ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಸಾಧಿಸಿ ಉಪಮುಖ್ಯಮಂತ್ರಿ ಹುದ್ದೆಗೇರಿದ ಅಜಿತ್ ಪವಾರ್ ವಿರುದ್ಧದ 70,000 ಕೋಟಿ ರೂ. ಮಹಾರಾಷ್ಟ್ರ ನೀರಾವರಿ ಹಗರಣ ಕುರಿತಾದ ಪ್ರಕರಣದ ತನಿಖೆಯನ್ನು ರಾಜ್ಯದ ಭ್ರಷ್ಟಾಚಾರ ನಿಗ್ರಹ ಬ್ಯುರೋ ಕೈಬಿಟ್ಟಿದೆ. ಅವರು ಬಿಜೆಪಿ ಜತೆ ಕೈಜೋಡಿಸಿದ 48 ಗಂಟೆಗಳಲ್ಲಿಯೇ ಈ ಬೆಳವಣಿಗೆ ನಡೆದಿದೆ ಎಂದು ‘ಫಸ್ಟ್ ಪೋಸ್ಟ್’ ವರದಿ ಮಾಡಿದೆ. ಆದರೆ ಈ ಯಾವುದೇ ಪ್ರಕರಣಗಳು ಅಜಿತ್ ಪವಾರ್ ಗೆ ಸಂಬಂಧಿಸಿದ್ದಲ್ಲ ಎಂದು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥ ಪರಂಬೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ತನಿಖೆ ಅಂತ್ಯಗೊಳಿಸಿದ ಎಸಿಬಿ ಪತ್ರದ ಪ್ರತಿಯನ್ನು ಟ್ವೀಟ್ ಮಾಡಿದ ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ ಆಡಳಿತ ಬಿಜೆಪಿಯ ವಿರುದ್ಧ ಕಿಡಿ ಕಾರಿದ್ದಾರೆ. ಈ ಪತ್ರದಲ್ಲಿ ದಿನಾಂಕ ನವೆಂಬರ್ 25, 2019 ಎಂದು ನಮೂದಿತವಾಗಿದೆ.
ಮೊದಲ ಬಾರಿ ಡಿಸೆಂಬರ್ 2014ರಲ್ಲಿ ಸೀಎಂ ಪಟ್ಟಕ್ಕೇರಿದ ನಂತರ ಫಡ್ನವೀಸ್ ಅವರು ನೀರಾವರಿ ಹಗರಣ ಕುರಿತಂತೆ ಎಸಿಬಿ ತನಿಖೆಗೆ ಅನುಮತಿ ನೀಡಿದ್ದರು. 1999 ಹಾಗೂ 2009 ನಡುವೆ ಜಲಸಂಪನ್ಮೂಲ ಸಚಿವರಾಗಿದ್ದ ಅಜಿತ್ ಪವಾರ್ 2009ರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಹಾಗೂ ವಿದರ್ಭ ನೀರಾವರಿ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿಯ ಅನುಮತಿ ಪಡೆಯದೆ ರೂ 20,000 ಕೋಟಿ ಮೌಲ್ಯದ 38 ಯೋಜನೆಗಳಿಗೆ ಅನುಮತಿ ನೀಡಿದ್ದರೆಂದು ಆರೋಪಿಸಲಾಗಿತ್ತು.
ಇಷ್ಟೊಂದು ದೊಡ್ಡ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದರೂ ರಾಜ್ಯದಲ್ಲಿ ನಿರಾವರಿ ಸೌಲಭ್ಯ ಪಡೆದ ಸ್ಥಳಗಳ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಆದರೆ 2012ರಲ್ಲಿ ಮಹಾರಾಷ್ಟ್ರದ ಪೃಥ್ವೀರಾಜ್ ಚೌಹಾಣ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಧಾನಸಭೆಯಲ್ಲಿ ಶ್ವೇತಪತ್ರ ಮಂಡಿಸಿ ಅಜಿತ್ ಪವಾರ್ ಗೆ ಕ್ಲೀನ್ ಚಿಟ್ ನೀಡಿತ್ತು.