ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ಎಲ್ಲಾ ಕೇಸುಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ನಕ್ಸಲ್ ಆರೋಪದಲ್ಲಿ ಕಳೆದ ವರ್ಷ ಅಕ್ಟೋಬರ್ 24 ರಂದು ಬಂಧಿತರಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಹೋರಾಟಗಾರ, ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿರುದ್ಧದ ಎಲ್ಲಾ ಕೇಸುಗಳನ್ನು ರಾಯಚೂರು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿನೋದ ಎಂಬ ಹೆಸರಿನ ನಕ್ಸಲ್ ಎಂದು ಆರೋಪಿಸಿದ್ದ ರಾಯಚೂರು ಪೊಲೀಸರು 1994ರ ರಾಯಚೂರು ಗ್ರಾಮೀಣ (ಯಾಪಲದಿನ್ನಿ) ಪೊಲೀಸ್ ಠಾಣೆಯಲ್ಲಿ ಮೂರು ಕೇಸುಗಳನ್ನು, ರಾಯಚೂರು ನೇತಾಜಿ ನಗರ ಠಾಣೆಯಲ್ಲಿ ದಾಖಲಾಗಿದ್ದ 25 ವರ್ಷಗಳಷ್ಟು ಹಿಂದಿನ ಪ್ರಕರಣದ ಆಧಾರದಲ್ಲಿ ಬಂಧಿಸಿದ್ದರು. ಕಲಂ 143, 147, 148, 307, 355, 385, 120(ಬಿ) 124(ಎ) ಸೇರಿದಂತೆ ಸುಮಾರು 21 ಸೆಕ್ಷನ್ ಗಳನ್ನು ಹಾಕಿದ್ದಲ್ಲದೇ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಆರೋಪಿಸಿದ್ದರು.

ಅಕ್ಟೋಬರ್ 24ರ ಗುರುವಾರ ರಾಯಚೂರಿನಲ್ಲಿ ನಡೆದ ಗೌರಿಲಂಕೇಶ್ ಬಳಗದ ವಿಚಾರಸಂಕಿರಣದಲ್ಲಿ ಭಾಗವಹಿಸಿದ ನಂತರ ದೊಡ್ಡಿಪಾಳ್ಯರವರನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮತ್ತು ಡಿವೈಎಸ್ಪಿ ಶೀಲವಂತರ್ ಸೇರಿದಂತೆ ಹಲವು ಪೊಲೀಸರು ಒಂದು ದಿನಗಳ ಕಾಲ ಸತತ ವಿಚಾರಣೆ ನಡೆಸಿದ್ದರು. ಆದರೆ ಅವರ ಮೇಲಿನ ಎಲ್ಲಾ ಆರೋಪಗಳನ್ನು ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು ನಿರಾಕರಿಸಿದ್ದರು.

ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಬಂಧನಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಅವರ ಬಿಡುಗಡೆಗೆ ಒತ್ತಾಯಿಸಿ ಹಲವು ಗಣ್ಯರು ದನಿಯೆತ್ತಿದ್ದರು.

ಸುಮಾರು 77 ದಿನಗಳ ಕಾಲ ರಾಯಚೂರು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಬಂಧಿಯಾಗಿದ್ದ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರು 2020ರ ಜನವರಿಲ್ಲಿ ಜಾಮೀನು ಪಡೆದು ಹೊರಬಂದಿದ್ದರು. ನಂತರದ ವಿಚಾರಣೆಯಲ್ಲಿ ಅವರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದ ಕಾರಣ ಅವರನ್ನು ವಿನೋದ್ ಎಂದು ಅಭಿಪ್ರಾಯಪಡುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ನಿರ್ದೋಷಿ ಎಂದು ಘೋಷಿಸಿದ ನ್ಯಾಯಾಲಯ ಅವರ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಖುಲಾಸೆಗೊಳಿಸಿದೆ.

courtesy : naanugouri

Please follow and like us:
error