14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು,  : ಡಿಸೆಂಬರ್‌ನಲ್ಲಿ ಅವಧಿ ಮುಕ್ತಾಯಗೊಳ್ಳುವ ಮಂಗಳೂರು ಮಹಾನಗರ ಪಾಲಿಕೆ, ಶಿವಮೊಗ್ಗ ಜಿಲ್ಲೆ ಜೋಗ್ ಕಾರ್ಗಲ್ ಪಟ್ಟಣ ಪಂಚಾಯತ್ ಹಾಗೂ ಬಳ್ಳಾರಿ ಕಂಪ್ಲಿ ಪುರಸಭೆ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯತ್ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನ.12 ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಎರಡು ಮಹಾನಗರ ಪಾಲಿಕೆಗಳು, 6 ನಗರಸಭೆಗಳು, 3 ಪುರಸಭೆಗಳು ಹಾಗೂ 3 ಪಟ್ಟಣ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಐದು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. 14 ನಗರ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13, 04,614 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಇಂದಿನಿಂದಲೇ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಅ.24 ರಂದು ಹೊರಡಿಸಲಿದ್ದು, ಅ.31ಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ. ನ.2ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.4ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.

ಅವಶ್ಯಕತೆಯಿದ್ದಲ್ಲಿ ನ.12 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ನ.13 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ನ.14 ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದೆ. ಅದೇ ದಿನವೇ ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಚುನಾವಣೆ ನಡೆಯುವ ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆ
ರಾಮನಗರ: ಕನಕಪುರ(ನಗರಸಭೆ), ಮಾಗಡಿ(ಪುರಸಭೆ)
ದಾವಣಗೆರೆ: ದಾವಣಗೆರೆ(ಮಹಾನಗರ ಪಾಲಿಕೆ)
ಕೋಲಾರ: ಕೋಲಾರ(ನಗರಸಭೆ), ಮುಳಬಾಗಿಲು(ನಗರಸಭೆ), ಕೆಜಿಎಫ್(ನಗರಸಭೆ)
ಚಿಕ್ಕಬಳ್ಳಾಪುರ: ಗೌರಿಬಿದನೂರು(ನಗರಸಭೆ), ಚಿಂತಾಮಣಿ(ನಗರಸಭೆ)
ಶಿವಮೊಗ್ಗ: ಜೋಗ ಕಾರ್ಗಲ್(ಪಟ್ಟಣ ಪಂಚಾಯತ್)
ಚಿಕ್ಕಮಗಳೂರು: ಬೀರೂರು(ಪುರಸಭೆ)
ದಕ್ಷಿಣ ಕನ್ನಡ: ಮಂಗಳೂರು(ಮಹಾನಗರ ಪಾಲಿಕೆ)
ಧಾರವಾಡ: ಕುಂದಗೋಳ(ಪಟ್ಟಣ ಪಂಚಾಯತ್)
ಬಳ್ಳಾರಿ: ಕಂಪ್ಲಿ(ಪುರಸಭೆ), ಕೂಡ್ಲಗಿ(ಪಟ್ಟಣ ಪಂಚಾಯತ್)

ಉಪ ಚುನಾವಣೆ: ಹೊಳೆನರಸೀಪುರ ಪುರಸಭೆ ವಾರ್ಡ್ ನಂ.4, ಕೊಳ್ಳೆಗಾಲ ನಗರಸಭೆ ವಾರ್ಡ್ ನಂ.19, ಚಡಚಣ ಪಟ್ಟಣ ಪಂಚಾಯತ್ ವಾರ್ಡ್ ನಂ.5, ಮಹಾಲಿಂಗಪುರ ಪುರಸಭೆ ವಾರ್ಡ್ ನಂ.17, ಚಿತ್ತಾಪುರ ಪುರಸಭೆ ವಾರ್ಡ್ ನಂ.10ರಲ್ಲಿ ಸದಸ್ಯರ ನಿಧನದಿಂದ ಉಪ ಚುನಾವಣೆ ನಡೆಯುತ್ತಿದೆ.

Please follow and like us:
error