ಹಕ್ಕಿ ಪಿಕ್ಕಿ ಜನಾಂಗದ ಶಾಶ್ವತ ಸೌಲಭ್ಯಕ್ಕೆ ಸರಕಾರಕ್ಕೆ ಪ್ರಸ್ತಾವನೆ : ಮಾಲತಿ ನಾಯಕ್


ಕೊಪ್ಪಳ, ಫೆ. ೦೯: ಕೊಪ್ಪಳ ನಗರದ ಐತಿಹಾಸಿಕ ಗವಿಮಠಕ್ಕೆ ಹೊಂದಿಕೊಂಡಿರುವ ಸುಮಾರು ಇಪ್ಪತ್ತೈದು ಮನೆಗಳಿರುವ ಒಂದು ಸಣ್ಣ ಗುಂಪು, ಹಕ್ಕಿ ಪಿಕ್ಕಿ ಸಮುದಾಯ ಅಥವಾ ಹರಣ ಶಿಕಾರಿ ಸಮುದಾಯಕ್ಕೆ ಮೂಲಭೂತ ಶಾಶ್ವತ ಸೌಲಭ್ಯ ಒದಗಿಸಿಕೊಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್ ಹೇಳಿದರು.
ಅವರು ನಗರದ ಹಕ್ಕಿ ಪಿಕ್ಕಿ ಸಮುದಾಯ ಇರುವ ಸ್ಥಳಕ್ಕೆ ಇಂದು ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಜೊತೆಗೆ ಭೇಟಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಲ್ಲಿರುವ ಜನರನ್ನು ಮನೆ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಆಧುನಿಕ ಸಮಾಜದಲ್ಲಿ ಈ ರೀತಿಯ ಪರಿಸ್ಥಿತಿ ಇರುವದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ, ಇವರು ಬದಲಾಗಬೇಕಾದರೆ ಶಿಕ್ಷಣ ಬೇಕು, ಶಿಕ್ಷಣ ಪಡೆಯಬೇಕಾದರೆ ಅವರಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಗಳು ಸಿಗಬೇಕು ಎಂದರು. ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಇಲ್ಲಿಗೆ ಕರೆಯಿಸಿ ಸೌಲಭ್ಯಗಳನ್ನು ಒದಗಿಸಿಕೊಡುವದು ಜೊತೆಗೆ ಪೋಲಿಸ್ ವ್ಯವಸ್ಥೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವದು ಎಂದರು.
ಕನ್ನಡ ಜನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ|| ಎಸ್. ಬಾಲಾಜಿ ಅವರು ಮಾತನಾಡಿ, ಹಳೆಯ ಪದ್ಧತಿಗಳನ್ನು ಬಿಡಬೇಕು, ಆಧುನಿಕ ಬದುಕಿಗೆ ಹೊಂದಿಕೊಂಡು ನಡೆಯಬೇಕು ಇಲ್ಲವಾದರೆ ಕಷ್ಟವಾಗುತ್ತದೆ, ಸರಕಾರದ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವದು ಎಂದರು. ಬುಡಕಟ್ಟು ಸಮುದಾಯದ ಪರಿಶಿಷ್ಟ ಜಾತಿಗೆ ಒಳಪಡುವ ಇವರಿಗೆ ಇಷ್ಟು ವರ್ಷಗಳು ಕಳೆದರೂ ಸೌಲಭ್ಯ ಸಿಗದಿರುವದು ವಿಚಿತ್ರವಾದ ಸತ್ಯ ಎಂದರು.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಾದ, ನಿಂಗಮ್ಮ, ಯಲ್ಲಮ್ಮ, ಆನಂದಪ್ಪ ಮಾತನಾಡಿ ತಮ್ಮ ಸಂಕಟ ತೊಡಿಕೊಂಡರು. ಸಮಾಜ ತಮಗೆ ಬದುಕಲು ಅವಕಾಶ ಮಾಡಿಕೊಟ್ಟರೆ, ಭಿಕ್ಷೆ ಯಾಕೆ ಬೇಡುತ್ತೇವೆ, ಇಲ್ಲಿನ ಗಂಡಸರು ಬದುಕುವದು ಕಷ್ಟವಾಗಿದೆ, ನಮ್ಮ ಹೆಂಡತಿ ಮಕ್ಕಳು ಭಿಕ್ಷೆ ಬೇಡಿ, ದುಡಿದುತಂದು ಸಾಕುತ್ತಿದ್ದಾರೆ, ಇದನ್ನು ನೋಡಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ, ಸರೋಜಾ ಬಾಕಳೆ, ವಿಜಯಲಕ್ಷ್ಮೀ ಗುಳೇದ್, ಸಲೀಮಾ ಜಾನ್, ಅಶ್ವಿನಿ ಅರಕೇರಾ, ಅಜುಮುನ್ನಿಸಾ ಬೇಗಂ, ರೇಣುಕಾ ಪಾಟೀಲ, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕಜಾಪ ಜಿಲ್ಲಾ ಕಾರ್ಯದರ್ಶಿ ಉಮೇಶ ಸುರ್ವೆ, ಶಿವಲೀಲಾ ಹಿರೇಮಠ, ಅಕ್ಕಮ್ಮ ಕೋಳೂರು, ಮಲ್ಲಪ್ಪ ಹಡಪದ, ಗವಿಸಿದ್ದಪ್ಪ ಹಲಗಿ, ಶಿವಶಂಕರ್ ರಾಠೋಡ ಇತರರು ಭೇಟಿ ನೀಡಿ ಮನವಿ ಸಲ್ಲಿಸಿದರು.
ಕೊಪ್ಪಳ ಜಿಲ್ಲಾ ಕೇಂದ್ರದ ವಾರ್ಡ್ ನಂ. ೧೨ ರಲ್ಲಿರುವ ಸಜ್ಜಿ ಓಣಿ ಎಂಬ ಏರಿಯಾದಲ್ಲಿರುವ ಈ ಸಮುದಾಯ, ಸುಮಾರು ೨೫ ಕುಟುಂಬಗಳು ಇದ್ದು, ಯಾವುದೋ ಒಂದು ಕಾಡಿನಲ್ಲಿ ಬದುಕುವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ೨೧ನೇ ಶತಮಾನದ ಅಂತಿಮ ಹಂತದಲ್ಲಿರುವ ಕಂಪ್ಯೂಟರ್ ಯುಗದಲ್ಲಿಯೂ ಅಸಮಾನ್ಯ, ಅನಾಗರಿಕ ಬದುಕು ಸಾಗಿಸುತ್ತಿರುವದು. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕೊಪ್ಪಳ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶೀಘ್ರ ಆರೋಗ್ಯ ಜಾಗೃತಿ, ಚಿಕಿತ್ಸೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Please follow and like us:
error