ಹಿಂದಿ ಲೇಖಕಿ ಕೃಷ್ಣಾ ಸೊಬ್ತಿಗೆ ಜ್ಞಾನಪೀಠ ಪುರಸ್ಕಾರ

ಹೊಸದಿಲ್ಲಿ, ನ.3: ಖ್ಯಾತ ಹಿಂದಿ ಸಾಹಿತಿ ಕೃಷ್ಣಾ ಸೊಬ್ತಿ ಅವರನ್ನು ಈ ವರ್ಷದ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಘೋಷಿಸಿದೆ. 

ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುಜ್ರತ್‌ನಲ್ಲಿ 1925ರಲ್ಲಿ ಜನಿಸಿದ ಕೃಷ್ಣಾ ತಮ್ಮ ಹೊಸ ಶೈಲಿಯ ಬರಹದಿಂದ ಪ್ರಸಿದ್ಧಿಗೆ ಬಂದಿದ್ದರು. ಯಾವುದೇ ರೀತಿಯ ಸವಾಲನ್ನು ಸ್ವೀಕರಿಸಲು ಹಿಂಜರಿಯದ ದಿಟ್ಟ ಮತ್ತು ಸಾಹಸಿಗಳ ಪಾತ್ರಗಳನ್ನು ಇವರ ಕೃತಿಯಲ್ಲಿ ಕಾಣಬಹುದಾಗಿದೆ. ಹಿಂದಿ, ಉರ್ದು ಮತ್ತು ಪಂಜಾಬಿ ಸಂಸ್ಕೃತಿಗಳ ಪ್ರಭಾವ ಇವರ ಕೃತಿಯಲ್ಲಿನ ಪದಗಳ ಬಳಕೆಯಲ್ಲಿ ಮೇಳೈಸಿದೆ. ಈಕೆಯ ಹಲವಾರು ಕೃತಿಗಳನ್ನು ಇತರ ಭಾರತೀಯ ಭಾಷೆಗಳಿಗಷ್ಟೇ ಅಲ್ಲ, ಸ್ವೀಡಿಷ್, ರಶ್ಯನ್ ಮತ್ತು ಇಂಗ್ಲಿಷ್ ಭಾಷೆಗೂ ಅನುವಾದ ಮಾಡಲಾಗಿದೆ.

ದೇಶದ ವಿಭಜನೆ, ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ, ಭಾರತೀಯ ಸಮಾಜದ ಚಲನಶೀಲತೆಯಲ್ಲಿ ಆಗಿರುವ ಬದಲಾವಣೆ, ಮಾನವೀಯ ವೌಲ್ಯಗಳು ಕ್ರಮೇಣವಾಗಿ ನಶಿಸುತ್ತಾ ಸಾಗುತ್ತಿರುವ ಬಗ್ಗೆ ಲೇಖಕಿ ತಮ್ಮ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಕೃಷ್ಣಾ ಸೊಬ್ತಿ ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಗ್ರಣಿ ಲೇಖಕರಾಗಿದ್ದಾರೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರಾದ ಖ್ಯಾತ ಸಾಹಿತಿ, ವಿಮರ್ಶಕ ನಮ್ವರ್ ಸಿಂಗ್ ತಿಳಿಸಿದ್ದಾರೆ. ಕೃಷ್ಣಾ ಸೊಬ್ತಿ ಈಗಾಗಲೇ ಹಿಂದಿ ಅಕಾಡೆಮಿ ಪುರಸ್ಕಾರ, ಶಿರೋಮನ್ ಪುರಸ್ಕಾರ, ಮೈಥ್ಲಿ ಶರಣ್ ಗುಪ್ತ್ ಸಮ್ಮಾನ್, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಇತ್ಯಾದಿ ಗೌರವಕ್ಕೆ ಪಾತ್ರರಾಗಿದ್ದಾರೆ.

Please follow and like us:
error