ಹತ್ಯೆಯನ್ನು ತಡೆಯಬಹದು, ಆತ್ಮಹತ್ಯೆಗಳನ್ನು ತಡೆಯುವುದು ಹೇಗೆ?-ದಿನೇಶ್ ಅಮೀನಮಟ್ಟು

ಸರ್ವಸಂಗ ಪರಿತ್ಯಾಗ’ ಮಾಡಿ ಸದ್ಯಕ್ಕೆ ನಮ್ಮೂರೇ ಸುರಕ್ಷಿತ ಎಂದು ಊರಲ್ಲಿ‌ ಕ್ಯಾಂಪ್ ಹಾಕಿದ್ದೇನೆ. ಮಾಧ್ಯಮಗಳ ಮೂಲಕ ಭೋರ್ಗರೆದು ಹರಿದು ಬರುತ್ತಿರುವ ಬೆಂಗಳೂರಿನ ಕೊರೊನಾ ಸುದ್ದಿಗಳು ಊರೇ ವಾಸಿ ಎಂಬ ಸುರಕ್ಷತಾ ಭಾವವನ್ನು ಇನ್ನಷ್ಟು ಬಲಪಡಿಸಿತ್ತು.
ಆದರೆ ಈಗ ಈ ವಿಶ್ವಾಸ ಉಳಿದಿಲ್ಲ,
ಏಪ್ರಿಲ್-ಮೇ ತಿಂಗಳುಗಳೆಂದರೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಲಸಿಗರ ಸಮಾವೇಶದ ಕಾಲ. ಜಾತ್ರೆ, ಕೋಲ,‌ನೇಮ, ಅಂಕ‌ಆಯನ, ಮದುವೆ ಕಾರ್ಯಕ್ರಮಗಳು ಸಾಲು ಸಾಲು ನಡೆಯುತ್ತಿರುತ್ತವೆ. ಪ್ರತಿಮನೆಗಳಲ್ಲಿಯೂ ಮುಂಬೈನಿಂದ ಬಂದ ಸಂಬಂಧಿಕರು ತುಂಬಿರುತ್ತಾರೆ. ಕಳೆದ ಬಾರಿ ಕೊರೊನಾದಿಂದಾಗಿ ಊರಿಗೆ ಬರಲಾರದವರು ಈ ವರ್ಷ ಆರುತಿಂಗಳ ಮೊದಲೇ ವಿಮಾನ,ರೈಲುಗಳಲ್ಲಿ ಟಿಕೆಟ್ ಮಾಡಿ ರೆಡಿಯಾಗಿದ್ದರು. ಇವರಲ್ಲಿ ಅರ್ಧದಷ್ಟು ಜನ ಪ್ರವಾಸ ರದ್ದು ಮಾಡಿದರೂ ಊರಿಗೆ ಬಂದಿರುವ-ಬರುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ.
ಎಚ್ಬರ ತಪ್ಪಿದರೆ ಬೆಂಗಳೂರು ನಂತರ ದಕ್ಷಿಣಕನ್ನಡ ಮತ್ತು ಉಡುಪಿ‌ ಜಿಲ್ಲೆಗಳು ಕೊರೊನಾ ಹಾಟ್ ಸ್ಪಾಟ್ ಗಳಾಗುವ ಎಲ್ಲ ಸಾಧ್ಯತೆಗಳಿವೆ.
ಮಹಾರಾಷ್ಟ್ರದಿಂದ ಬರುವವರ ಕೊರೊನಾ ಪರೀಕ್ಷೆಯನ್ನು ಕರ್ನಾಟಕ‌ ಸರ್ಕಾರ ಕಡ್ಡಾಯಗೊಳಿಸಿದೆ.
ಈ ನಿಯಮದ ಅನುಷ್ಠಾನದ ಕ್ರಮಗಳು‌ ಮಾತ್ರ ಅಧಿಕಾರಿಗಳ ಭ್ರಷ್ಟಾಚಾರದಿಂದ ಸಡಿಲಗೊಂಡಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಲಕ್ಷ್ಯತನವಿದ್ದರೂ ಕೊರೊನಾ ಪರೀಕ್ಷಾ ವರದಿಗಳ ಪರಿಶೀಲನೆ ನಡೆಯುತ್ತಿವೆ. ಟೆಸ್ಟ್ ರಿಪೋರ್ಟ್ ಇಲ್ಲದವರ ಹೆಸರು-ವಿಳಾಸ ಪಡೆದು ಬಿಟ್ಟು ಬಿಡಲಾಗುತ್ತಿದೆ. ಕನಿಷ್ಠ ವಿಮಾನ ನಿಲ್ದಾಣದಲ್ಲಿಯೇ ಅಂತಹಬಪ್ರಯಾಣಿಕರ ಟೆಸ್ಟ್ ಮಾಡಿಸಬಹುದು.
ಬಸ್ ಮತ್ತು ರೈಲುಗಳಲ್ಲಿ ಬರುವವರ ಕೊರೊನಾ ಟೆಸ್ಟ್ ವರದಿಗಳನ್ನು ಕೇಳುವವರೇ ಇಲ್ಲ. ಬಸ್ ಗಳಲ್ಲಿ ಬರುವ ಪ್ರಯಾಣಿಕರಿಂದ ಬೆಳಗಾವಿ ಗಡಿ ಪ್ರವೇಶವಾಗುತ್ತಿದ್ದಂತೆಯೇ ಕಂಡಕ್ಟರ್ ತಲಾ 200 ರೂಪಾಯಿ ತಗೊಳ್ತಾನಂತೆ. ನೂರು ರೂಪಾಯಿ ಪೊಲೀಸರಿಗೆ, ನೂರು ರೂಪಾಯಿ ಬಸ್ ನವರಿಗೆ. ಅದರ ನಂತರ ಯಾವ ಚೆಕಿಂಗ್ ಕೂಡಾ‌ ಇಲ್ಲ.
ಈ ನಡುವೆ ಮುಂಬೈನಲ್ಲಿ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡುವ ದೊಡ್ಡ ದಂದೆಯೇ ಶುರುವಾಗಿದೆ. 400-500 ರೂಪಾಯಿ ಕೊಟ್ಟರೆ ಕಂಪ್ಯೂಟರ್ ಚಳಕದಲ್ಲಿ ವರದಿಗಳು ರೆಡಿ. ರೈಲಿನಲ್ಲಿ ಬರುತ್ತಿರುವ ಬಹುಸಂಖ್ಯಾತ ಪ್ರಯಾಣಿಕರ ಕೈಯಲ್ಲಿ ಈ ವರದಿಗಳಿವೆ (ನಾನೇ ನೋಡಿದ್ದೇನೆ). ಈ ಡುಪ್ಲಿಕೇಟ್ ವರದಿಗಳಲ್ಲಿರುವ QR code ಗಳನ್ನು scan ಮಾಡಿದರೆ ಮೋಸ ಕಂಡುಹಿಡಿಯಬಹುದು. ಬಸ್-ರೈಲು ಬಿಡಿ ವಿಮಾನ ನಿಲ್ದಾಣಗಳಲ್ಲಿಯೂ ಈ QR Codeಗಳ scan ನಡೆಯುತ್ತಿಲ್ಲ.
ಈ ಮೋಸದಾಟದ ಮೂಲಕ ಸಾವಿರಾರು ಜನ ಬರುತ್ತಲೇ ಇದ್ದಾರೆ. ವಿಮಾನ‌ ಟಿಕೆಟ್ ರದ್ದುಗೊಳಿಸಿ ಎಲ್ಲರೂ ಬಸ್-ರೈಲು ಹತ್ತುತ್ತಿದ್ದಾರೆ.
ಕಳೆದ ಬಾರಿ ಬೇರೆ ರಾಜ್ಯಗಳು ಬಿಡಿ ಬೇರೆ ಜಿಲ್ಲೆಗಳಿಂದ ಬಂದರೂ ಪಂಚಾಯತ್‌ನಿಂದ ಸಿಬ್ಬಂದಿ ಮನೆಗೆ ಬಂದು ಕ್ವಾರಂಟೈನ್ ಮಾಡಿಸುತ್ತಿದ್ದರು. ಈ ಬಾರಿ ನಿಗಾ ವಹಿಸುವವರೇ ಇಲ್ಲ.
ಈ ನಡುವೆ 50 ಪಾಸ್‌ಗಳಲ್ಲಿ 500 ಮಂದಿ‌ ಸೇರಿ ಮದುವೆಗಳು ನಡೆಯುತ್ತಲೇ ಇವೆ.
ಮುಂಬೈ ಕೊರೊನಾ ಹಾವಳಿಯಿಂದ ಬೇಸತ್ತು ಹೋಗಿರುವ ಜನ ಸಾಲುಗಟ್ಟಿ ಊರಿಗೆ ಬರುತ್ತಿದ್ದಾರೆ. ಬಂದವರು ಮುಂಬೈ ಜೈಲಿನಿಂದ ಬಿಡುಗಡೆ ಪಡೆದವರಂತೆ ಕನಿಷ್ಠ ಮಾಸ್ಕ್ ಕೂಡಾ ಹಾಕದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.
ನೆಗೆಟಿವ್ ರಿಪೋರ್ಟ್ ಇಲ್ಲದೆ ಮುಂಬೈನಿಂದ ಬಂದಿರುವುದು ಗೊತ್ತಾದರೆ ಆ ಮನೆಯವರ ಮೇಲೆ‌ ಕ್ರಮ ಕೈಗೊಳ್ತೇನೆ‌ ಎಂದು ಉಡುಪಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಇದು ಪ್ರಾಯೋಗಿಕವಾಗಿ ಎಷ್ಟು ಸಾಧ್ಯವೋ ಗೊತ್ತಿಲ್ಲ. ಸರ್ಕಾರವನ್ನು, ಅಧಿಕಾರಿಗಳನ್ನು ಆ ಮೇಲೆ ದೂರೋಣ, ನಮ್ಮ ಜನರಿಗೇನಾಗಿದೆ?
ಕರಾವಳಿಯ ಜಿಲ್ಲೆಗಳ ಮನೆಗಳಲ್ಲಿರುವವರು ವಯಸ್ಸಾದ ತಂದೆ-ತಾಯಿ, ಅಜ್ಜ-ಅಜ್ಜಿಗಳು, ಮುಂಬೈ-ಗಲ್ಪ್ ದೇಶಗಳಿಂದ ಬರುತ್ತಿರುವವರು ಮಕ್ಕಳು,‌ಮೊಮ್ಮಕ್ಕಳು. ವಯಸ್ಸಿನ ಬಲದಿಂದ ಬಂದವರೆಲ್ಲರೂ ಕೊರೊನಾದಿಂದ ಪಾರಾಗಬಹುದು, ಇಲ್ಲಿರುವವರ ಗತಿ ಏನು?
ಹತ್ಯೆಯನ್ನು ತಡೆಯಬಹದು, ಆತ್ಮಹತ್ಯೆಗಳನ್ನು ತಡೆಯುವುದು ಹೇಗೆ?
Please follow and like us:
error