೭.೫ ಎಸ್.ಟಿ. ಮೀಸಲಾತಿ ಹೋರಾಟ – ವಾಲ್ಮೀಕಿ ಮಹಾಸಭಾ ಧರಣಿ ೨ನೇ ದಿನಕ್ಕೆ


ಕೊಪ್ಪಳ, ಅ. ೨೨: ಪರಿಶಿಷ್ಟ ಪಂಗಡಕ್ಕೆ ಶೇ. ೭.೫ ಮೀಸಲು ನೀಡಲು ಮೀನಾಮೇಶ ಎಣಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮತ್ತು ಶೀಘ್ರ ಮೀಸಲು ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಜಿಲ್ಲಾಡಳಿತ ಭವನದ ಮುಂದುಗಡೆ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಮ್ಮಿಕೊಂಡಿರುವ ಹತ್ತು ದಿನಗಳ ಪ್ರತಿಭಟನಾ ಧರಣಿಯಲ್ಲಿ ಜಿಲ್ಲಾ ಮುಖಂಡರ ಜೊತೆಗೂಡಿ ಇಂದು ಓಜಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು. ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. ೭.೫ ಮೀಸಲು ಕೊಡುವದು ಸಂವಿಧಾನಬದ್ಧವಾಗಿದೆ ಆದರೆ ಆಸಕ್ತಿ ಇಲ್ಲ ಎಂದು ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್ ಕೊಪ್ಪಳ ವಿಷಾಧಿಸಿದರು.
ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಮುಂದಿನ ೯ ದಿನಗಳ ಹೋರಾಟವನ್ನು ಇನ್ನಷ್ಟು ವಿನೂತನವಾಗಿ ಹಮ್ಮಿಕೊಂಡು ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಲು ನಿರ್ಧರಿಸಿದ್ದು, ವಿಭಿನ್ನ ಹೋರಾಟಕ್ಕೆ ಕರೆ ನೀಡಿದರು. ಮನುಷ್ಯತ್ವ ಇರುವ ನಾಯಕನಿಗೆ ಜನರು ಹೋರಾಡಬೇಕಾದ ಅನಿವಾರ್ಯತೆಯೇ ಬರುವದಿಲ್ಲ, ಅದೇನಿದ್ದರೂ ದಪ್ಪ ಚರ್ಮದ ಕೊಳಕು ರಾಜಕಾರಣಿಗಳಿಗೆ ಮಾತ್ರ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ, ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಪಟ್ಟಣ ಪಂಚಾಯತಿ ಸದಸ್ಯ ರುಕ್ಮಣ್ಣ ಶಾವಿ, ಹನುಮಂತಪ್ಪ ಗುದಗಿ, ರಾಮಣ್ಣ ಚೌಡಕಿ ಚಿಲವಾಡಗಿ, ವೀರಪ್ಪ ವಾಸ್ತೆನೂರ ಕವಲೂರ, ಬಸವರಾಜ ಶಹಪೂರ, ಮುದಿಯಪ್ಪ ತಿಗರಿ, ನಾಗರಾಜ ಕಿಡದಾಳ, ಗವಿಸಿದ್ದಪ್ಪ ಶಹಪೂರ, ವಿರುಪಾಕ್ಷಗೌಡ್ರು ಗಂಗನಾಳ, ರಾಮಣ್ಣ, ಗಸಿದ್ದಪ್ಪ, ಧರ್ಮಣ್ಣ ಹಟ್ಟಿ, ಯಮನೂರಪ್ಪ ವಕೀಲ, ನಿಂಗಪ್ಪ ಚಾಕರಿ, ಗೋವಿಂದಪ್ಪ ಬಂಡಿ, ಮಹದೇವಪ್ಪ ಕುಣಿಕೇರಿ ಇತರರು ಇದ್ದರು.

Please follow and like us:
error