ಹೋರಾಟನಿರತ ರೈತರು ಬಿರಿಯಾನಿ ತಿನ್ನುವ ಮೂಲಕ ಇಡೀ ದೇಶಕ್ಕೆ ಹಕ್ಕಿ ಜ್ವರ ಹರಡುತ್ತಿದ್ದಾರೆ- ಬಿಜೆಪಿ ಶಾಸಕ ಮದನ್

 

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಕಳೆದ 45 ದಿನಗಳಿಂದ ದೆಹಲಿಯ ಕೊರೆಯುವ ಚಳಿಯಲ್ಲಿ, ಮಳೆಯಲ್ಲಿ ರೈತರು ಹೋರಾಡುತ್ತಿದ್ದಾರೆ. ರೈತ ಮುಖಂಡರೊಂದಿಗೆ ಒಂದು ಕಡೆ ಮಾತುಕತೆ ನಡೆಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಮತ್ತೊಂದು ಕಡೆ ರೈತರನ್ನು ಹೀಯಾಳಿಸುವ ಬುದ್ದಿ ಬಿಟ್ಟಿಲ್ಲ. ರಾಜಸ್ಥಾನದ ರಾಮ್‌ಗಂಜ್‌ ಮಂಡಿ ಕ್ಷೇತ್ರದ ಬಿಜೆಪಿ ಶಾಸಕ ಮದನ್ ದಿಲಾವರ್ “ಹೋರಾಟನಿರತ ರೈತರು ಬಿರಿಯಾನಿ ತಿನ್ನುವ ಮೂಲಕ ಇಡೀ ದೇಶಕ್ಕೆ ಹಕ್ಕಿ ಜ್ವರ ಹರಡುತ್ತಿದ್ದಾರೆ” ಎನ್ನುವ ಮೂಲಕ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ.

 

ಈ ರೀತಿಯ ಹೋರಾಟ ಮಾಡುವ ಮೂಲಕ ದೇಶದಲ್ಲಿ ಪಿತೂರಿ ಮಾಡುತ್ತಿರುವ ಭಯೋತ್ಪಾದಕರು, ದರೋಡೆಕೋರರು, ಕಳ್ಳರು ಎಂದು ಬಿಜೆಪಿ ಶಾಸಕ ಆಧಾರ ರಹಿತ ಆರೋಪ ಮಾಡಿದ್ದಾರೆ. ಇವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರತಿಭಟನಾ ನಿರತ ರೈತರು ದೇಶ ಅಥವಾ ದೇಶದ ರೈತರ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಪ್ರತಿಭಟನೆ ಅವರಿಗೆ ಕೇವಲ ಪಿಕ್ನಿಕ್ ಮಾತ್ರ. ಮುಂದಿನ ಕೆಲವು ದಿನಗಳಲ್ಲಿ ಸರ್ಕಾರವು ಮನವೊಲಿಸುವ ಮೂಲಕ ಅಥವಾ ಬಲವಂತದ ಮೂಲಕ ಅವರನ್ನು ಹಾಕದಿದ್ದರೆ, ದೇಶವು ಪಕ್ಷಿ ಜ್ವರ ಸಮಸ್ಯೆಯನ್ನು ಎದುರಿಸಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ದಿಲಾವರ್ ಹೇಳಿದ್ದಾರೆ.

ಬಿಜೆಪಿ ಶಾಸಕರ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ರಾಜಸ್ಥಾನ್ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಾಸ್ರಾ ಮಾತನಾಡಿ “ದೇಶಕ್ಕೆ ಅನ್ನ ನೀಡುವ ರೈತರು ಹಕ್ಕಿ ಜ್ವರ ಹಬ್ಬಿಸಲು ಹೇಗೆ ಕಾರಣರಾಗುತ್ತಾರೆ? ಬಿಜೆಪಿ ಶಾಸಕರ ಹೇಳಿಕೆ ರೈತರ ಕುರಿತು ಬಿಜೆಪಿ ಮನಸ್ಥಿತಿಯನ್ನು ತಿಳಿಸುತ್ತದೆ” ಎಂದು ಕಿಡಿಕಾರಿದ್ದಾರೆ.

ಈ ಮುಂಚೆಯು ಸಹ ಬಿಜೆಪಿ ಮುಖಂಡರು ಹೋರಾಟನಿರತ ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು ಎಂದೆಲ್ಲಾ ಟೀಕಿಸಿದ್ದರು. ಒಂದು ಕಡೆ ಟೀಕಿಸುವುದು, ಮತ್ತೊಂದು ಕಡೆ ರೈತರೊಡನೆ ಮಾತುಕತೆ ನಡೆಸುವುದು, ಅವರು ಕೊಟ್ಟ ಊಟ ಮಾಡುವುದು ಇದು ಬಿಜೆಪಿಯ ಇಬ್ಬಂದಿತನವಲ್ಲವೇ ಎಂಬ ತೀವ್ರ ಟೀಕೆ ವ್ಯಕ್ತವಾಗಿತ್ತು.

 

Please follow and like us:
error