ಹೆಚ್ಚುತ್ತಿರುವ ಕೊರೋನ: ರಾಜ್ಯದಲ್ಲಿ ನಾಳೆಯೂ ಸಾರಿಗೆ ಸೇವೆ ಬಂದ್

ಬೆಂಗಳೂರು, ಮಾ.22: ಕೊರೋನ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿರುವ ಪರಿಣಾಮ ರಾಜ್ಯ ಸರಕಾರ ಪ್ರಸಕ್ತ ವಿದ್ಯಮಾನಗಳನ್ನು ಪರಿಶೀಲಿಸಿ ಕೆಲವು ಮಹತ್ವ ಪೂರ್ವ ನಿರ್ಧಾರಗಳನ್ನು ಕೈಗೊಂಡಿದ್ದು, ರಾಜ್ಯದಲ್ಲಿ ನಾಳೆಯೂ ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ.

ಈಗಾಗಲೇ ಅಂತಾರಾಜ್ಯ ಬಸ್ ಸಂಚಾರ ರದ್ದು ಮಾಡಲಾಗಿದೆ. ಅಲ್ಲದೆ, ಮೆಟ್ರೋ ಸಹಿತ ಎಲ್ಲ ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ ಕೆಎಸ್ಸಾರ್ಟಿಸಿ ಎಲ್ಲ ಹವಾನಿಯಂತ್ರಿತ (ಎಸಿ) ಬಸ್ಸುಗಳ ಸಂಚಾರವನ್ನು ಮಾ.31ರ ವರೆಗೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ನಿಷೇಧಾಜ್ಞೆ: ಮಾ.22ರ ರಾತ್ರಿ 9ರ ವೇಳೆಗೆ ‘ಜನತಾ ಕರ್ಫ್ಯೂ’ ಮುಗಿಯಲಿದೆ. ಆದರೆ, 9 ಗಂಟೆಯಿಂದ 12 ಗಂಟೆಯ ವರೆಗೂ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಈ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ 9 ಜಿಲ್ಲೆಗಳೂ ಲಾಕ್‌ ಡೌನ್‌ ಆಗಲಿದ್ದು, ಆ ಜಿಲ್ಲೆಗಳಲ್ಲಿ ಎಲ್ಲವೂ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಈ 9 ಜಿಲ್ಲೆಗಳಲ್ಲಿ ಹೊರರಾಜ್ಯಗಳ ಸಾರಿಗೆ ವ್ಯವಸ್ಥೆಯನ್ನು ಮಾ.31ರ ವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಲಾಕ್‌ ಡೌನ್‌ ಆಗಲಿರುವ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು. ಸಾರಿಗೆ, ರೆಸ್ಟೋರೆಂಟ್‌, ಮೆಟ್ರೋ ಸಂಚಾರ ಬಂದ್‌ ಆಗಲಿದ್ದು, ಆಸ್ಪತ್ರೆ, ಔಷಧಾಲಯ, ಹಾಲು, ಹೂ ಹಣ್ಣು, ಪೇಪರ್‌, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಾಗಲಿವೆ.

Please follow and like us:
error