ಹರಡುವಿಕೆ ತಡೆಗಟ್ಟಲು ಸ್ವಯಂ ಪ್ರೇರಿತ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ : ಡಿಸಿ

ಕೊಪ್ಪಳ ಮಾ. : ಕೊರೋನಾ ವೈರಾಣು ಸೋಂಕು ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಹರಡಬಾರದೆಂಬ ಕಾಳಜಿಯಿಂದ ಮಾರ್ಚ್. 31 ರವರೆಗೆ ಜನದಟ್ಟಣೆ ಸೇರುವಂತಹ ಸ್ಥಳಗಳಲ್ಲಿ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಜನಸಂದಣೆ ಸೇರುವುದನ್ನು ತಪ್ಪಿಸಿ ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಸ್ವಯಂ ಪ್ರೇರಿತ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊರೋನಾ (ಕೋವಿಡ್-19) ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಆದಾಗ್ಯೂ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ವೈರಾಣು ಸೋಂಕು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಭೆ, ಸಮಾರಂಭ, ಮದುವೆ, ಜಾತ್ರೆ, ಉರುಸು, ಸಂತೆ, ನಡೆಸದಂತೆ ಕೋರಲಾಗಿದೆ. ಚರ್ಚ್, ಮಸೀದಿ, ಮಂದಿರಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಹಾಗೂ ಕ್ರೀಡಾಕೂಟ, ಮೇಳ, ವಾಕಾಥನ್ ಗುಂಪು ವ್ಯಾಯಾಮ, ಟ್ಯೂಷನ್ ತರಗತಿಗಳು, ಚಿತ್ರಮಂದಿರಗಳು, ಬೀದಿಬದಿ ಮಾರಾಟ, ಮಾಲ್‌ಗಳು, ಶಾಪ್‌ಗಳು, ರೆಸ್ಟೋರೆಂಟಗಳು, ಎಲ್ಲಾ ಬಗೆಯ ಬಾರ್‌ಗಳು, ಕ್ಲಬ್‌ಗಳು, ರೆಸಾರ್ಟ್ಗಳು, ಡಾಬಾಗಳು, ಹೋಟೆಲ್‌ಗಳಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ. ಹಾಗೂ ಸರ್ಕಾರಿ ಕಛೇರಿಗಳಿಗೂ ಕೂಡ ಸಾರ್ವಜನಿಕರು ಭೇಟಿ ನೀಡುವುದನ್ನು ಮುಂದೂಡಲಾಗಿದೆ. ಇನ್ನಿತರೆ ಜನಸಂದಣಿ ಆಗುವಂತಹ ಸಂದರ್ಭಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರುಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಮಾಧ್ಯಮದವರು, ಕೋವಿಡ್-19 ವೈರಾಣು ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಸ್ವಯಂ ಪ್ರೇರಿತವಾಗಿ ಸಾಮಾಜಿಕ ಅಂತರವನ್ನು [Soಛಿiಚಿಟ ಆisಣಚಿಟಿಛಿe] ಕಾಯ್ದುಕೊಳ್ಳಲು ಸಹಕರಿಸುವಂತೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿಗಳು ವೈಯಕ್ತಿಕವಾಗಿ ಸಮಸ್ತ ಕೊಪ್ಪಳ ಜನತೆಯಲ್ಲಿ ಪ್ರಕಟಣೆ ಮೂಲಕ ಕೋರಿದ್ದಾರೆ.

Please follow and like us:
error