​ಕೊರೋನಾ ವೈರಸ್ : ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಕಾಯ್ದಿರಿಸಲು ಸೂಚನೆ

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಸಮರಕ್ಕೆ ಸಜ್ಜಾಗಿರುವ ಭಾರತ ಸರ್ಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಕೊರೋನಾ ಚಿಕಿತ್ಸೆಗೆ ಬೆಡ್ ಕಾಯ್ದಿರಿಸುವಂತೆ ಸೂಚನೆ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆದೇಶ ಹೊರಡಿಸಿದೆ.

ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳಲ್ಲಿ ಕೊರೋನಾ ವೈರಸ್ ಪರೀಕ್ಷೆ ನಡೆಸಲು ಹಾಗೂ ಧನಾತ್ಮಕ ಪ್ರಕರಣಗಳನ್ನು ವರದಿ ಮಾಡಲು ಕೂಡಾ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೊರೋನಾ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಮತ್ತು ಮೃತಪಟ್ಟ ವ್ಯಕ್ತಿಗಳ ಶವ ನಿರ್ವಹಿಸಲು ಶಿಷ್ಟಾಚಾರ ಬಗ್ಗೆ ಕೂಡಾ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಿದೆ. ಖಾಸಗಿ ಪ್ರಯೋಗಾಲಯಗಳನ್ನು ಕೂಡಾ ಕೊರೋನಾ ಪರೀಕ್ಷಾ ಜಾಲಕ್ಕೆ ಸೇರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡಿದೆ.

ಸೋಂಕು ಹರಡುವ ಅಪಾಯ ತಡೆ ನಿಟ್ಟಿನಲ್ಲಿ ಖಾಸಗಿ ಪ್ರಯೋಗಾಲಯಗಳು ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಮನೆಬಾಗಿಲಲ್ಲೇ ಸಂಗ್ರಹಿಸಲು ಸೂಚಿಸಲಾಗಿದೆ. ಮಾದರಿ ಸಂಗ್ರಹದ ವೇಳೆ ಕೂಡಾ ಸೂಕ್ತವಾದ ಜೈವಿಕ ಸುರಕ್ಷೆ ಮತ್ತು ಜೈವಿಕ ಭದ್ರತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಪರ್ಯಾಯವಾಗಿ ರೋಗಕ್ಕೆ ನಿರ್ದಿಷ್ಟವಾಗಿ ಪ್ರತ್ಯೇಕ ಸಂಗ್ರಹ ಸ್ಥಳಗಳನ್ನು ಸೃಷ್ಟಿಸುವಂತೆಯೂ ಮಾರ್ಗಸೂಚಿಯಲ್ಲಿ ಸಲಹೆ ಮಾಡಲಾಗಿದೆ. ಈ ಮಾನ್ಯತಾ ಪ್ರಕ್ರಿಯೆ ಮುಗಿದ ಬಳಿಕ ಖಾಸಗಿ ಪ್ರಯೋಗಾಲಯಗಳು ಬಹುಶಃ ಮುಂದಿನ ವಾರದಿಂದ ಕೊರೋನಾ ಪರೀಕ್ಷೆ ಆರಂಭಿಸಬಹುದಾಗಿದೆ.

ಎಲ್ಲ ಪ್ರಯೋಗಾಲಯಗಳು ಕೊರೋನಾ ಪರೀಕ್ಷೆಯನ್ನು ಉಚಿತವಾಗಿ ಮಡುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮನವಿ ಮಾಡಿದೆ. ಈ ಸಾಂಕ್ರಾಮಿಕವನ್ನು ತಡೆಗಟ್ಟಲು ಇಂಥ ಪ್ರಯೋಗಾಲಯಗಳ ನೆರವು ದೇಶಕ್ಕಿದೆ ಎಂದು ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಮೀಸಲಿರಿಸುವ ಬೆಡ್‌ಗಳಿಗೆ ಹಾಗೂ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳ ಜತೆ ಮಾತುಕತೆ ನಡೆಸುತ್ತಿದೆ.

ದೇಶದಲ್ಲಿ 137 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಮೂರು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ರಾಜ್ಯಗಳಿಂದ ಬಂದ ವರದಿಯನ್ನು ಪರಾಮರ್ಶಿಸಿದಾಗ ದೇಶದಲ್ಲಿ ಸೋಂಕಿತರ ಸಂಖ್ಯೆ 143 ಆಗುತ್ತದೆ.

Please follow and like us:
error