ಹಣ ಹಂಚಿಕೆ ಮಾಡಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಡಿಸಿಎಂ ಕಾರಜೋಳ

ಬೆಂಗಳೂರು, ನ. 29: ಉಪಚುನಾವಣೆಯಲ್ಲಿ ನಾನು ಮತದಾರರಿಗೆ ಹಣ ಹಂಚಿಕೆ ಮಾಡುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶುಕ್ರವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ನಾನು ಎಂದಿಗೂ ಹಣ, ಹೆಂಡ ಹಂಚಿ ಚುನಾವಣೆಯಲ್ಲಿ ಗೆದ್ದು ಬಂದವನಲ್ಲ. ನನ್ನ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪ ಸಾಬೀತಾದರೆ ಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದರು.

ನಾನು ನನ್ನ ಕಾರು ಚಾಲಕನಿಗೆ ಹಣ ಕೊಟ್ಟಿದ್ದನ್ನೆ ಚಿತ್ರೀಕರಿಸಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂದು ಆಯೋಗಕ್ಕೆ ದೂರು ನೀಡಲಾಗಿದೆ. ಕಾನೂನಿಗೆ ಯಾರೊಬ್ಬರೂ ದೊಡ್ಡವರಲ್ಲ, ಆಯೋಗ ನಾನು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ ಎಂದು ಕಾರಜೋಳ ನುಡಿದರು.

ಕೆಟ್ಟ ಭಾಷೆ ಸಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಅನರ್ಹ ಶಾಸಕರು ಮಾರಾಟ ಆಗಿದ್ದಾರೆಂದು ಕೀಳುಮಟ್ಟದ ಭಾಷೆ ಬಳಸುವುದು ಸಲ್ಲ. ಅವರ ಹಿರಿತನಕ್ಕೆ, ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಅನರ್ಹರು ಹಣ ಪಡೆದಿರುವುದಕ್ಕೆ ಸಿದ್ದರಾಮಯ್ಯರ ಬಳಿ ಸಾಕ್ಷವಿದೆಯೇ ಎಂದು ಪ್ರಶ್ನಿಸಿದರು.

ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸೋಲು ನಿಶ್ಚಿತ. ಹೀಗಾಗಿಯೇ ಇಬ್ಬರು ನಾಯಕರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ರಾಜ್ಯದ ಜನತೆ ವಿಪಕ್ಷಗಳಿಗೆ ಮತ ಹಾಕುವುದಿಲ್ಲ ಎಂದ ಅವರು, 15 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಲಿದೆ ಎಂದರು.

ಡಿ.5ರ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲುತ್ತದೆ. ಈಗಾಗಲೇ 12 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್‌ನವರಿಗೆ ಏಕೆ ಇಷ್ಟೊಂದು ಭಯ ಶುರುವಾಗಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ. ಪರಮೇಶ್ವರ್ ಹೀಗೆ ಹಲವು ಗುಂಪುಗಳಿವೆ. ಒಟ್ಟಿಗೆ ಯಾರೂ ಪ್ರಚಾರ ಮಾಡುತ್ತಿಲ್ಲ. ಉಪಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಅಡ್ರೆಸ್‌ಗೆ ಸಿಗುವುದಿಲ್ಲವೆಂದು ಎಂದು ಅವರು ಲೇವಡಿ ಮಾಡಿದರು.

ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಬಿಜೆಪಿ ಪರವಾಗಿದ್ದು, ಅವರೆಲ್ಲರೂ ಕಾಂಗ್ರೆಸ್‌ನಿಂದ ದೂರ ಸರಿದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಒಲವು ವ್ಯಕ್ತವಾಗಿದೆ ಎಂದ ಅವರು, ಹದಿನೈದು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಎಸ್‌ವೈ ಸರಕಾರ ಮೂರುವರೆ ವರ್ಷ ಆಡಳಿತ ಪೂರೈಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ನಾರಾಯಣಸ್ವಾಮಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಉಪಸ್ಥಿತರಿದ್ದರು.

blob:https://www.facebook.com/a930b613-974f-485e-b9f9-25b8e209ab9c

https://www.facebook.com/a930b613-974f-485e-b9f9-25b8e209ab9c

Please follow and like us:
error