​ದುಬಾರಿಯಾಗಲಿದೆ Airtel, Vodafone, Idea ಕಂಪನಿಗಳ ಮೊಬೈಲ್ ಸೇವೆ

ಹೊಸದಿಲ್ಲಿ: ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ದೂರಸಂಪರ್ಕ ಸೇವಾ ಕಂಪನಿಗಳು ಡಿಸೆಂಬರ್ ಒಂದರಿಂದ ದರ ಹೆಚ್ಚಳವನ್ನು ಘೋಷಿಸಿವೆ.

ಪ್ರಸ್ತುತ ಬೆಲೆ ಕಾರ್ಯಸಾಧುವಲ್ಲ; ಆದ್ದರಿಂದ ಸೂಕ್ತ ದರ ಪರಿಷ್ಕರಣೆಯನ್ನು ಮುಂದಿನ ತಿಂಗಳಿನಿಂದ ಮಾಡಲಾಗುತ್ತಿದೆ. ನಿರ್ದಿಷ್ಟ ಬೆಲೆ ಹೆಚ್ಚಳವನ್ನು ಬಳಿಕ ಪ್ರಕಟಿಸಲಾಗುತ್ತದೆ ಎಂದು ಎರಡೂ ಕಂಪನಿಗಳು ಹೇಳಿವೆ.

“ಮೊಬೈಲ್ ಡಾಟಾ ಸೇವಾಕ್ಷೇತ್ರ ಕ್ಷಿಪ್ರವಾಗಿ ಬೆಳೆಯುತ್ತಿದ್ದರೂ, ಮೊಬೈಲ್ ಡಾಟಾ ಶುಲ್ಕ ಭಾರತದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಅಗ್ಗ” ಎಂದು ವೊಡಾಫೋನ್ ಐಡಿಯಾ ಹೇಳಿದೆ. ದೂರಸಂಪರ್ಕ ಕ್ಷೇತ್ರದ ಹಣಕಾಸು ಬಿಕ್ಕಟ್ಟನ್ನು ಎಲ್ಲ ಹಕ್ಕುದಾರರೂ ಅರಿತಿದ್ದಾರೆ ಎಂದು ಸ್ಪಷ್ಟಪಡಿಸಿದೆ.

“ಭಾರತದ ಮೊಬೈಲ್ ಕ್ಷೇತ್ರದ ಬೆಲೆನಿಗದಿಯಲ್ಲಿ ತಾರ್ಕಿಕತೆಯನ್ನು ತರುವ ನಿಟ್ಟಿನಲ್ಲಿ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಶೀಘ್ರದಲ್ಲೇ ಎಲ್ಲ ಕಂಪನಿಗಳ ಜತೆ ಸಂವಾದ ನಡೆಸಲಿದೆ ಎಂದು ತಿಳಿದುಬಂದಿದೆ. ಕಾರ್ಯಸಾಧುವಲ್ಲದ ದರದಲ್ಲಿ ಪ್ರಸ್ತುತ ಈ ಕಂಪನಿಗಳು ಸೇವೆ ಒದಗಿಸುತ್ತಿವೆ” ಎಂದು ಏರ್‌ಟೆಲ್ ಪ್ರತ್ಯೇಕ ಪ್ರಕಟಣೆಯಲ್ಲಿ ವಿವರಿಸಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗಳಾಗುತ್ತಿರುವುದರಿಂದ ಈ ವಲಯ ಬಂಡವಾಳ ಸಾಂದ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ. ನಿರಂತರ ಹೂಡಿಕೆ ಅಗತ್ಯವಾಗಿದೆ. ಆದ್ದರಿಂದ ಡಿಜಿಟಲ್ ಇಂಡಿಯಾ ಗುರಿಗೆ ಬೆಂಬಲವಾಗಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾದರೆ, ಆರ್ಥಿಕ ದೃಢತೆ ಹೊಂದುವುದು ಅಗತ್ಯ” ಎಂದು ಹೇಳಿದೆ.

ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಎರಡೂ ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿರುವ ಮಧ್ಯೆಯೇ ದರ ಹೆಚ್ಚಳಕ್ಕೆ ಮುಂದಾಗಿವೆ. ವೊಡಾಫೋನ್ ಐಡಿಯಾ ಈ ಅವಧಿಯಲ್ಲಿ 50,922 ಕೋಟಿ ರೂ. ನಷ್ಟ ಅನುಭವಿಸಿದ್ದರೆ, ಏರ್‌ಟೆಲ್ 23,045 ಕೋಟಿ ರೂಪಾಯಿ ನಷ್ಟದಲ್ಲಿದೆ.

Please follow and like us:
error