ಹೈದರಾಬಾದ್: ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟುಕೊಂದ ದುಷ್ಕರ್ಮಿಗಳು

ಹೈದರಾಬಾದ್, ನ.29: ಗಾಚಿಬೌಲಿಯಿಂದ ಶಂಶಾಬಾದ್‌ನಲ್ಲಿರುವ ತನ್ನ ಮನೆಗೆ ವಾಪಸಾಗುತ್ತಿದ್ದ 27ರ ಹರೆಯದ ಸರಕಾರಿ ಪಶು ವೈದ್ಯೆಗೆ ಸಹಾಯ ಮಾಡುವ ನೆಪದಲ್ಲಿ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ, ಸುಟ್ಟುಹಾಕಿ ಹತ್ಯೆಗೈದಿರುವ ಅಮಾನವೀಯ ಘಟನೆ ನಡೆದಿದೆ.

ನಗರದಿಂದ 60 ಕಿ.ಮೀ.ದೂರದ ಶಾದ್‌ನಗರದಲ್ಲಿರುವ ಚಟನ್‌ಪಲ್ಲಿಯಲ್ಲಿರುವ ಅಂಡರ್‌ಪಾಸ್‌ನಲ್ಲಿ ಗುರುವಾರ ಬೆಳಗ್ಗಿನ ಜಾವ ಸುಟ್ಟುಕರಕಲಾದ ಮೃತದೇಹ ಪತ್ತೆಯಾಗಿತ್ತು. ಮಹಿಳೆಯನ್ನು ಹತ್ಯೆಗೈಯುವ ಮೊದಲು ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಅನಂತಪುರದ ಲಾರಿ ಚಾಲಕ ಹಾಗೂ ಕ್ಲೀನರ್‌ರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಗುರುವಾರ ಬೆಳಗ್ಗೆ 6 ಗಂಟೆಗೆ ಹಾಲುಮಾರಾಟಗಾರ ಸತ್ಯಂ ಹೈದರಾಬಾದ್-ಬೆಂಗಳೂರು ಹೈವೇ ಎನ್‌ಎಚ್-44ರ ಫ್ಲೈಓವರ್‌ನ ಕೆಳಗೆ ಸುಟ್ಟುಕರಕಲಾಗಿದ್ದ ಮೃತದೇಹವನ್ನು ನೋಡಿದ್ದರು. ತಕ್ಷಣವೇ ಗ್ರಾಮದ ಮುಖ್ಯಸ್ಥರಿಗೆ ಕರೆ ಮಾಡಿದ್ದು,ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅದೊಂದು ಹತ್ಯೆ ಎಂದು ದೃಢಪಡಿಸಿಕೊಂಡ ಬಳಿಕ ಸೈಬರಾಬಾದ್ ಪೊಲೀಸರು ಇತ್ತೀಚೆಗಿನ ದೂರುಗಳನ್ನು ಪರಿಶೀಲಿಸಿದ್ದರು. ಆಗ ಬುಧವಾರ ರಾತ್ರಿ ಶಂಶಾಬಾದ್ ಪೊಲೀಸರು ಪಶು ವೈದ್ಯೆಯೊಬ್ಬರು ನಾಪತ್ತೆಯಾಗಿರುವ ದೂರನ್ನು ಸ್ವೀಕರಿಸಿದ್ದು ಗಮನಕ್ಕೆ ಬಂದಿತು. ವೈದ್ಯೆಯ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿ ಸ್ಕಾರ್ಫ್ ಹಾಗೂ ಆಕೆಯ ಕುತ್ತಿಗೆಯಲ್ಲಿದ್ದ ಗಣೇಶನ ಲಾಕೆಟ್‌ನ ಆಧಾರದಲ್ಲಿ ಸುಟ್ಟುಕರಕಲಾಗಿದ್ದ ಮೃತದೇಹದ ಗುರುತು ಪತ್ತೆ ಹಚಿ ್ಚ ದ್ದಾರೆ.

ಮೃತ ಮಹಿಳೆಯ ಬೈಕ್ ಕೊಥೂರ್‌ನಲ್ಲಿ ಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಹಾಗೂ ಪರ್ಸ್ ನಾಪತ್ತೆಯಾಗಿದೆ.ವಾಹನದ ನಂಬರ್ ಪ್ಲೇಟ್ ಕೂಡ ಕಾಣೆಯಾಗಿದೆ.ಹತ್ಯೆಯಾದ ಮಹಿಳೆ ಸಂಜೆ 5:30ರ ಸುಮಾರಿಗೆ ಚರ್ಮ ಸಮಸ್ಯೆಗಾಗಿ ವೈದ್ಯರನ್ನು ಭೇಟಿಯಾಗಲು ಮನೆಯಿಂದ ದ್ವಿಚಕ್ರದಲ್ಲಿ ಗಾಚಿಬೌಲಿಗೆ ತೆರಳಿದ್ದರು. ತನ್ನ ವಾಹನವನ್ನು ಟೋಲ್ ಪ್ಲಾಝಾದಲ್ಲಿ ಪಾರ್ಕಿಂಗ್ ಮಾಡಿದ್ದರು. ಅಲ್ಲಿಂದ ಕ್ಯಾಬ್‌ನಲ್ಲಿ ಗಾಚಿಬೌಲಿಗೆ ತೆರಳಿ ವೈದ್ಯರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದರು. ಮಹಿಳೆಯು ರಾತ್ರಿ 9 ಗಂಟೆಯ ಸುಮಾರಿಗೆ ಗಾಚಿಬೌಲಿಯಿಂದ ಟೋಲ್‌ಪ್ಲಾಜಾಗೆ ಕ್ಯಾಬ್‌ನಲ್ಲಿ ವಾಪಸ್ ಬಂದು ಬೈಕ್ ಬಳಿ ತೆರಳಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಪಂಕ್ಚರ್ ಆಗಿದ್ದ ಕಾರಣ ಇಬ್ಬರು ಪುರುಷರು, ವೈದ್ಯೆಯ ಬಳಿ ಬಂದು ಸಹಾಯಕ್ಕೆ ಮುಂದಾಗಿದ್ದರು.

ಬೈಕ್ ಟಯರ್ ಪಂಕ್ಚರ್ ಸರಿ ಮಾಡಿಸಿಕೊಡುವ ನೆಪದಲ್ಲಿ ಮಹಿಳೆಯನ್ನು ಬಹಳ ದೂರ ಕರೆದೊಯ್ದಿದ್ದ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು. 9:22ರ ಸುಮಾರಿಗೆ ಸಹೋದರನಿಗೆ ಕರೆ ಮಾಡಿ ಪಾರ್ಕ್ ಮಾಡಲಾಗಿರುವ ಲಾರಿಗಳ ಚಾಲಕರು ನನ್ನ ಪಕ್ಕದಲ್ಲಿದ್ದಾರೆ. ಅವರನ್ನು ನೋಡಿದರೆ ಭಯವಾಗುತ್ತದೆ ಎಂದು  ವೈದ್ಯೆ ಆತಂಕ ವ್ಯಕ್ತಪಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Please follow and like us:
error