ಕೊಪ್ಪಳ, : ಅನಧಿಕೃತ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ಮದ್ಯ ಸರಬರಾಜು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದAದು (ನ.24) ಆಯೋಜಿಸಲಾಗಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಾದ್ಯಂತ ವಿವಿಧ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವ ಕುರಿತು ಹಾಗೂ ಡಾಬಾ, ಕಿರಾಣಿ ಅಂಗಡಿ ಮತ್ತು ಪಾನ್ಬೀಡಾ ಅಂಗಡಿಗಳಲ್ಲಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ಹಲವಾರು ದೂರುಗಳು ಸ್ವೀಕೃತವಾಗುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆಯಿಂದ ನಿಯಮಾನುಸಾರ ಕಠಿಣ ಕ್ರಮ ಜರುಗಿಸಬೇಕು ಎಂದರು.
ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಅವರು ಮಾತನಾಡಿ, ಅಕ್ರಮ ಮದ್ಯ ಸರಬರಾಜುಗಳಂತಹ ಕೃತ್ಯಗಳಲ್ಲಿ ಭಾಗಿಯಾದ ಸನ್ನದುದಾರರ ಹಾಗೂ ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಮದ್ಯ ಸರಬರಾಜು ಮಾಡುವ ಸನ್ನದುದಾರರ ಸನ್ನದುಗಳನ್ನು ಅಮಾನತು ಅಥವಾ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
