ಪುರಿ ಜಗನ್ನಾಥನ ಆಸ್ತಿ ಎಷ್ಟು ಗೊತ್ತಾ?

ಹೊಸದಿಲ್ಲಿ: ಪುರಿ ಜಗನ್ನಾಥ ದೇವಾಲಯ ಒಡಿಶಾ ಮತ್ತು ಇತರೆಡೆಗಳಲ್ಲಿ ಒಟ್ಟು 60,418 ಎಕರೆ ಅಥವಾ 244.5 ಚದರ ಕಿಲೋಮೀಟರ್ ಆಸ್ತಿಯನ್ನು ಹೊಂದಿದೆ ಎಂಬ ಅಚ್ಚರಿಯ ಅಂಶವನ್ನು ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ಉಲ್ಲೇಖಿಸಿದೆ.

ಪುರಿ ದೇವಾಲಯ ಹೊಂದಿರುವ ಒಟ್ಟು ಆಸ್ತಿಯ ವಿಸ್ತೀರ್ಣ ಇಡೀ ಪುರಿ ಪಟ್ಟಣದ ವಿಸ್ತೀರ್ಣದ ಹದಿನೈದು ಪಟ್ಟು. ಪುರಿ ಪಟ್ಟಣ 16.33 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.

ಆದರೆ ಕೋರ್ಟ್‌ನ ಗಮನ ಸೆಳೆದ ಅಂಶವೆಂದರೆ, ದೇವಾಲಯ ಹಲವು ಕಲ್ಲುಗಣಿಗಳು ಹಾಗೂ ಗಣಿಗಳನ್ನು ಕೂಡಾ ಹೊಂದಿದೆ; ಆದರೆ ಪರವಾನಗಿ ಹೊಂದಿರುವವರು ದೇಗುಲಕ್ಕೆ ಇರಿಸಿಕೊಂಡ ಬಾಕಿಯನ್ನು ಪಾವತಿಸುತ್ತಿಲ್ಲ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಂ.ಆರ್.ಶಾ ಮತ್ತು ಎಸ್.ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ, “ಶ್ರೀ ಜಗನ್ನಾಥ ದೇವಾಲಯಕ್ಕೆ ಒಡಿಶಾದ ಒಳಗೆ ಹಾಗೂ ಹೊರಗೆ ಸಾಕಷ್ಟು ಸ್ಥಿರಾಸ್ತಿಗಳಿವೆ. ಎಮಿಕಸ್ ಕ್ಯೂರಿ ಸಲ್ಲಿಸಿದ ವರದಿಯ ಪ್ರಕಾರ 60,418 ಎಕರೆ ಸ್ಥಿರಾಸ್ತಿ ದೇವಾಲಯದ ಹೆಸರಿನಲ್ಲಿದೆ. ಇದುವರೆಗೆ 34201 ಎಕರೆಗೆ ಹಕ್ಕು ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಆರು ತಿಂಗಳ ಒಳಗಾಗಿ ಉಳಿದ ಆಸ್ತಿಗೆ ಹಕ್ಕು ದಾಖಲೆ ಸಿದ್ಧಪಡಿಸಿ ನ್ಯಾಯಾಲಯಕ್ಕೆ ತಿಳಿಸಬೇಕು. ದಾಸ್ತಾನು ವಿವರ ಸಿದ್ಧಪಡಿಸಿ, ಈ ಜಮೀನನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಹಾಗೂ ಇದರಿಂದ ಎಷ್ಟು ಉತ್ಪತ್ತಿ ಬರುತ್ತಿದೆ ಎಂಬ ವಿವರ ನೀಡಬೇಕು” ಎಂದು ಆದೇಶ ನೀಡಿದೆ.

ವಿಚಾರಣೆಯನ್ನು ನ್ಯಾಯಪೀಠ ಜನವರಿ 8ಕ್ಕೆ ಮುಂದೂಡಿದೆ.

Please follow and like us:
error