7 ತಿಂಗಳ ನಂತರ ಫಾರೂಕ್‌ ಅಬ್ದುಲ್ಲಾ ಬಿಡುಗಡೆ

 

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಶುಕ್ರವಾರ ತಮ್ಮ ಗುಪ್ಕರ್ ನಿವಾಸದ ಗೃಹಬಂಧನದಿಂದ ಮುಕ್ತರಾಗಿದ್ದಾರೆ. ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧನಕ್ಕೆ ಒಳಪಡಿಸಿದ ಏಳು ತಿಂಗಳ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

“ನಾನು ಸ್ವತಂತ್ರ, ನಾನು ಸ್ವತಂತ್ರ” ಎಂದು ಅವರು ತಮ್ಮ ಮನೆಯ ಹೊರಗೆ ನೆರೆದಿದ್ದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಫಾರೂಕ್‌ ಅಬ್ದುಲ್ಲರನ್ನು ಕಳೆದ ಆಗಸ್ಟ್‌ನಲ್ಲಿ ಬಂಧಿಸಿ ಗೃಹಬಂಧನದಲ್ಲಿಡಲಾಗಿತ್ತು.

“ನನ್ನ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ ರಾಜ್ಯ ಮತ್ತು ದೇಶದ ಜನರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು 82 ವರ್ಷದ ಅಬ್ದುಲ್ಲಾ ಹೇಳಿದರು.

“ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಇತರ ಎಲ್ಲಾ ಬಂಧಿತ ನಾಯಕರು ವಿವಿಧ ಕಟ್ಟಡಗಳಲ್ಲಿ ಬಿಡುಗಡೆಯಾದಾಗ ಮಾತ್ರ ಈ ಸ್ವಾತಂತ್ರ್ಯವು ಪೂರ್ಣಗೊಳ್ಳುತ್ತದೆ” ಎಂದು ಅವರು ಹೇಳಿದರು. “ಎಲ್ಲರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದಿದ್ದಾರೆ.

ಎಲ್ಲಾ ನಾಯಕರು ಬಿಡುಗಡೆಯಾಗುವವರೆಗೂ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ ಎಂದು ಅಬ್ದುಲ್ಲಾ ಹೇಳಿದ್ದಾರೆ

Please follow and like us:
error