​ರಸ್ತೆಮಧ್ಯದಲ್ಲೇ ಶವಪರೀಕ್ಷೆ ನೆರವೇರಿಸಿದ ವೈದ್ಯ ಮಹಾಶಯ

ಬರ್ಮಾರ್ (ರಾಜಸ್ಥಾನ), ಸೆ. 28: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು, ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವಪರೀಕ್ಷೆಯನ್ನು ರಸ್ತೆ ಮಧ್ಯದಲ್ಲೇ ನೆರವೇರಿಸಿದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 

100 ಕಿಲೋಮೀಟರ್ ಅಂತರದಲ್ಲಿ ಯಾವುದೇ ಶವಾಗಾರ ಇಲ್ಲ ಎಂಬ ಕಾರಣಕ್ಕೆ ಕುಟುಂಬದವರು ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಮಾನವೀಯತೆ ಆಧಾರದಲ್ಲಿ ವೈದ್ಯ ಈ ಕ್ರಮ ಕೈಗೊಂಡಿದ್ದಾರೆ ಎನ್ನುವುದು ಅಧಿಕಾರಿಗಳ ಸಮರ್ಥನೆ.

ಬರ್ಮಾರ್‌ನ ಗದರ ರಸ್ತೆಯ ನಿವಾಸಿಯಾಗಿದ್ದ ಮಾಯಾ ಕನ್ವರ್ (30) ಎಂಬ ಮಹಿಳೆಗೆ ಮನೆ ಮೇಲಿನ ತಂತಿಯಲ್ಲಿ ಬಟ್ಟೆ ಒಣಗಲು ಹಾಕುವ ವೇಳೆ ವಿದ್ಯುತ್‌ ಸ್ಪರ್ಶವಾಗಿದೆ. ಆಕೆಯ ಚೀರಾಟ ಕೇಳಿ ಅತ್ತೆ ರಾಜಾದೇವಿ ಮತ್ತು ಮಾವ ಪದಮ್‌ಸಿಂಗ್ ಧಾವಿಸಿ, ನೆರವಿಗೆ ಮುಂದಾದರು. ಅವರಿಗೂ ಶಾಕ್ ಹೊಡೆದಿದೆ. ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಆ ವೇಳೆಗೆ ಇಬ್ಬರೂ ಮಹಿಳೆಯರು ಮೃತಪಟ್ಟಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಬಳಿಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ, ಕೇಂದ್ರದ ಹೊರಗೆ ಮರಣೋತ್ತರ ಪರೀಕ್ಷೆ ನಡೆಸಿದರು. 100 ಕಿಲೋಮೀಟರ್ ದೂರದಲ್ಲಿ ಯಾವುದೇ ಶವಾಗಾರ ಇಲ್ಲ ಎಂಬ ಕಾರಣಕ್ಕೆ ಕುಟುಂಬ ಸದಸ್ಯರು ಹಾಗೂ ಪೊಲೀಸರ ಮನವಿ ಮೇರೆಗೆ ಆರೋಗ್ಯ ಕೇಂದ್ರದ ಹೊರಗೆ ಮರಣೋತ್ತರ ಪರೀಕ್ಷೆ ನಡೆಸಬೇಕಾಯಿತು ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಕಮಲೇಶ್ ಚೌಧರಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಶಿಷ್ಟಾಚಾರ ಪಾಲಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

“ಇದು ಸಮರ್ಥನೀಯವಲ್ಲ; ಇಂಥ ಘಟನೆ ಇದೇ ಮೊದಲಲ್ಲ. ವೈದ್ಯ ಪ್ರತಿ ಬಾರಿಯೂ ಹೀಗೆಯೇ ಮಾಡುತ್ತಾರೆ” ಎಂದು ಸ್ಥಳೀಯ ನಿವಾಸಿ ಮನುರಾಮ್ ಮೇಘ್ವಾಲ್ ಹೇಳಿದ್ದಾರೆ. ವೈದ್ಯರ ಕ್ರಮವನ್ನು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ವೈದ್ಯರು ತಮ್ಮ ನಿರ್ಲಕ್ಷ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
error