪಿಕೊಳ್ಳುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಅವರ ಬಗ್ಗೆ ಈ ಹಿಂದೆ ವಿವರವಾಗಿ ಬರೆದಿದ್ದೆ. ಹಾಸನದ ತೋಪೇಗೌಡ ಅವರ ಮನೆಗೆ ನಮ್ಮ ವಿಜಯ ಕರ್ನಾಟಕ ಪತ್ರಿಕೆ ಪ್ರಕಾಶ್ ಜೊತೆಗೆ ಹೋಗಿ, ಕುಟುಂಬಕ್ಕೆ ಸಾಂತ್ವನ ಹೇಳಿ ಬಂದೆ.

೨.
ಹೊಳೆನರಸೀಪುರ ಕನ್ನಡ ಪ್ರಭ ಗುರುಪ್ರಸಾದ್ ಯಾರಿಗೆ ತಾನೆ ಗೊತ್ತಿಲ್ಲ? ನಟನಾಗಿ, ಪತ್ರಕರ್ತನಾಗಿ, ಕವಿಯಾಗಿ, ಸಂಘಟಕನಾಗಿ ನಮ್ಮ ನಡುವೆ ಇದ್ದ ಕ್ರಿಯಾಶೀಲ ವ್ಯಕ್ತಿ ಗುರು. ಅಜಾನುಬಾಹು ಶರೀರ ಹೊಂದಿದ್ದರೂ, ಅಷ್ಟೇ ದೊಡ್ಡ ಮನಸ್ಸು ಹೊಂದಿದ್ದವ.
ಒಂದೂವರೆ ವರ್ಷದ ಹಿಂದೆ ಅವನ ಸಾವು ಬರಸಿಡಿಲಿನಂತೆ ಅಪ್ಪಳಿಸಿದಾಗ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಅವನಿಗೆ ಇನ್ನೂ 45 ತುಂಬಿರಲಿಲ್ಲ.
ಕುಟುಂಬ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದ ಗುರು ಎಲ್ಲರನ್ನೂ ನಗಿಸುತ್ತಲೇ ಅದರೊಳಗೆ ತಾನಿರಲು ಬಯಸುತ್ತಿದ್ದ ಅಪರೂಪದ ಜೀವ. ಹೊಳೆನರಸೀಪುರದಲ್ಲಿ ಗುರು ಮನೆಗೆ ನಮ್ಮ ಪ್ರಜಾವಾಣಿ ಸುರೇಶ್ ಜೊತೆಯಲ್ಲಿ ಇಡೀ ಕುಟುಂಬದವರೆಲ್ಲ ಹೋಗಿ ಸಾಂತ್ವನ ಹೇಳಿ ಬಂದೆವು. ಅದ್ಯಾಕೊ ಅವರ ಮನೆ ಒಳಗೆ, ಹೊರಗೆ ಗುರು ನಮ್ಮೊಂದಿಗೆ ಓಡಾಡಿ, ಮಾತನಾಡಿದ ಹಾಗಾಯಿತು. ಹಾಗೆ ಹೃದಯ ಭಾರವಾಯಿತು.

೩.
ಜೆ.ಟಿ.ಜಿಂಕಲಪ್ಪ.
ಕಾರ್ಮಿಕ ಇಲಾಖೆ ದಕ್ಷ ಅಧಿಕಾರಿಯಾಗಿ, ಅದ್ಬುತ ಸಂಘಟಕನಾಗಿ ಗುರುತಿಸಿಕೊಂಡಿದ್ದ ಜಿಂಕಲಪ್ಪ ನಿವೃತ್ತಿ ನಂತರವೂ ಕ್ರಿಯಾಶೀಲರಾಗಿದ್ದವರು. ಹಾಸನದ ಕಾರ್ಮಿಕ ಅಧಿಕಾರಿ ಹುದ್ದೆಯಿಂದ ಹಿಡಿದು ಜಂಟಿ ಕಾರ್ಮಿಕ ನಿರ್ದೇಶಕ ಹುದ್ದೆ ತನಕ, ಹೊಯ್ಸಳ ಉತ್ಸವದಿಂದ ಹಿಡಿದು, ಮಹಾಮಸ್ತಕಾಭಿಷೇಕ ತನಕ ವಿಭಿನ್ನವಾಗಿ ಕಾರ್ಯಕ್ರಮ ಸಂಘಟಿಸದ್ದ ಜಿಂಕಲಪ್ಪ ಅವರು ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಚಾಪು ಹೊತ್ತಿದ್ದವರು. ಅವರ ಸಾವು ಕೂಡ ಆಕಸ್ಮಿಕ. ಎರಡು ವರ್ಷದ ಹಿಂದೆ ನಡೆದ ಸಾವಿನ ಬಳಿಕ ಮೈಸೂರಿನಲ್ಲಿ ಅವರ ಮನೆಗೆ ಹೋಗಲು ಆಗಿರಲಿಲ್ಲ. ಅವರ ಮನೆಗೂ ಕುಟುಂಬ ಸಹಿತ ಹೋಗಿ ಸಾಂತ್ವನ ಹೇಳಿ ಬಂದೆವು.

೪.
ಇನ್ನೂ ನನ್ನ ಹತ್ತಿರದ ಸಂಬಂಧಿ ಹಾಸನದ ರಾಮಕ್ಕ. ಎಂಬತ್ತರ ದಶಕದಲ್ಲಿ ನಮ್ಮೂರಿನಿಂದ ನಾನು ಹಾಸನಕ್ಕೆ ಓದಲು ಬಂದಾಗ, ಮೊದಲು ಆಶ್ರಯ ನೀಡಿ, ಅನ್ನ ಹಾಕಿದ ಮಹಾತಾಯಿ. ಅವರ ಸಾವು ಕೂಡ ಅರಗಿಸಿಕೊಳ್ಳುವುದು ಕಷ್ಟ.

೫.
ನನ್ನ ತಾಯಿ ತವರು ಸಂತೇಶಿವರದಲ್ಲಿ ನನ್ನ ಬಾಲ್ಯ. ಆಗ ನನ್ನ ಎದೆಗವಚಿ, ಹಾಲು ಕುಡಿಸಿ ಮುದ್ದಾಡಿ ಬೆಳೆಸಿದ ಜಯಕ್ಕ ಕೂಡ ಕೊನೆಯುಸಿರೆಳೆದರು. ಹಾಗೆ ತಗಡೂರಿನಲ್ಲಿ ನಮ್ಮ ಪ್ರೀತಿಯ ತೋಟದ ಮನೆ ರಮೇಶಣ್ಣ ಕೂಡ ಅರ್ಧಕ್ಕೆ ಬದುಕು ನಿಲ್ಲಿಸಿದರು. ಅಲ್ಲಿಗೂ ಹೋಗಿ ಬಂದೆ.

ಯಾಕೊ ಸಾವಿನ ಮನೆಯಲ್ಲಿ ಸಾಂತ್ವನ ಹೇಳುವುದೇ ಹೆಚ್ಚಾಯಿತು. ಬದುಕು ಎಷ್ಟು ಬೇಗ ಪಯಣ ಮುಗಿಸಿಬಿಡುತ್ತದೆ ಅಲ್ವಾ?

ಇದ್ದಾಗ ಹೆಜ್ಜೆ ಹೆಜ್ಜೆಗೆ ಬದುಕು ಪ್ರೀತಿಸಿ ಸುಧೀರ್ಘ ಅವಧಿಗೆ ಜೀವನ ನಡೆಸಿದ ಹಿರಿಯರು ನಮಗೆ ಪ್ರಾತಃಸ್ಮರಣೀಯರು ಎನ್ನುವುದನ್ನು ಒಪ್ಪಬೇಕು. ಬದುಕಿನ ರೈಲು ಏರಿದ ಮೇಲೆ ಇಳಿಯುವುದು ಗ್ಯಾರಂಟಿ. ಆದರೆ, ಅವರ ಸ್ಟೇಷನ್ ಎಲ್ಲಿ ಎನ್ನುವುದು ಮಾತ್ರ ಗೊತ್ತಿಲ್ಲ ಅಷ್ಟೇ. ಮೂರು ದಿನದ ಬದುಕಿಗೆ ಅದೆಷ್ಟು ಗುದ್ದಾಟ, ಹೋರಾಟ, ಹಾರಾಟ…

Please follow and like us:
error