ಕನ್ನಡನೆಟ್ : ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ ಬಿ.ಸಿ.ಪಾಟೀಲ್ ಅವರೇ, ಹಣ-ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡಮನೆಗೆ ದ್ರೋಹ ಬಗೆಯುವ ನಿಮಗೆ ಒಂದು ಕ್ಷಣವೂ ಕೃಷಿಖಾತೆಯಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮಳೆ ಮತ್ತು ಪ್ರವಾಹದಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಪಾಲಾಗಿರುವ ರೈತರಿಗೆ ಪರಿಹಾರಕೊಟ್ಟು ನೆರವಾಗುವ ಯೋಗ್ಯತೆ ನಿಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇಲ್ಲ. ಗಾಯದ ಮೇಲೆ ಬರ ಎಳೆದಂತೆ ಅದೇ ರೈತರನ್ನು ಹೇಡಿಗಳೆಂದು ಜರಿಯುತ್ತೀರಾ? ಹೊಟ್ಟೆಗೆ ಏನು ತಿನ್ತಿದ್ದೀರಾ?
ವಿನಾಶಕಾರಿ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಆತ್ಮಹತ್ಯೆಗೆ ದೂಡಲು ಹೊರಟಿರುವವರು ಯಾರು? ನ್ಯಾಯಕ್ಕಾಗಿ ಹೋರಾಡುತ್ತಿರುವ ಸ್ವಾಭಿಮಾನಿ ರೈತರ ಮೇಲೆ ಲಾಠಿಯೇಟು, ಅಶ್ರುವಾಯು, ಜಲಫಿರಂಗಿಗಳ ಮೂಲಕ ದೌರ್ಜನ್ಯವೆಸಗುತ್ತಿರುವ ಕೊಲೆಗಡುಕ ಮನಸ್ಸು ಯಾರದು ಬಿ.ಸಿ ಪಾಟೀಲ್? ಎಂದು ಪ್ರಶ್ನಿಸಿದ್ದಾರೆ.