​ಅಸ್ಸಾಂ: ಬಿಜೆಪಿ-ಎಜಿಪಿ ಸರ್ಕಾರದಲ್ಲಿ ಒಡಕು

ಗುವಾಹತಿ,  : ಪೌರತ್ವ ತಿದ್ದುಪಡಿ ಮಸೂದೆ ಸಂಸತ್ತಿನ ಒಪ್ಪಿಗೆ ಪಡೆದ ಬೆನ್ನಲ್ಲೇ ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅಸ್ಸಾಂ ಗಣ ಪರಿಷತ್‌(ಎಜಿಪಿ) ನ ಹಲವು ಮಂದಿ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಸರ್ಕಾರದಲ್ಲಿ ಗಂಭೀರ ಒಡಕು ಕಾಣಿಸಿಕೊಂಡಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡಲು ಅವಕಾಶ ಮಾಡಿಕೊಡುವ ಹೊಸ ಕಾನೂನಿಗೆ ವಿರುದ್ಧವಾಗಿ ಇರುವ ಅಸ್ಸಾಂ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಭೂಯಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. “ಪರಿಷ್ಕೃತ ಪೌರತ್ವ ಕಾಯ್ದೆ ಅಸ್ಸಾಂ ಜನತೆಗೆ ವಿರುದ್ಧವಾಗಿದ್ದು, ಇದನ್ನು ವಿರೋಧಿಸಿ ನಾನು ಹುದ್ದೆ ತ್ಯಜಿಸುತ್ತಿದ್ದೇನೆ. ಈ ಕಾಯ್ದೆ ವಿರೋಧಿ ಹೋರಾಟದಲ್ಲಿ ನಾನು ಭಾಗವಹಿಸುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಜನಪ್ರಿಯ ಅಸ್ಸಾಮಿ ನಟ ಜತಿನ್ ಬೋರಾ ಅವರು ರಾಜ್ಯ ಚಲನಚಿತ್ರ ಹಣಕಾಸು ಮತ್ತು ಅಭಿವೃದ್ಧಿ ನಿಗಮಕ್ಕೆ ರಾಜೀನಾಮೆ ನೀಡಿದ್ದು, ಮತ್ತೊಬ್ಬ ಹಿರಿಯ ಬಿಜೆಪಿ ಮುಖಂಡ ರವಿ ಶರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕ ಧುಮುಕಿದ್ದಾರೆ. “ನಾನು ಇಂದು ಏನಾಗಿದ್ದೇನೆಯೋ ಅದು ಅಸ್ಸಾಂ ಜನತೆಯಿಂದಾಗಿ. ನನ್ನ ಹುದ್ದೆಗೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಜನರ ಜತೆ ಇರುತ್ತೇನೆ” ಎಂದು ಬೋರಾ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಮಾಜಿ ಸ್ಪೀಕರ್ ಪುಲಕೇಶ್ ಬರೂವಾ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಜಾಮಗುರಿಹಾತ್ ಶಾಸಕ ಪದ್ಮಾ ಹಜಾರಿಕಾ ಕೂಡಾ ಶಾಸಕತ್ವ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಸ್ಸಾಂ ಸ್ಪೀಕರ್ ಹಿತೇಂದ್ರನಾಥ್ ಗೋಸ್ವಾಮಿಯವರು ಕೂಡಾ ಬ್ರಹ್ಮಪುತ್ರಾ ಕಣಿವಯಲ್ಲಿ ಹೊಸ ಕಾಯ್ದೆ ಜಾರಿಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

Please follow and like us:
error