fbpx

ಹಿಂಗಾರು ಹಂಗಾಮು; ಕಲ್ಲಂಗಡಿ ಬೆಳೆಯಲು ರೈತರಿಗೆ ಸಲಹೆ

ಕೊಪ್ಪಳ ಅ.   ಮುಂಗಾರು ಕಳೆದು ಪ್ರಸಕ್ತ ಹಿಂಗಾರು ಹಂಗಾಮು ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಮುಂಬರುವ ಜನವರಿ ತಿಂಗಳಿನಲ್ಲಿ ಶ್ರಿ ಗವಿಸಿದ್ದೆಶ್ವರ ಜಾತ್ರೆ ಬರಲಿದ್ದು, ಉತ್ತಮ ಲಾಭ ಗಳಿಸಲು ಜಿಲ್ಲೆಯ ರೈತರು ಕಲ್ಲಂಗಡಿ ಬೆಳೆಯುವಂತೆ ತಾಂತ್ರಿಕ ಮಾಹಿತಿಯನ್ನು ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಉಪಯುಕ್ತ ಮಾಹಿತಿ ನೀಡಲಾಗಿದೆ.
ಕಲ್ಲಂಗಡಿ ಬೆಳೆಯು ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದ್ದು, ಅಲ್ಪಾವಧಿಯಲ್ಲಿಯೇ (ನಾಟಿ ಮಾಡಿದ 75-100 ದಿನಗಳು) ಹೆಚ್ಚಿನ ಲಾಭ ಕೊಡುವ ತೋಟಗಾರಿಕೆ ಬೆಳೆಯಾಗಿದೆ. ಹೆಚ್ಚಿನ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯ ಇರುವ ಈ ಬೆಳೆಗೆ ಕೊಪ್ಪಳ ಜಿಲ್ಲೆಯು ತುಂಬಾ ಸೂಕ್ತ ಪ್ರದೇಶವಾಗಿದೆ.
ಹವಾಮಾನ:
ಭೂಮಿಯ ಉಷ್ಣತೆ 20 ಡಿಗ್ರಿ ಸೆ. ಹೆಚ್ಚಿದ್ದು ಹವಾಮಾನ 25-32 ಡಿಗ್ರಿ ಸೆ. ಇರುವ ಎಲ್ಲಾ ಬಯಲು ಸೀಮೆ ಪ್ರದೇಶದಲ್ಲಿ ನೀರು ಬಸಿದುಹೋಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಈ ಬೆಳೆಗೆ ತುಂಬ ಸೂಕ್ತವಾಗಿದ್ದು, ಸವಳು ಮಣ್ಣು ಸೂಕ್ತವಲ್ಲ. ಬೆಳೆಯ ಯಾವುದೇ ಸಮಯದಲ್ಲಿ ಅಕಾಲಿಕ ಜೋರು ಮಳೆಯು ಈ ಬೆಳೆಗೆ ಹಾನಿಕಾರಕ.
ನಾಟಿ ವಿಧಾನ:
ನೇರ ಬೀಜ ಬಿತ್ತನೆಯಿಂದ ನರ್ಸರಿಯಲ್ಲಿ 400-500 ಗ್ರಾಂ ಬೀಜ ಸಸಿ ಮಾಡಿ ನಾಟಿ ಮಾಡಿದರೆ 200 ಗ್ರಾಂ ಬೀಜ ಬೇಕು. 4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 2-3 ಅಡಿ ಬೀಜ/ಸಸಿಗಳ ನಡುವಿನ ಅಂತರ ಸೂಕ್ತ. ಎಕರೆಗೆ 4000 ರಿಂದ 4500 ಸಸಿಗಳ ಸಂಖ್ಯೆ ಉತ್ತಮ.
ಬಿತ್ತುವ ಪೂರ್ವದಲ್ಲಿ ಚೆನ್ನಾಗಿ ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10-12 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ.ಮೀ. ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2-3 ಅಡಿಗೊಂದರಂತೆ ನಾಟಿ ಮಾಡಬೇಕು. ತ್ರಿಕೋನಾಕೃತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ಸಸಿಗಳನ್ನು ನಾಟಿ ಮಾಡಬಹುದು.
ಪ್ರಮುಖ ತಳಿಗಳು:
ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಅಲ್ಲದೇ ವಿವಿಧ ಕಂಪನಿಗಳ ಹೈಬ್ರಿÃಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಸಸಿಗಳನ್ನು ನಾಟಿ ಮಾಡುವಾಗ ಸೂಕ್ಷಾö್ಮಣು ಜೀವಿಗಳ ಕನ್ಸೊÃರ್ಷಿಯಂ 15-20 ಗ್ರಾಂ. ಹಾಕಿ ನಾಟಿ ಮಾಡಿ 15 ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ದತಿ.    ನಂತರ 8-10 ದಿನಗಳವರೆಗೆ ಪ್ರತಿದಿನ 15 ರಿಂದ 30 ನಿಮಿಷಗಳವರೆಗೆ ನೀರೊದಗಿಸಬೇಕು (ಮಣ್ಣಿನ ಗುಣ ಧರ್ಮ ಆದರಿಸಿ). ನಂತರದ ದಿನಗಳಲ್ಲಿ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂ ಬಿಡುವ ಸಮಯ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂ ಬಿಡಲು ಆರಂಭವಾಗುತ್ತದೆ. ಮೊದಲು ಗಂಡು ಹೂಗಳು ಆರಂಭವಾಗಿ ನಂತರ ಹೆಣ್ಣು ಹೂಗಳು ಬರುತ್ತವೆ. ಗಂಡು ಹೂಗಳನ್ನು ಕಿತ್ತು ಹಾಕಿ, ಹೆಣ್ಣು ಹೂಗಳನ್ನು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂ ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಇದು ಕಲ್ಲಂಗಡಿ ಬೇಸಾಯದಲ್ಲಿ ಪ್ರಮುಖ ಚಟುವಟಿಕೆ. ಇದಕ್ಕಾಗಿ ತಜ್ಞರ ಸಲಹೆ ಪಡೆದು ಇಥೋಫಾಸ್ ನಂತಹ ಸಸ್ಯ ಚೋಧಕಗಳನ್ನು ಬಳಸಬೇಕು.
ಸಸ್ಯ ಸಂರಕ್ಷಣೆ:
ಆರಂಭದ ಹಂತದಲ್ಲಿ ರಸ ಹೀರುವ ಕೀಟಗಳು ತುಂಬ ಹಾನಿಯುಂಟು ಮಾಡುತ್ತವೆ. ಇದಕ್ಕಾಗಿ ತಜ್ಞ ರಿಂದ ಸಲಹೆ ಪಡೆದು ಇಮಿಡಾಕ್ಲೊÃಪ್ರಿಡ್ ನಂತಹ ಅಂತರ್ವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಥ್ರಿÃಪ್ ನುಸಿ ಈ ಬೆಳೆಗೆ ಮಾರಕವಾಗಿದ್ದು, ಕುಡಿ ಸಾಯುವ ನಂಜಾಣು ರೋಗ (ಬಡ್ ನೆಕ್ರೊÃಸಿಸ್) ಹರಡುವುದರಿಂದ ಈ ಕೀಟದ ನಿಯಂತ್ರಣ ತುಂಬ ಮುಖ್ಯ ನಂತರ ಬರುವ ಹಣ್ಣಿನ ನೊಣ ಕೂಡಾ ಹಾನಿಕಾರಕವಾದ್ದರಿಂದ ಅಂಟು ಕಾರ್ಡುಗಳ ಬಳಕೆ ಹಾಗೂ ಮೋಹಕ ಬಲೆಗಳ ಬಳಕೆ ತುಂಬ ಸೂಕ್ತ. ಹೂವಾಗುವ ಸಮಯದಲ್ಲಿ ಕೀಟಗಳಿಂದಾಗುವ (ಜೇನು ನೊಣ) ಪರಾಗಸ್ಪರ್ಶದಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದು. ಎಕರೆಗೆ ಒಂದು ಜೇನು ಪೆಟ್ಟಿಗೆ ಇಟ್ಟಾಗ ಹಾನಿಕಾರಕ ಕೀಟನಾಶಕಗಳನ್ನು ಬಳಸದೇ ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು.
ಪ್ರಮುಖ ರೋಗಗಳು:
ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಅಂಗಮಾರಿ ರೋಗಗಳ ಹತೋಟಿಗೆ ತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಅನವಶ್ಯಕ ರಾಸಾಯನಿಕಗಳ ಬಳಕೆ ಮಾಡಬಾರದು.
ಪೋಷಕಾಂಶಗಳ ನಿರ್ವಹಣೆ: ಹನಿ ನೀರಾವರಿ ಮುಖಾಂತರ ತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿ ಕೊಡಬೇಕು. ಈ ಬೆಳೆಗೆ ಸೂಕ್ಷö್ಮ ಲಘು ಪೋಷಕಾಂಶಗಳಾದ ಸತು, ಬೋರಾನ್ ಮತ್ತು ಕ್ಯಾಲ್ಸಿಯಂಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು.
ಸೂಚನೆ:
ಗಂಧಕ ಮತ್ತು ಗಂಧಕಯುಕ್ತ ರಾಸಾಯನಿಕಗಳನ್ನು ಈ ಬೆಳೆಗೆ ಬಳಸಬಾರದು. 75-100 ಅಲ್ಪಾವದಿ ಮತ್ತು ಮಧ್ಯಮ ತಳಿಗಳಿಂದ ಹಾಗೂ 100-110 ದಿನಗಳ ದೀರ್ಘಾವಧಿ ತಳಿಗಳಿಂದ ಎಕರೆಗೆ 20-25 ಟನ್ ಇಳುವರಿ ಪಡೆಯಬಹುದಾಗಿದೆ. ರೂ. 5 ಪ್ರತಿ ಕಿ.ಗ್ರಾಂ. ಗೆ ದರದಂತೆ 1 ರಿಂದ 1.25 ಲಕ್ಷ ನಿವ್ವಳ ಲಾಭ ಖಚಿತ.
ಕಲ್ಲಂಗಡಿ ಬೆಳೆಯನ್ನು ಚಳಿಗಾಲದಲ್ಲಿ ಬೆಳೆಸಿ ಬೇಸಿಗೆಯಲ್ಲಿ ಹಣ್ಣು ಪಡೆದರೆ ಇಳುವರಿ ಜೊತೆಗೆ ರುಚಿಯೂ ಜಾಸ್ತಿಯಾಗಿರುತ್ತದೆ. ಆದ್ದರಿಂದ ಜಿಲ್ಲೆಯ ರೈತರು ಕಲ್ಲಂಗಡಿ ಬೆಳೆಯಲು ಮುಂದಾಗಿ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಹಾರ್ಟಿಕ್ಲಿನಿಕ್ ವಿಷಯ ತಜ್ಞರ ಮೊ.ಸಂ: 9482672039 ಹಾಗೂ ಇಲಾಖೆಯ ಆಯಾ ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ  ತಿಳಿಸಿದ್ದಾರೆ.

Please follow and like us:
error
error: Content is protected !!