ಹಸಿವೆಗೆ ಮಿಡಿದ ಪೋಲೀಸ್ ಹೃದಯ! – Positive NEWS @ Corona Time

ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಪೋಲಿಸ್ ಕಾನ್ ಸ್ಟೇಬಲ್ ಮಹೀನೂರ್ ಖಾತೂನ್ ಖಾಗ್ರಗಡ್ ಎಂಬ ಒಂದು ಬಡ ವಠಾರದಲ್ಲಿ ಬೆಳೆದವರು. ಅವರ ನೆರೆಹೊರೆಯ ಹೆಚ್ಚಿನವರು ದಿನಗೂಲಿಗಳು, ರಿಕ್ಷಾ ಓಡಿಸುವವರು, ಫುಟ್ ಪಾತ್ ವ್ಯಾಪಾರಿಗಳು, ಇತರರ ಮನೆಗಳಲ್ಲಿ ಮುಸುರೆ ತಿಕ್ಕುವವರು. ಆದರೆ, ಕಾಗದದ ಚೀಲಗಳನ್ನು ಮಾಡಿ ಮಾರುತ್ತಿದ್ದ ತಾಯಿ ಟ್ರಕ್ ಚಾಲಕರಾಗಿದ್ದ ತಂದೆ ಒಳ್ಳೆಯ ಶಿಕ್ಷಣ ಕೊಡಿಸಿದ ಕಾರಣ ಮಹಿನೂರ್ ಖಾತೂನ್ ಪೋಲಿಸ್ ಇಲಾಖೆ ಸೇರಿ ತಿಂಗಳಿಗೆ 40000 ರುಪಾಯಿಯ ಸಂಬಳದ ನೌಕರಿ ಪಡೆಯುವುದು ಸಾಧ್ಯವಾಯಿತು.

ನಾಲ್ಕು ತಿಂಗಳ ಹಿಂದೆ ಲಾಕ್ ಡೌನ್ ಹೇರಲ್ಪಟ್ಟು ಜನ ಮನೆಯಿಂದ ಹೊರಬಾರದಂತೆ ಹಾಗೂ ಸೂಕ್ತ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಬಂದೋಬಸ್ತ್ ಕೆಲಸಕ್ಕಾಗಿ ತಿರುಗಾಡುತ್ತಿದ್ದಾಗ ಕಣ್ಣಾರೆ ಕಂಡ ಬಡತನದ ಕರಾಳ ದೃಶ್ಯಗಳು ಮಹೀನೂರ್ ರನ್ನು ತೀವ್ರವಾಗಿ ವಿಚಲಿತಗೊಳಿಸಿದವು. ದುಡಿಮೆ ಇಲ್ಲದ ಜನ ಹಸಿವೆ ತಾಳಲಾರದೆ ಅವರಿವರ ಮನೆಗಳ ಎದುರು ನಿಂತು ಹಿಡಿ ಅನ್ನಕ್ಕಾಗಿ, ಬೇಯಿಸಿದ ಒಂದು ಬಟಾಟೆಗಾಗಿ ಕೈ ಚಾಚುತ್ತಿದ್ದರು. ಆದರೆ, ಎಲ್ಲರೂ ಬಡವರಾಗಿರುವ ಆ ವಠಾರದಲ್ಲಿ ಯಾರಿಗೆ ಯಾರೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಮಹೀನೂರ್ ತನ್ನ ಹನ್ನೆರಡು ವರ್ಷಗಳ ಪೋಲೀಸ್ ಕೆಲಸದಲ್ಲಿ ಅಂತಹ ದುರ್ದಿನಗಳನ್ನು ಎಂದೂ ಕಂಡಿರಲಿಲ್ಲ.

ಮಹೀನೂರ್ ಖಾತೂನ್ ರದ್ದು ತಂದೆ, ತಾಯಿ ಮತ್ತು ಒಬ್ಬ ಮಗ ಒಟ್ಟು ನಾಲ್ವರ ಸಂಸಾರ. ಇಡೀ ಸಂಸಾರದ ಹೊಟ್ಟೆಪಾಡು ಅವರ ಪೋಲೀಸ್ ಸಂಬಳದಲ್ಲೇ ನಡೆಯಬೇಕು. ಈ ಮಧ್ಯೆ ತಂದೆಗೆ ಹೃದಯ ಸಮಸ್ಯೆ ತಲೆದೋರಿ ಅದಕ್ಕಾಗಿ ಉಳಿತಾಯ ಮಾಡುತ್ತಿದ್ದರು. ಆದರೆ, ತಾನು ಕಂಡ ಬಡತನದ ದೃಶ್ಯಗಳು ಮಹೀನೂರ್ ರನ್ನು ಬೇರೇಯೇ ಕೆಲಸಕ್ಕೇ ಪ್ರೇರೇಪಿಸಿತು. ಅವರು ತಂದೆಯ ಅನುಮತಿ ಪಡೆದು ಅವರ ವೈದ್ಯಕೀಯ ಆರೈಕೆಗಾಗಿ ಉಳಿತಾಯ ಮಾಡುತ್ತಿದ್ದ ಆ ಹಣದಿಂದಲೇ ಅಕ್ಕಿ, ಎಣ್ಣೆ, ಹಿಟ್ಟು, ನೀರುಳ್ಳಿ, ಬಟಾಟೆ ಹಾಗೂ ಮತ್ತಿತರ ಅಗತ್ಯ ದಿನಬಳಕೆ ವಸ್ತುಗಳನ್ನು ಖರೀದಿಸಿ ಆ ಬಡವರಿಗೆ ಹಂಚಲು ಶುರು ಮಾಡಿದರು. ಏಪ್ರಿಲ್ 20 ರ ಹೊತ್ತಿಗೆ ಉಳಿತಾಯ ಮಾಡಿದ್ದ 2 ಲಕ್ಷ ರುಪಾಯಿಗಳೆಲ್ಲ ಅದಕ್ಕಾಗಿಯೇ ಖಾಲಿಯಾಯಿತು. ಮುಂದೇನು ಮಾಡುವುದೆಂದು ಆಲೋಚಿಸುತ್ತಿದ್ದಾಗ ಕೆಲವು ದಾನಿಗಳು ಮತ್ತು ಮಿಲಾಪ್ ಎಂಬ ಒಂದು ಕ್ರೌಡ್ ಫಂಡಿಂಗ್ ಪ್ಲಾಟ್ ಪಾರ್ಮ್ ಅವರ ಬೆಂಬಲಕ್ಕೆ ಬಂದರು. ‘ಸಪೋರ್ಟ್ ಮಹೀನೂರ್’ ಎಂಬ ಒಂದು ಆಂದೋಲನ ಶುರುವಾಗಿ ಇನ್ನಷ್ಟು ಹಣ ಸಂಗ್ರಹವಾಯಿತು. ಅವೆಲ್ಲವನ್ನು ಮಹೀನೂರ್ ಆ ಅತಂತ್ರ ಜನರ ಸಹಾಯಕ್ಕೆ ಬಳಸಿದರು. ಈ ಮಧ್ಯೆ ಅಂಫಾನ್ ಚಂಡಮಾರುತ ಬೀಸಿದಾಗ ಅದರ ಸಂತೃಸ್ತರಿಗೂ ಸಹಾಯ ನೀಡಿದರು. ಮಗಳ ಈ ಪರೋಪಕಾರ ಬುದ್ಧಿಯನ್ನು ನೋಡಿದ ತಂದೆ 70 ವರ್ಷ ಪ್ರಾಯದ ಮಸೂದ್ ಚೌಧುರಿ,
“ನನ್ನ ವೈದ್ಯಕೀಯ ಆರೈಕೆ ಕಾಯಲಿ. ಒಂದು ವೇಳೆ ನಾನು ಸತ್ತಾರೂ ಏನೀಗ? ಆ ಹಣ ಒಂದು ಒಳ್ಳೆಯ ಕೆಲಸಕ್ಕೆ ಖರ್ಚಾಯಿತಲ್ಲ ಎನ್ನುವುದೇ ನನಗೆ ಹೆಚ್ಚಿನ ಸಮಾಧಾನ ನೀಡುತ್ತದೆ” ಎಂದು ಹೇಳುವಾಗ ಪೋಲೀಸ್ ಮಗಳ ಕಣ್ಣುಗಳು ತುಂಬಿಕೊಳ್ಳುತ್ತವೆ…

ಪಂಜು ಗಂಗೊಳ್ಳಿ

Please follow and like us:
error