ಅತಿವೃಷ್ಟಿ ಹಾನಿ : ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ‌ ಕೊಂಡೊಯ್ಯಲು ಸಿದ್ದರಾಮಯ್ಯ ಆಗ್ರಹ

ಅತಿವೃಷ್ಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸಚಿವರ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ.
ಕಳೆದ ಬಾರಿ‌ ರಾಜ್ಯ ಅತಿವೃಷ್ಟಿಯಿಂದ ತತ್ತರಿಸುತ್ತಿರುವಾಗ ಕರ್ನಾಟಕದ ಕಡೆ ತಿರುಗಿ ನೋಡದೆ ನಿರ್ಲಕ್ಷಿಸಿದ್ದ ಪ್ರಧಾನಿ ಈ ಬಾರಿಯಾದರೂ ಎಚ್ಚೆತ್ತುಕೊಂಡಿದ್ದಾರೆ. ಈ ಅವಕಾಶವನ್ನು ರಾಜ್ಯ ಬಳಸಿಕೊಳ್ಳಬೇಕು ಎಂದು ವಿ.ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಪ್ರಧಾನಿಗಳು ನಡೆಸುವ ಸಭೆಯಲ್ಲಿ ಭಾಗವಹಿಸುತ್ತಿರುವ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಆರ್. ಅಶೋಕ್ ಅವರು ರಾಜ್ಯದ ಜನರ ಹಿತದೃಷ್ಟಿಯಿಂದಾದರೂ ಅತಿವೃಷ್ಟಿ ಪರಿಸ್ಥಿತಿಯನ್ನು ಸ್ವಲ್ಪ ಧೈರ್ಯ ಮಾಡಿ ವಿವರಿಸಿ ಹೆಚ್ಚು ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು. ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ ರೂ.1,00,000 ಕೋಟಿ. ರಾಜ್ಯಸರ್ಕಾರದ ವರದಿ ಪ್ರಕಾರ ನಷ್ಟ- ರೂ 50,000 ಕೋಟಿ. ಪರಿಹಾರ ಕೇಳಿದ್ದು
ರೂ.35,000 ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ರೂ.1860 ಕೋಟಿ ಮಾತ್ರ. ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ.

ಕಳೆದ ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತಿವೃಷ್ಟಿಯ ವರದಿ ಕಳಿಸಿರುವುದು ಆಗಸ್ಟ್ ವರೆಗಿನ ಹಾನಿ ಬಗ್ಗೆ ಮಾತ್ರ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅತಿವೃಷ್ಟಿ ವರದಿ ಕಳಿಸದೆ ಸರ್ಕಾರ ನೊಂದ ಜನತೆಗೆ ಮೋಸ ಮಾಡಿದೆ. ಈ ಬಾರಿ ಪರಿಹಾರವನ್ನು ಕೇಳುವಾಗ ಇದನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರಬೇಕು. ಪ್ರಧಾನಿಗಳು ಭಾನುವಾರ ಘೋಷಿಸಿರುವ ಒಂದು ಲಕ್ಷ ಕೋಟಿ ರೂಪಾಯಿ ಕೃಷಿ ಪ್ಯಾಕೇಜ್, ಕಳೆದ ಮೇ ತಿಂಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ ಕೋವಿಡ್ ಪರಿಹಾರ ಯೋಜನೆಯ ಭಾಗವಾಗಿದೆ. ಅದನ್ನೇ ಹೊಸ ಪ್ಯಾಕೇಜ್ ಎಂದು ಬಿಂಬಿಸಿ ಪ್ರಧಾನಿಯವರು ರೈತರ ದಾರಿ ತಪ್ಪಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆಗೆ ರಾಜ್ಯ ಸರ್ಕಾರ ಗುರುತಿಸಿರುವ ರೈತ ಫಲಾನುಭವಿಗಳ ಸಂಖ್ಯೆ ಕೇವಲ 52 ಲಕ್ಷ ಮಾತ್ರ. ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ರಾಜ್ಯದಲ್ಲಿರುವ ಒಟ್ಟು ರೈತ ಕುಟುಂಬಗಳ ಸಂಖ್ಯೆ 82 ಲಕ್ಷ. ಈ ಮಾಹಿತಿಯನ್ನು ಬಚ್ಚಿಟ್ಟು ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡಿದೆ. 15ನೇ ಹಣಕಾಸು ಆಯೋಗ ರಾಜ್ಯಕ್ಕೆ ರೂ.5495 ಕೋಟಿ ವಿಶೇಷ ಅನುದಾನದ ಶಿಫಾರಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿ ಆ ಅನುದಾನ ರಾಜ್ಯಕ್ಕೆ ಸಿಗದಂತೆ ಮಾಡಿದ್ದಾರೆ. ಈ ಅನ್ಯಾಯವನ್ನು ಕೂಡಾ ರಾಜ್ಯದ ಸಚಿವರು ಇಂದಿನ‌ ಸಭೆಯಲ್ಲಿ ಪ್ರಧಾನಿಗಳ ಗಮನಕ್ಕೆ ತರಬೇಕು.

ರಾಜ್ಯದ‌‌ ಅತಿವೃಷ್ಟಿ ಪರಿಸ್ಥಿತಿಯ ಸಮೀಕ್ಷೆಗೆ ಈ ಬಾರಿಯಾದರೂ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳಿಸಬೇಕು. ಇಂದಿನ ಸಭೆಯಲ್ಲಿ ರಾಜ್ಯದ ಸಚಿವರು ಪ್ರಧಾನಿಯವರಲ್ಲಿ ಈ ಒತ್ತಾಯ ಮಾಡಬೇಕು. ಪ್ರಧಾನಿ ಅವರ ಜೊತೆಗಿನ ರಾಜ್ಯದ ಸಚಿವರ ಸಭೆ ಕಾಟಾಚಾರದ ಕಸರತ್ತು ಆಗಬಾರದು. ಮುಖ್ಯಮಂತ್ರಿಗಳು ತಕ್ಷಣ ಅಧಿಕಾರಿಗಳ ತಂಡವನ್ನು ಅತಿವೃಷ್ಟಿ ಪೀಡಿತ ಪ್ರದೇಶಕ್ಕೆ ಕಳಿಸಿ ನಷ್ಟದ ಅಧ್ಯಯನ ಮಾಡಿಸಿ ಪ್ರಧಾನಿ ಅವರಿಗೆ ಕಳಿಸಿಕೊಟ್ಟು ನ್ಯಾಯಯುತ ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು.

ಈ ವರೆಗಿನ ಅನುಭವದ ಪ್ರಕಾರ ರಾಜ್ಯದ ಹಿತಾಸಕ್ತಿ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ಪ್ರಧಾನಿ ಅವರ ಜೊತೆ ಮಾತನಾಡಿ ಹೆಚ್ಚು ಪರಿಹಾರ ಪಡೆಯುವ ಶಕ್ತಿ ಮುಖ್ಯಮಂತ್ರಿಗಳು ಇಲ್ಲವೇ ಸಚಿವರಿಗಿಲ್ಲ. ಇದಕ್ಕಾಗಿ, ಹೆಚ್ಚಿನ ಪರಿಹಾರ‌ ಕೋರಲು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ‌ ಕೊಂಡೊಯ್ಯಬೇಕು ಎಂದು ಆಗ್ರಹಿಸಿದ್ದಾರೆ

Please follow and like us:
error