You are here
Home > ಈ ಕ್ಷಣದ ಸುದ್ದಿ > ಹಂದಟ್ಟು: ದಲಿತ ಅರ್ಚಕರೆಂಬ ಕಾರಣಕ್ಕೆ ಪರ್ಯಾಯ ದೇವಸ್ಥಾನ

ಹಂದಟ್ಟು: ದಲಿತ ಅರ್ಚಕರೆಂಬ ಕಾರಣಕ್ಕೆ ಪರ್ಯಾಯ ದೇವಸ್ಥಾನ

ದಲಿತ ಧಾರ್ಮಿಕ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಉಡುಪಿ, ಮಾ.: ಕೋಟತಟ್ಟು ಗ್ರಾಮದ ಹಂದಟ್ಟು ಎಂಬಲ್ಲಿರುವ ದೈವ ಸ್ಥಾನದಲ್ಲಿ ಅಸ್ಪೃಶ್ಯ ಜಾತಿಯ ಅರ್ಚಕರೆಂಬ ಕಾರಣಕ್ಕೆ ಸವರ್ಣಿಯರು ಅದೇ ಹೆಸರಿನಲ್ಲಿ ಮತ್ತೊಂದು ದೇವಸ್ಥಾನವನ್ನು ಪರ್ಯಾಯವಾಗಿ ನಿರ್ಮಾಣ ಮಾಡಿ ಪರಿಶಿಷ್ಟ ಜಾತಿಯವರನ್ನು ಧಾರ್ಮಿಕ ದೌರ್ಜನ್ಯಕ್ಕೆ ಒಳಪಡಿಸುತ್ತಿರುವು ದಾಗಿ ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿಯು ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿತು.

ಶ್ರೀದಾನಗುಂದು ಅಮ್ಮ ಮಲಸಾವರಿ ಸಪರಿವಾರ ದೈವಸ್ಥಾನಕ್ಕೆ ಶತ ಶತಮಾನಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಅರ್ಚಕರು ಪೂಜೆ ಪುನಸ್ಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ದೇವರನ್ನು ಆರಾಧಿಸಿಕೊಂಡು ಬರುತ್ತಿದ್ದ ಭಕ್ತರ ಗುಂಪು ದೇವಸ್ಥಾನವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬೇಕಾದರೆ ಈಗಿರುವ ಪರಿಶಿಷ್ಟ ಜಾತಿಗೆ ಸೇರಿದ ಅರ್ಚಕರು ದೇವರ ಪೂಜಾ ಕೈಂಕರ್ಯ ಬಿಟ್ಟು ಬಿಡಬೇಕು, ಅವರ ಜಾಗಕ್ಕೆ ಉತ್ತಮ ಕುಲದ ಬ್ರಾಹ್ಮಣ ಅರ್ಚಕರ ನೇಮಕ ಆಗಬೇಕು ಮತ್ತು ಪರಿಶಿಷ್ಟರು ಪೂಜೆ ಮಾಡುವುದರಿಂದ ದೇವರಿಗೆ, ಊರಿಗೆ ಮಂಕು ಕವಿದಿದೆ ಎಂದು ಪ್ರತಿಪಾದನೆ ಮಾಡಿದ್ದಾರೆಂದು ಸಮಿತಿ ಮನವಿಯಲ್ಲಿ ದೂರಿದೆ.

ಇದಕ್ಕೆ ಅಲ್ಲಿ ತಲತಲಾಂತರದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ದಲಿತ ಅರ್ಚಕರು ವಿರೋಧ ವ್ಯಕ್ತಪಡಿಸಿ, ಪೂಜೆ ಹಕ್ಕು ಬಿಟ್ಟುಕೊಡಲು ನಿರಾ ಕರಿಸಿದ್ದಾರೆ. ಈ ಪ್ರಕರಣವು ಪೊಲೀಸ್ ಠಾಣೆಗೂ ತಲುಪಿ ನಡೆದ ರಾಜಿ ಪಂಚಾಯತಿಯಂತೆ ಸವರ್ಣೀಯ ಹಿಂದೂ ಗುಂಪು ದೇವಸ್ಥಾನದ ಚಟುವಟಿಕೆ ಯಿಂದ ದೂರ ಉಳಿದಿದ್ದರು. ನಂತರ ಕಳೆದ ನಾಲ್ಕು ವರ್ಷಗಳಿಂದ ಊರಿನ ಕೆಲವು ದೈವ ಭಕ್ತರು, ಪರಿಶಿಷ್ಟ ಜಾತಿ ಅರ್ಚಕರು ಹಾಗೂ ದೇವರನ್ನು ನಂಬಿ ಕೊಂಡು ಬಂದ ಕೆಲವು ಕುಟುಂಬಗಳು ದೇವಸ್ಥಾನದ ಧಾರ್ಮಿಕ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದರು.

ದೇವಸ್ಥಾನದ ಅಡುಗೆ ಪಾತ್ರೆಗಳು, ದೈವದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಇತರ ಪರಿಕರಗಳು ಈ ಸವರ್ಣೀಯ ಗುಂಪಿನವರು ಇನ್ನೂ ಕಾನೂನು ಬಾಹಿರವಾಗಿ ಅವರ ವಶದಲ್ಲಿ ಇಟ್ಟುಕೊಂಡಿದ್ದಾರೆ. ಈಗ ಇದೇ ಜಾತಿವಾದಿ ಸಮ ಸಮಾಜ ವಿರೋಧಿ ಮನಸ್ಥಿತಿಯ ಗುಂಪು ಈ ದೇವಸ್ಥಾನದಿಂದ ಕೇವಲ 400 ಮೀಟರ್ ದೂರದಲ್ಲಿ ಜಾಗ ಖರೀದಿಸಿ ಅಭಿವೃದ್ಧಿ ಪಡಿಸಿ ಅಲ್ಲಿ ಇದೇ ಹೆಸರಿನ ಇನ್ನೊಂದು ದೇವಸ್ಥಾನವನ್ನು ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದ್ದಾರೆ ಎಂದು ದಸಂಸ ಮನವಿಯಲ್ಲಿ ತಿಳಿಸಿದೆ.

ಆದುದರಿಂದ ಕೂಡಲೇ ಪರಿಶಿಷ್ಟರ ಧಾರ್ಮಿಕ ಹಕ್ಕು ಮತ್ತು ಘನತೆಯನ್ನು ಘಾಸಿಗೊಳಿಸುತ್ತಿರುವ ಸವರ್ಣೀಯ ಜಾತಿ ಶಕ್ತಿಯ ಹಿಂದಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸಮಿತಿಯ ಒತ್ತಾಯಿಸಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಈ ಕುರಿತು ಪರಿ ಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಜಯನ್ ಮಲ್ಪೆ, ದಸಂಸ ಸಂಘಟನಾ ಸಂಚಾಲಕ ಮಂಜುನಾಥ್ ಗಿಳಿಯಾರು, ಮುಖಂಡರಾದ ಕುಮಾರ್ ಕೋಟ, ರಾಜಶೇಖರ್ ಗುಲ್ಲಾಡಿ, ಸಂಜೀವ ಕಾಳವಾರ, ಅರ್ಚಕ ರಾದ ಲಕ್ಷ್ಮಣ್ ಬತ್ತ್ತಾಳ, ಕೃಷ್ಣ ಬತ್ತಾಳ, ಲಕ್ಷ್ಮೀ, ಕರುಣಾಕರ, ಸುಧಾಕರ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

‘ಈ ದೇವರನ್ನು ನಂಬಿದ ಭಕ್ತರಿಗೆ, ಊರಿನವರಿಗೆ ಈ ಜಾತಿವಾದಿ ಗುಂಪು ತಮ್ಮ ವಾದವನ್ನು ಮುಂದಿಡುತ್ತಾ, ದಲಿತರ ಕೈಯಿಂದ ತೀರ್ಥ ಪ್ರಸಾದ ಸ್ವೀಕರಿಸುವುದು ಅವಮಾನ, ಅವರು ಪೂಜಿಸುವ ಸ್ಥಳದಲ್ಲಿ ದೇವರು ಖಂಡಿತಾ ನಿಲ್ಲುವುದಿಲ್ಲ, ನಾವು ಹೊಸದಾಗಿ ನಿರ್ಮಾಣ ಮಾಡುವ ದೇವಸ್ಥಾನಕ್ಕೆ ಅಲ್ಲಿಯ ದೇವರು ಬಂದು ನೆಲೆಸುತ್ತಾರೆ, ನೀಚ ಜಾತಿಯವರ ಎದುರು ಹೋಗಿ ನಿಂತು ಯಾರೂ ಕೈ ಮುಗಿಯಬೇಡಿ, ಅಲ್ಲಿ ದೇವರು ಇಲ್ಲ… ಹೀಗೆ ದಲಿತ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮಂಜುನಾಥ್ ಗಿಳಿಯಾರು ಆರೋಪಿಸಿದರು.

Top