371j ಹೈದರಾಬಾದ್ ಕರ್ನಾಟಕ ಮೀಸಲು ಅಡಿಯಲ್ಲಿ ಭಡ್ತಿ ವಿಚಾರ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಡಿ.29: ಹೈದರಾಬಾದ್ ಕರ್ನಾಟಕ 371(ಜೆ)(2)(98ನೇ ತಿದ್ದುಪಡಿ) ಮೀಸಲು ಅಡಿಯಲ್ಲಿ ಭಡ್ತಿ ನೀಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಹೈ.ಕ ಭಾಗದ ಜನರಿಗೆ ಉದ್ಯೋಗ ನೇಮಕಾತಿ ಮತ್ತು ಭಡ್ತಿ ನೀಡಿರುವ ಕ್ರಮ ಪ್ರಶ್ನಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ (ಕೆಪಿಸಿಎಲ್) ಕಾರ್ಯನಿರ್ವಹಿಸುತ್ತಿರುವ 119 ಇಂಜಿನಿಯರ್ ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ನೋಟಿಸ್ ಜಾರಿ ಮಾಡಿದೆ.ಹಾಗೆಯೇ ಹೈ-ಕ ಮೀಸಲು ಅಡಿ 110 ಮಂದಿ ಇಂಜಿನಿಯರ್ ಗಳಿಗೆ ನೀಡಿರುವ ಭಡ್ತಿಯು ಅರ್ಜಿ ಸಂಬಂಧ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶ ಮಾಡಿದೆ.

ಅರ್ಜಿದಾರರು, ಸಂವಿಧಾನದ ವಿಧಿ (16)(4) 16(4ಎ) 16(4ಬಿ) ಅಡಿಯಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ವರ್ಗಕ್ಕೆ ಮೀಸಲು ಕಲ್ಪಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿಯೇ ನೇಮಕಾತಿ ಮತ್ತು ಭಡ್ತಿಯಲ್ಲಿ ಮೀಸಲು ಕಲ್ಪಿಸಲಾಗುತ್ತಿದೆ. ಇವೇ ನಿಯಮಗಳ ಅಡಿಯಲ್ಲಿ ಪ್ರಾದೇಶಿಕವಾಗಿ ಹೈ-ಕ ವಲಯದಿಂದ ಆಯ್ಕೆಯಾದ ನೌಕರರಿಗೆ ಸೇವಾ ಹಿರಿತನ ಬದಿಗಿಟ್ಟು ಭಡ್ತಿ ನೀಡುವುದು ಸಂವಿಧಾನದ ವಿಧಿ 14 ಮತ್ತು 15ಕ್ಕೆ ವಿರುದ್ಧವಾಗಿದೆ. ಹೀಗಾಗಿ, ಕೆಪಿಸಿಎಲ್ ಉದ್ಯೋಗಿಗಳಿಗೆ ನೀಡಿರುವ ಭಡ್ತಿಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Please follow and like us:
error