26/11ರ ಮುಂಬೈ ದಾಳಿಯ ಒಂದು ನೆನಪು-ಸಮಾಜದ ಅಸಲೀ ಹೀರೋಗಳು..

ಆ ಭೀಕರ ರಾತ್ರಿ ಪಾಕ್ ಭಯೋತ್ಪಾದಕರು ಮುಂಬೈಯ ಮೇಡಮ್ ಕಾಮಾ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಅಂಜಲಿ ಕಾಂತೆ ಎಂಬ ಸ್ಟಾಫ್ ನರ್ಸ್ ಮೊದಲ ಮಹಡಿಯ ವಾರ್ಡಿನಲ್ಲಿ ರಾತ್ರಿ ಪಾಳಿ ಮಾಡುತ್ತಿದ್ದರು. ಆವತ್ತು ರಾತ್ರಿ 20 ಗರ್ಭಿಣಿಯರು ಹೆರುವವರಿದ್ದರು. ಅಜ್ಮಾಲ್ ಕಸಾಬ್ ಮತ್ತು ಇನ್ನೊಬ್ಬ ಭಯೋತ್ಪಾದಕ ಇಬ್ಬರು ಗಾರ್ಡುಗಳಿಗೆ ಗುಂಡಿಕ್ಕಿ ಆಸ್ಪತ್ರೆಯ ಕಾಂಪೌಂಡಿನೊಳಗೆ ಬಂದರು. ಅವರು ಮೆಟ್ಟಿಲು ಹತ್ತಿ ಮೊದಲ ಮಹಡಿಗೆ ಬರುವುದು ಗೊತ್ತಾಗುತ್ತಿದ್ದಂತೆ ಅಂಜಲಿ ಕಾಂತೆ ತುಸುವೂ ವಿಚಲಿತರಾಗದೆ ಪರಿಸ್ಥಿತಿಯನ್ನು ಸಂಭಾಳಿಸಿದ ಪರಿ ವೀರೋದಾತ್ತವಾದುದು.
ಮೊದಲು ಅವರು ತನ್ನ ವಾರ್ಡಿನ ಬೃಹತ್ ಗಾತ್ರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿದರು. ನಂತರ, ಬಹಳ ಕಷ್ಟ ಪಟ್ಟು 20 ಗರ್ಭಿಣಿಯರು ಮತ್ತು ಅವರ ಜೊತೆಗಿದ್ದ ಸಂಬಂಧಿಕರನ್ನು ವಾರ್ಡಿನ ದೂರದ ಒಂದು ಸುರಕ್ಷಿತ ಮೂಲೆಗೆ ಸ್ಥಳಾಂತರಿಸಿದರು. ನಂತರ, ಡ್ಯೂಟಿ ಡಾಕ್ಟರಿಗೆ ಫೋನ್ ಮಾಡಿ ಪೋಲಿಸರಿಗೆ ದಾಳಿಯ ಸುದ್ದಿ ಮುಟ್ಟಿಸಲು ಹೇಳಿದರು.
ಸ್ವಲ್ಪ ಹೊತ್ತಿನಲ್ಲಿ ಟೆರೆಸ್ ಮೇಲೆ ಹತ್ತಿದ ಭಯೋತ್ಪಾದಕರು ಮತ್ತು ಕೆಳಗೆ ನೆರೆದ ಪೋಲಿಸರ ನಡುವೆ ಗುಂಡಿನ ಚಕಮಕಿ ನಡೆಯುವ ಶಬ್ದ ಕೇಳಿಸಲಾರಂಭಿಸಿತು. ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದ ಒಬ್ಬಳು ಗರ್ಭಿಣಿ ಆ ಗುಂಡಿನ ಸದ್ದಿಗೆ ಬೆದರಿ ನಡುಗಲು ಶುರು ಮಾಡಿ ಅವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಂಜಲಿ ಕಾಂತೆ ಅವಳನ್ನು ಹೆಚ್ಚು ಸದ್ದು ಮಾಡದೆ ಎರಡನೇ ಮಾಳಿಗೆಗೆ ಸ್ಥಳಾಂತರಿಸಿ, ನಿಶ್ಯಬ್ದವಾದ ಒಂದು ರೂಮಿನಲ್ಲಿ ಒಂದೇ ಒಂದು ಟ್ಯೂಬ್ ಲೈಟ್ ಉರಿಸಿ, ಇಬ್ಬರು ಡಾಕ್ಟರುಗಳ ಸಹಾಯದಿಂದ ಅವಳಿಗೆ ಹೆರಿಗೆ ಮಾಡಿಸಿದರು.
28 ರಂದು ದಾಳಿ ಮುಗಿಯಿತು. ಅಜ್ಮಲ್ ಕಸಾಬ್ ಜೀವಂತ ಹಿಡಿಯಲ್ಪಟ್ಟ. ಒಂದು ತಿಂಗಳ ನಂತರ ಕೋರ್ಟು ವಿಚಾರಣೆಯ ಸಮಯದಲ್ಲಿ ಅವನನ್ನು ಗುರುತಿಸಲು ಅಂಜಲಿ ಕಾಂತೆಯನ್ನು ಕರೆಯಿಸಿದಾಗ ಅವರು ಪ್ರಾರಂಭದಲ್ಲಿ ಹಿಂದೇಟು ಹಾಕಿದರೂ ನಂತರ ನರ್ಸ್ ಯೂನಿಫಾರ್ಮ್ ಧರಿಸಿ ಅವನನ್ನು ಗುರುತಿಸಿದರು. ‘ದಾಳಿಯ ಆ ರಾತ್ರಿ ತನಗೆ ಅಷ್ಟೊಂದು ಶಕ್ತಿ ಕೊಟ್ಟಿದ್ದೇ ನರ್ಸ್ ಯೂನಿಫಾರ್ಮ್. 20 ಜನ ಗರ್ಭಿಣಿಯರು, ಅಷ್ಟೇ ಸಂಖ್ಯೆಯ ಅವರ ಸಂಬಂಧಿಕರು ಮತ್ತು ಇನ್ನಷ್ಟೇ ಈ ಜಗತ್ತಿಗೆ ಬರಲಿರುವ ಅಷ್ಟೂ ಹೊಸ ಮೊಗ್ಗುಗಳ ಜೀವಗಳ ರಕ್ಷಣೆಯ ಜವಾಬ್ದಾರಿ ತನ್ನ ಮೇಲಿತ್ತು ಎಂಬುವುದನ್ನು ಆ ಯೂನಿ ಫಾರ್ಮ್ ತನಗೆ ಹೇಳುತ್ತಿತ್ತು ಮತ್ತು ಅದಕ್ಕೆ ಬೇಕಾದ ಶಕ್ತಿಯನ್ನು ಅದು ತನಗೆ ಕೊಡುತ್ತಿದ್ದುದರಿಂದಲೇ ತಾನು ಆವತ್ತು ಒಬ್ಬಳು ಸಾಮಾನ್ಯ ಹೆಂಗಸಿನಂತೆ ವರ್ತಿಸದಿರಲು ಸಾಧ್ಯವಾಯಿತು’ ಎಂದು ಕಾಂತೆ ಹೇಳುತ್ತಾರೆ.
ಇಂತಹವರೇ ಸಮಾಜದ ಅಸಲೀ ಹೀರೋಗಳು. ಆದರೆ, ಈ ಸಮಾಜ ಆರಾಧಿಸುವುದು ನೆನಪಿಸಿಕೊಳ್ಳುವುದು ಸಿನಿಮಾ ನಟನಟಿಯರು, ಕ್ರಿಕೆಟಿಗರು, ರಾಜಕಾರಣಿಗಳು ಇತ್ಯಾದಿ ನಕಲೀ ಹೀರೋಗಳನ್ನು. ಸಮಾಜದ ಈ ಸೋಗಲಾಡಿತನದಿಂದಾಗಿ ಅಂಜಲಿ ಕಾಂತೆ, ತನ್ನ ಜೀವವನ್ನು ಪಣಕ್ಕಿಟ್ಟು ಕಸಾಬ್ ನನ್ನು ಜೀವಂತ ಹಿಡಿದು ಕೊಟ್ಟ ಮುಂಬೈ ಪೋಲಿಸ್ ಕಾನ್ಸ್ಟೇಬಲ್ ಓಂಬ್ಳೆ ಅಂತಹವರ ಧೈರ್ಯ, ಸಾಹಸ, ತ್ಯಾಗ, ಬಲಿದಾನ ಗುರುತಿಸಲ್ಪಡದೇ ಹೋಗುತ್ತವೆ…
Please follow and like us:
error