fbpx

1,610 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು : ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ರಾಜ್ಯದ ಅನೇಕ ವಲಯದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಮೆ ಇಲ್ಲದೆ ನಷ್ಟವಾಗಿದ್ದು, ಈ ವರ್ಗದ ಜನರನ್ನು ಮತ್ತೆ ಆರ್ಥಿಕವಾಗಿ ಮುನ್ನೆಲೆಗೆ ತರುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಇಂದು ವಿಶೇಷ ಆರ್ಥಿಕ ಪ್ಯಾಕೇಜ್‌ ಬಿಡುಗಡೆ ಮಾಡಿದ್ದಾರೆ.

ಲಾಕ್ ಡೌನ್ ನಿಂದ ದೇವಾಲಯಗಳು ಮುಚ್ಚಿರುವುದರಿಂದ ಹಬ್ಬ, ಮದುವೆ, ಸಭೆ-ಸಮಾರಂಭಗಳು ಹಾಗೂ ಮತ್ತಿತರ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂವುಗಳ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದಿರುವ ಹೂವುಗಳನ್ನು ತಮ್ಮ ಹೊಲದಲ್ಲೇ  ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವುಗಳು ಬೆಳೆದಿರುವ ರೈತರಿಗೆ ನೆರವಾಗಲು ನಮ್ಮ ಸರ್ಕಾರವು ಹೆಕ್ಟೇರ್ ಗೆ ಗರಿಷ್ಠ 25,000 ರೂ.ಗಳಂತೆ ಪರಿಹಾರವನ್ನು ಘೋಷಿಸುತ್ತದೆ ಎಂದು ಸಿಎಂ ತಿಳಿಸಿದರು.

ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣುಗಳು ಇಳುವರಿಯು ಉತ್ತಮವಾಗಿರುತ್ತದೆ. ಆದರೆ ಕೋವಿಡ್ – 19 ರಿಂದ ಆಗಿರುವ ರಾಷ್ಟ್ರಾದ್ಯಂತ ಲಾಕ್ ಡೌನ್ ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ದರಗಳನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ನಷ್ಟಕ್ಕೆ ಒಳಗಾಗಿರುವ ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗುವುದು ಎಂದರು.

ಕೋವಿಡ್ 19 ರಿಂದಾಗಿ ರೈತರಷ್ಟೇ ಅಲ್ಲದೆ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗಸರ ಹಾಗೂ ಕ್ಷೌರಿಕರ ವೃತ್ತಿಯಲ್ಲಿ ತೊಡಗಿರುವವರು ಒಂದೂವರೆ ತಿಂಗಳಿಗೆ ಮೇಲ್ಪಟ್ಟು ತಮ್ಮ ಕಸುಬನ್ನು ನಡೆಸಲಾಗದೆ ತಮ್ಮ ದೈನಂದಿನ ಆದಾಯವನ್ನು ಕಳೆದು ಕೊಂಡಿರುತ್ತಾರೆ. ಇವರಿಗೆ ನೆರವಾಗಲು ನಮ್ಮ ರಾಜ್ಯದಲ್ಲಿರುವ ಅಂದಾಜು 60,000 ಅಗಸರ ವೃತ್ತಿಯಲ್ಲಿ ಇರುವ ಹಾಗೂ 2,30,000 ಕ್ಷೌರಿಕ ವೃತ್ತಿಯಲ್ಲಿ ಇರುವವರಿಗೆ 5000/- ರೂ.ಗಳನ್ನು ಒಂದು ಬಾರಿ ಪರಿಹಾರವಾಗಿ ನೀಡಲಾಗುವುದು. ಹಾಗೆಯೇ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೇ ತಮ್ಮ ಆದಾಯವನ್ನು ಕಳೆದು ಕೊಂಡಿರುತ್ತಾರೆ. ನಮ್ಮ ರಾಜ್ಯದಲ್ಲಿ ಇರುವ ಇಂತಹ 7,75,000 ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5000 ರೂ. ಗಳನ್ನು ನೀಡಲಾಗಿದೆ.

ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ತೆರೆಯಲಾಗಿದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟವನ್ನು ಅನುಭವಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಲು ಕೆಲವು ತಿಂಗಳ ಸಮಯ ಬೇಕಾಗಿರುವುದರಿಂದ ಇವರಿಗೆ ಸರಕಾರ ನೆರವು ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ   ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್ ಅನ್ನು  ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಲಾಗುವುದು. ಬೃಹತ್ ಕೈಗಾರಿಕೆಗಳಿಗೆ ಅವರು ವಿದ್ಯುತ್ ಇಲ್ಲಿನ ಫಿಕ್ಸ್ಡ್ ಚಾರ್ಜ್ ನ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೇ ಬಡ್ಡಿ ರಹಿತವಾಗಿ ಮುಂದೂಡಲಾಗುವುದು ಎಂದು ಸಿಎಂ ತಿಳಿಸಿದರು.

ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹ ರಿಯಾಯಿತಿಯನ್ನು ನೀಡುವುದು. ವಿಳಂಬ ಪಾವತಿಗಾಗಿ ವಿದ್ಯುತ್ ಬಿಲ್ಲಿನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸಲಾಗುವುದು. ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹಧನ ನೀಡಲಾಗುವುದು. ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ/ಭಾಗವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು. ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ 30.06.2020 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಇರುವುದು.

ಈಗಾಗಲೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದ ನೇಕಾರರಿಗೆ ಈ ಲಾಕ್ ಡೌನ್ ನಿಂದಾಗಿ ಮತ್ತಷ್ಟು ನಷ್ಟ ಉಂಟಾಗಿದ್ದು, ನೇಕಾರರಿಗೆ ನೆರವಾಗಲು 109 ಕೋಟಿ ರೂ.ಗಳ ವೆಚ್ಚದಲ್ಲಿ “ನೇಕಾರರ ಸಾಲ ಮನ್ನಾ ಯೋಜನೆ”ಯನ್ನು ಘೋಷಿಸಿದೆ. ಈ ಯೋಜನೆಗೆ ಈಗಾಗಲೇ ಹಿಂದಿನ ವರ್ಷ 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 80 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲಗಳು ದೊರಕಿಸಿಕೊಡಲು ಮಾಡಿಕೊಡಲಾಗುತ್ತದೆ ಎಂದು ಸಿಎಂ ತಿಳಿಸಿದರು.

ಇದಲ್ಲದೆ “ನೇಕಾರರ ಸಮ್ಮಾನ್ ಯೋಜನೆ” ಎಂಬ ಹೊಸ ಯೋಜನೆಯನ್ನು ಘೋಷಿಸಲಾಗುವುದು. ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ ಅಂದಾಜು 54,000 ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2000/- ರೂ.ಗಳಂತೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಈಗಾಗಲೇ 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ 2000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿರುತ್ತದೆ. ಇನ್ನುಳಿದ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರವರ ಬ್ಯಾಂಕ್ ಖಾತೆಯ ವಿವರಗಳು ದೊರೆತ ನಂತರ 2,000 ರೂ.ಗಳನ್ನು ವರ್ಗಾಯಿಸಲು ಕ್ರಮವಹಿಸಲಾಗುವುದು. ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ 2,000 ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಮೇಲ್ಕಂಡ ಎಲ್ಲ ಪರಿಹಾರ ಸೌಲಭ್ಯಗಳನ್ನು ಅಂದಾಜು 1610 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.

Please follow and like us:
error
error: Content is protected !!