ಹೊಸದಿಲ್ಲಿ, ಲಂಡನ್‌ನಲ್ಲೂ ಭಯೋತ್ಪಾದನೆಗೆ ಸುಲೈಮಾನಿಯಿಂದ ಸಂಚು: ಟ್ರಂಪ್

ಲಾಸ್ ಏಂಜಲಿಸ್ (ಅಮೆರಿಕ), ಜ. 4: ವಾಯು ದಾಳಿಯ ಮೂಲಕ ಇರಾನ್‌ನ ಉನ್ನತ ಸೇನಾಧಿಕಾರಿಯೊಬ್ಬರ ಹತ್ಯೆ ಮಾಡಿರುವುದನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರೊಂದಿಗೆ ‘ಭಯೋತ್ಪಾದನೆಯ ಮೂಲ’ವೊಂದು ಕೊನೆಗೊಂಡಿದೆ ಎಂದು ಹೇಳಿದ್ದಾರೆ. ಹೊಸದಿಲ್ಲಿ ಮತ್ತು ಲಂಡನ್‌ನಂಥ ದೂರದ ಸ್ಥಳಗಳಲ್ಲೂ ಭಯೋತ್ಪಾದನೆ ನಡೆಸುವುದಕ್ಕಾಗಿ ಅವರು ದೇಣಿಗೆ ನೀಡಿದ್ದರು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಇರಾಕ್ ರಾಜಧಾನಿ ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕವು ಶುಕ್ರವಾರ ಮುಂಜಾನೆ ನಡೆಸಿದ ವಾಯು ದಾಳಿಯಲ್ಲಿ ಇರಾನ್‌ನ ಅಲ್-ಖುದ್ಸ್ ಪಡೆಯ ಮುಖ್ಯಸ್ಥ ಜನರಲ್ ಸುಲೈಮಾನಿ ಸೇರಿದಂತೆ ಇರಾನ್ ಮತ್ತು ಇರಾಕ್‌ನ ಹಲವು ಸೇನಾಧಿಕಾರಿಗಳು ಹತರಾಗಿದ್ದಾರೆ. ಇರಾಕ್‌ನ ಪ್ರಭಾವಿ ಅರೆ ಸೇನಾ ಪಡೆ ಹಾಶಿದ್ ಅಲ್-ಶಾಬಿ ಮುಖ್ಯಸ್ಥನೂ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ.

‘‘ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಇತ್ತೀಚಿನ ದಿನಗಳಲ್ಲಿ ಹಲವು ದಾಳಿಗಳನ್ನು ನಡೆಸಲಾಗಿದೆ. ಈ ಪೈಕಿ ರಾಕೆಟ್ ದಾಳಿಯೊಂದರಲ್ಲಿ ಓರ್ವ ಅಮೆರಿಕ ನಾಗರಿಕ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಅಮೆರಿಕ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೂ ಅಲ್ಲದೆ, ಇತ್ತೀಚೆಗೆ ಬಗ್ದಾದ್‌ ನಲ್ಲಿರುವ ನಮ್ಮ ರಾಯಭಾರ ಕಚೇರಿಯ ಆವರಣದಲ್ಲಿ ಹಿಂಸಾತ್ಮಕ ಮುತ್ತಿಗೆ ಹಾಕಲಾಗಿದೆ. ಇವುಗಳೆಲ್ಲವನ್ನೂ ಸುಲೈಮಾನಿಯ ನಿರ್ದೇಶನದಂತೆ ಮಾಡಲಾಗಿದೆ’’ ಎಂದು ಫ್ಲೋರಿಡದ ಮಾರ್-ಅ-ಲಾಗೊ ರಿಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ಅಮಾಯಕರನ್ನು ಕೊಲ್ಲುವುದನ್ನು ಸುಲೈಮಾನಿ ತನ್ನ ಹವ್ಯಾಸವಾಗಿ ಮಾಡಿಕೊಂಡಿದ್ದರು. ಲಂಡನ್ ಮತ್ತು ಹೊಸದಿಲ್ಲಿ ಮುಂತಾದ ದೂರದ ಸ್ಥಳಗಳಲ್ಲೂ ಅವರು ಭಯೋತ್ಪಾದನೆಗೆ ಪಿತೂರಿಗಳನ್ನು ಹೂಡಿದ್ದಾರೆ. ಇಂದು ನಾವು ಸುಲೈಮಾನಿಯ ಹಲವು ದೌರ್ಜನ್ಯಗಳ ಬಲಿಪಶುಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರ ಭಯೋತ್ಪಾದನೆಯ ಅವಧಿಯೊಂದು ಮುಗಿದಿರುವುದಕ್ಕೆ ನಾವು ಸಂತೋಷ ಪಡುತ್ತೇವೆ’’ ಎಂದರು.

Please follow and like us:
error