ಸೆಲೆಕ್ಟಿವ್ ಆಗಿರುವ ಮೌನ ಮತ್ತು ಮಾತು- ಸ್ವಸ್ಥ ಸಮಾಜದ ಎರಡು ದೊಡ್ಡ ಶತ್ರುಗಳು-ದಿನೇಶ್ ಅಮೀನಮಟ್ಟು

ಅರ್ನಾಬ್ ಬೆನ್ನಿಗಿರುವ ಪ್ರಭುತ್ವ ಮತ್ತು ಅರ್ನಬ್‌ನನ್ನು ಬೆನ್ನುಹತ್ತಿರುವ ಪ್ರಭುತ್ವ – ಎರಡೂ ಒಂದೇ ಎನ್ನುವ ಹೊಸ ವಾದವೊಂದು ಹುಟ್ಟಿಕೊಂಡಿದೆ.

ಭಾರತ ಮತ್ತು ಮಹಾರಾಷ್ಟ್ರ, ಬಿಜೆಪಿ- ಶಿವಸೇನೆ ಹೇಗೆ ಗಾತ್ರ.ಪಾತ್ರ, ಶಕ್ತಿ ಮತ್ತು ಪ್ರಭಾವದಲ್ಲಿ ಒಂದೇ ಅಲ್ಲವೋ ಹಾಗೆಯೇ ಈ ಎರಡು ಪ್ರಭುತ್ವಗಳು ಒಂದೇ ಅಲ್ಲ. ಹಾಗೆಯೇ ಅನ್ವಯ್ ನಾಯಕ್ ಅವರ ಪತ್ನಿ ಮತ್ತು ಮಗಳು ಹಾಗೂ ಅರ್ನಬ್ ಗೋಸ್ವಾಮಿ ಒಂದೇ ಅಲ್ಲ.

ಕಳೆದ ಕೆಲವೇ ತಿಂಗಳುಗಳ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಪೊಲೀಸರು ಬಂಧಿಸಿರುವ ಪತ್ರಕರ್ತರಾದ ಸಿದ್ದಿಕಿ ಕಪ್ಪಣ್, ಕಿಶೋರ್ ಚಂದ್ ವಾಂಗ್ ಕೇಮ್, ಪ್ರಶಾಂತ್ ಕನೋಜಿಯಾ, ರಾಜೀಬ್ ಸರ್ಮಾ, ಧಾವಲ್ ಪಟೇಲ್, ನರೇಶ್ ಕೋಹಲ್, ರಾಹುಲ್ ಕುಲಕರ್ಣಿ, ರಾಜೀವ್ ಶರ್ಮಾ, ತ್ಸೇವಾಂಗ್ ರಿಗ್ ಜಿನ್ ಮೊದಲಾದವರ ಬಗ್ಗೆ ಮಾತನಾಡುವುದು ಬಿಡಿ, ಅವರ ಹೆಸರನ್ನೇ ನಮ್ಮಲ್ಲಿ ಬಹಳಷ್ಟು ಮಂದಿ ಕೇಳಿಲ್ಲ. ಇವರಲ್ಲಿ ಹೆಚ್ಚಿನವರು ಈಗಲೂ ಜೈಲಲ್ಲಿದ್ದಾರೆ. ನಮ್ಮಲ್ಲಿಯೇ ಪೊಲೀಸರು ಬಂಧಿಸಿದ ಪವರ್ ಟಿವಿ ಸಂಪಾದಕರ ಕತೆ ಏನೆಂದು ಯಾರಿಗೂ ಗೊತ್ತಿಲ್ಲ. ಸೆಲೆಕ್ಟಿವ್ ಆಗಿರುವ ಮೌನ ಮತ್ತು ಮಾತು, ಸ್ವಸ್ಥ ಸಮಾಜದ ಎರಡು ದೊಡ್ಡ ಶತ್ರುಗಳು.

ಅರ್ನಬ್ ಗೋಸ್ವಾಮಿ ಬಗ್ಗೆ ಮಾತ್ರ ಎಲ್ಲರೂ ಹಠಕ್ಕೆ ಬಿದ್ದವರಂತೆ ಚರ್ಚೆ ಮಾಡುತ್ತಿರುವುದು ಯಾಕೆ? ಆತ ಒಬ್ಬ ಪತ್ರಕರ್ತನೆಂದೇ? ಇಲ್ಲವೇ ಬೇರೆ ಏನಾದರೂ ಕಾರಣ ಇರಬಹುದೇ? ಆ ಒಂಬತ್ತು ಪತ್ರಕರ್ತರನ್ನು ಬಂಧಿಸಿರುವ ಪ್ರಭುತ್ವ ಮತ್ತು ಅರ್ನಬ್ ನನ್ನು ಬಂಧಿಸಿರುವ ಪ್ರಭುತ್ವ ಒಂದೇ ಎಂದಾದರೆ, ಅರ್ನಬ್ ಬಂಧನ ದೇಶಾದ್ಯಂತ ಮಾಡಿರುವ ಸಂಚಲನವನ್ನು ಆ ಬಡಪಾಯಿ ಪತ್ರಕರ್ತರ ಬಂಧನ ಯಾಕೆ ಮಾಡಲಿಲ್ಲ?

ನಮ್ಮನ್ನೆಲ್ಲ ಪರ-ವಿರೋಧ ಚರ್ಚೆಗೆ ತಳ್ಳಿರುವ ಅರ್ನಬ್ ತನ್ನ ಅಟ್ಟಹಾಸಕ್ಕೆ ಶಕ್ತಿ ಸಂಚಯಿಸಿಕೊಂಡಿರುವುದು ಎಲ್ಲಿಂದ? ತನ್ನ ವೃತ್ತಿಯ ಸಾಧನೆಯಿಂದಲೇ? ಇಲ್ಲವೇ ತನ್ನ ಬೆನ್ನಿಗಿರುವ ಪ್ರಭುತ್ವದ ಶಕ್ತಿಯಿಂದಲೇ? ಅರ್ನಬ್ ಗೋಸ್ವಾಮಿ ಬಂಧನವನ್ನು ಒಬ್ಬ ಪತ್ರಕರ್ತನ ಮೇಲೆ ಪ್ರಭುತ್ವ ನಡೆಸಿರುವ ದಾಳಿ ಎಂದು ಸರಳೀಕರಿಸಿ ನೋಡಿದರೆ ಬಲಗೊಳ್ಳುವುದು ಮಾಧ್ಯಮ ಕ್ಷೇತ್ರವೇ? ಹಲವು ಪತ್ರಕರ್ತರನ್ನು ಬೇಟೆಯಾಡುತ್ತಿರುವ ಪ್ರಭುತ್ವವವೇ? ನಾವು ಅರ್ನಬ್ ನನ್ನು ಬೆಂಬಲಿಸಿದರೆ ಬಲಗೊಳ್ಳುತ್ತಾ ಹೋಗುವುದು ದೇಶಾದ್ಯಂತ ವೃತ್ತಿಪರ, ಅಸಹಾಯಕ ಪತ್ರಕರ್ತರನ್ನು ಬೇಟೆಯಾಡುತ್ತಿರುವ ಪ್ರಭುತ್ವವನ್ನು ಎನ್ನುವುದನ್ನು ನಾವು ಮರೆತರೆ ಹೇಗೆ? ಅರ್ನಬ್ ರೋಗ ಅಲ್ಲ, ಆತ ರೋಗದ ಲಕ್ಷಣ ಎನ್ನವುದು ನಿಜ. ಆದರೆ ರೋಗದ ಲಕ್ಷಣವನ್ನು ಮರೆತು ರೋಗಕ್ಕೆ ಮದ್ದು ನೀಡಲು ಸಾಧ್ಯವೇ ಎನ್ನವುದು ಪ್ರಶ್ನೆ.

ಅರ್ನಬ್ ಪ್ರಭುತ್ವದ ಕೈಗೊಂಬೆ ಮಾತ್ರ, ಆತ ವ್ಯವಸ್ಥೆಯ ಭಾಗ ಅಲ್ಲ ಎಂದು ವ್ಯಾಖ್ಯಾನಿಸುವುದು ಮಾಧ್ಯಮ ಕ್ಷೇತ್ರಕ್ಕೆ ನಾವು ಮಾಡುವ ದ್ರೋಹವಾಗುತ್ತದೆ. ಈ ರೀತಿ ನಾವು ಅರ್ನಬ್ ಮಾದರಿ ಮಾಧ್ಯಮವನ್ನು ಕುರುಡುಪಟ್ಟಿ ಕಟ್ಟಿಕೊಂಡು ಸಮರ್ಥಿಸುವುದರಿಂದ ಈಗಾಗಲೇ ದೇಶಾದ್ಯಂತ ಹುಟ್ಟಿಕೊಂಡಿರುವ ಮರಿ ಅರ್ನಬ್ ಗಳ ಸಂತತಿ ಹೆಚ್ಚಿಸಿದ ಅಪರಾಧಿಗಳು ನಾವಾಗುತ್ತೇವೆ.

ಇಲ್ಲಿನ ಇನ್ನೊಂದು ಮುಖ್ಯವಾದ ಪ್ರಶ್ನೆ ಇರುವುದು, ಪತ್ರಕರ್ತರು ಕಾನೂನಿಂದ ಅತೀತರೇ ಎನ್ನುವುದು. ಒಬ್ಬ ಪತ್ರಕರ್ತ ಕಾನೂನು ಪ್ರಕಾರ ಅಪರಾಧವಾಗಿರುವುದನ್ನು ಮಾಡಿ ಸಿಕ್ಕಿಹಾಕಿಕೊಂಡು ಆತ್ಮರಕ್ಷಣೆಗಾಗಿ ತನ್ನ ವೃತ್ತಿಯ ಹೆಸರಿನ ಗುರಾಣಿ ಬಳಸಿಕೊಂಡಾಗ ನಾವು ಕಣ್ಣು ಮುಚ್ಚಿಕೊಂಡು ಆತನ ಸಮರ್ಥನೆಗೆ ಇಳಿದರೆ ಹೇಗೆ? ಇಂತಹ ಯಾವ ಗುರಾಣಿಯೂ ಇಲ್ಲದ ಸಾಮಾನ್ಯ ಜನತೆಯ ಪಾಡೇನು? ಇಂತಹ ಗುರಾಣಿಗಳನ್ನು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಮರ್ಥಿಸುತ್ತಿರುವ ಕಾರಣದಿಂದಾಗಿಯೇ ಇಂದಿನ ಮಾಧ್ಯಮವನ್ನು ಭ್ರಷ್ಟರು, ದುಷ್ಟರು, ಕ್ರಿಮಿನಲ್ ಗಳು ಆಳುತ್ತಿರುವುದು ಮತ್ತು ಕಸಬುದಾರ ಪತ್ರಕರ್ತರು ಮನೆಯಲ್ಲಿ ಕೂತಿರುವುದಲ್ಲವೇ?
ಸಂವಿಧಾನ ರಚನೆಯ ಸಭೆಯಲ್ಲಿ ಪತ್ರಕರ್ತರಿಗೆ ಕೂಡಾ ಶಾಸಕ/ಸಂಸದರಿಗೆ ಇರುವ Immunity ಮತ್ತು Privilege ಇರಬೇಕೆಂಬ ಚರ್ಚೆ ನಡೆದಿತ್ತು. ಆದರೆ ಸ್ವತ: ಪತ್ರಕರ್ತರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಆ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ನಿರಾಕರಿಸಿದ್ದರು ಎನ್ನುವುದನ್ನು ನಾವು ಮರೆಯಬಾರದು.

ಹಿಂದಿನ ಯಾವುದೋ ಪ್ರಭುತ್ವ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ನೆರವಿಗೆ ನಿಲ್ಲದೆ, ಆರೋಪಿ ಪರ ನಿಂತು ಪ್ರಕರಣವನ್ನು ಮುಚ್ಚಿಹಾಕಿದರೆ, ಹೊಸ ಪ್ರಭುತ್ವ ‘ ನಾವೇನು ಮಾಡಲಿಕ್ಕೆ ಆಗುತ್ತೆ? ಹಿಂದಿನವರೇ ಮಾಡಿದ್ದು’’ ಎಂದು ಕಣ್ಣು ಮುಚ್ಚಿಕೊಳ್ಳಬೇಕೇ? ಹಾಗಿದ್ದರೆ ಬದಲಾವಣೆ ಎಂದರೆ ಏನು? 2G ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಎದುರಾಳಿ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬಂದ ಪಕ್ಷ ಅದರ ನಂತರ ಎಂದಾದರೂ ಆ ಹಗರಣಗಳ ಬಗ್ಗೆ ಮಾತನಾಡಿದೆಯೇ?

ಈ ಬಗ್ಗೆ ಹಗಲು ರಾತ್ರಿ ಬೊಬ್ಬಿರಿದು ಅಬ್ಬರಿಸುತ್ತಿದ್ದವನು ಇದೇ ಅರ್ನಬ್ ಗೋಸ್ವಾಮಿ ಅಲ್ಲವೇ? ಈತ ಎಂದಾದರೂ ಅಧಿಕಾರಕ್ಕೆ ಬಂದವರನ್ನು ಹಗರಣಗಳ ತನಿಖೆಗಾಗಿ ಪ್ರಶ್ನಿಸಿದ್ದಾನೆಯೇ? ಅನ್ವಯ್ ನಾಯಕ್ ಆತ್ಮಹತ್ಯೆಯ ಪ್ರಕರಣದ ಬಗ್ಗೆಯೂ ಹಾಗೆಯೇ ಮಹಾರಾಷ್ಟ್ರ ಸರ್ಕಾರ ಕಣ್ಣು ಮುಚ್ಚಿ ಕೂತಿದ್ದರೆ ಈ ದೇಶದ ಮಾಧ್ಯಮ ಕ್ಷೇತ್ರ ಯಾವುದೇ ದಾಳಿಗೊಳಗಾಗದೆ ಸುರಕ್ಷಿತವಾಗಿ ಉಳಿಯುತ್ತಿತ್ತೋ ಏನೋ?
ಅರ್ನಾಬ್ ಗೋಸ್ವಾಮಿಯ ಬಂಧನ ವಿರುದ್ಧ ಸಿಡಿದೆದ್ದಿರುವ ಮತ್ತು ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಬಣ್ಣಿಸುತ್ತಿರುವ ಬಹಳ ಮಂದಿಗೆ 1998ರಲ್ಲಿ ದೇಶದ ಅತಿದೊಡ್ಡ (ಆಗಲೂ-ಈಗಲೂ) ಮಾಧ್ಯಮ ಸಂಸ್ಥೆಯ ಮಾಲೀಕರ ಬಂಧನದ ಬಗ್ಗೆ ಗೊತ್ತಿರಲಾರದು, ಗೊತ್ತಿದ್ದರೂ ಮರೆತಿರಬಹುದು. ಆ ಮಾಧ್ಯಮ ಧಣಿಯ ಹೆಸರು ಅಶೋಕ್ ಜೈನ್, ಅವರು ಟೈಮ್ಸ್ ಆಫ್ ಇಂಡಿಯಾದ ಮಾಲೀಕರಾಗಿದ್ದರು. ಅವರನ್ನು ಬಂಧಿಸಿದ್ದು ಯಾರು ಗೊತ್ತಾ? ಪ್ರಧಾನಿ ಅಟಲಬಿಹಾರಿ ವಾಜಪೇಯಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ.

ಆ ಬಂಧನವನ್ನು ಯಾರೂ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಣ್ಣಿಸಿರಲಿಲ್ಲ. ಇಂದಿಗೂ ಪತ್ರಕರ್ತರ ಮೇಲಿನ ಪ್ರಭುತ್ವದ ದಾಳಿಯ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ತಪ್ಪಿಯೂ ಅಶೋಕ್ ಜೈನ್ ಹೆಸರನ್ನು ಉಲ್ಲೇಖಿಸುವುದಿಲ್ಲ. ಯಾಕೆಂದರೆ ಅಶೋಕ್ ಜೈನ್ ಕೋಟ್ಯಂತರ ರೂಪಾಯಿಯ ಫೇರಾ ಉಲ್ಲಂಘನೆಯ ಹಗರಣದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದರು. ಆಗ ಯಾವ ಪತ್ರಕರ್ತರಾಗಲಿ, ಪತ್ರಕರ್ತರ ಸಂಘಟನೆಗಳಾಗಲಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಖಂಡಿಸಲಿಲ್ಲ. ಉಳಿದವರು ಬಿಡಿ, ಅಷ್ಟೊಂದು ಬೃಹತ್ ಮತ್ತು ಪ್ರಭಾವಿ ಮಾಧ್ಯಮ ಜಾಲವನ್ನು ಹೊಂದಿರುವ ಟೈಮ್ಸ್ ಆಫ್ ಇಂಡಿಯಾ ಕೂಡಾ ಇಂದಿನ ರಿಪಬ್ಲಿಕ್ ಟಿವಿ ಚಾನೆಲ್ ನಂತೆ 24 ಗಂಟೆ ಎದೆಬಡಿದುಕೊಂಡು ಕೂಗಾಡಿರಲಿಲ್ಲ.

ಹೌದು, ಅಶೋಕ್ ಜೈನ್ ಸಂಪಾದಕರಾಗಿರಲಿಲ್ಲ, ಮಾಲೀಕರಾಗಿದ್ದರಲ್ಲವೇ ಎಂದು ಕೆಲವರು ಪ್ರಶ್ನಿಸಬಹುದು. ಇಂದಿನ ಮಾಧ್ಯಮ ಕ್ಷೇತ್ರದ ನಿಜವಾದ ಸಮಸ್ಯೆ ಈ ಪ್ರಶ್ನೆಯಲ್ಲಿದೆ. ಸಂಪಾದಕ ಮತ್ತು ಮಾಲೀಕನ ನಡುವಿನ ಗೆರೆ ನಿಧಾನವಾಗಿ ಮಾಯವಾಗುತ್ತಿದೆ.

ಒಂದು ಕಾಲದಲ್ಲಿ ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಬದಲಾಗಿ ಈಗ ಸ್ವೋದ್ಯೋಮವಾಗಿದೆ. ಸ್ಕ್ರೀನ್ ನಲ್ಲಿ ಪತ್ರಕರ್ತ, ಆಪ್ ಸ್ಕ್ರೀನ್ ನಲ್ಲಿ ಉದ್ಯಮಿ. ಆಫ್ ಸ್ಕ್ರೀನ್ ನಲ್ಲಿ ಉದ್ಯಮಿಯಾಗಿ ಮಾಡಬಾರದ್ದ ಅಡ್ಡಕಸುಬಿ ವ್ಯವಹಾರಗಳನ್ನೆಲ್ಲ ಮಾಡಿ, ಸ್ಕ್ರೀನ್ ನಲ್ಲಿ ಪತ್ರಕರ್ತನ ದಿರಿಸಿನಲ್ಲಿ ಬಂದು ಕೂತು ಮೇಜು ಕುಟ್ಟಿದರೆ ಯಾವುದಕ್ಕೆ, ಯಾರನ್ನು ಹೊಣೆ ಮಾಡಬೇಕು? ಅರ್ನಾಬ್ ಗೋಸ್ವಾಮಿ ಬಂಧನವಾಗಿದ್ದು ಯಾವ ಆರೋಪದ ಮೇಲೆ?

ದಿ ಹಿಂದು, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಹೀಗೆ ಒಂದು ಕಾಲದ ಪ್ರಮುಖ ಮಾಧ್ಯಮ ಸಂಸ್ಥೆಗಳ ಮಾಲಿಕರಲ್ಲಿ ಪತ್ರಿಕೆ ಮತ್ತು ಉದ್ಯಮಗಳ ಹಿತಾಸಕ್ತಿಗಳ ಸಂಘರ್ಷ ಇರಲಿಲ್ಲ. ಇವರಲ್ಲಿ ಯಾರೂ ದೊಡ್ಡ ಉದ್ಯಮಗಳ ಮಾಲೀಕರಾಗಿರಲಿಲ್ಲ. ಈ ಎಲ್ಲ ಪತ್ರಿಕೆಗಳಿಗೆ ಕಸಬುದಾರ ಸಂಪಾದಕರಿದ್ದರು. ಆದರೆ ಮಾಧ್ಯಮ ಉದ್ಯಮದ ರೂಪ ಪಡೆಯುತ್ತಿದ್ದಂತೆಯೇ ಸಂಪಾದಕರ ಕುರ್ಚಿಯಲ್ಲಿ ಹೌದಪ್ಪಾ ಗಳನ್ನು ತಂದು ಕೂರಿಸುವ ಪರಿಪಾಠ ಶುರುವಾಯಿತು. ಇದನ್ನು ಬಹಳ ಬೇಗ ಅರ್ಥಮಾಡಿಕೊಂಡ ಕಸಬುದಾರ ಪತ್ರಕರ್ತರು ಕೂಡಾ ಹೌದಪ್ಪಾ ಸಂಪಾಕದರಾಗಿ ಬದಲಾಗಿ ಬಿಟ್ಟರು.

ಅಶೋಕ್ ಜೈನ್ ಅವರನ್ನು ವಾಜಪೇಯಿ ಸರ್ಕಾರ ಬಂಧಿಸಿದಾಗ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸಂಪಾದಕರಾಗಿದ್ದವರು ಹಿರಿಯ ಪತ್ರಕರ್ತ ಎಚ್.ಕೆ.ದುವಾ. ತಮ್ಮ ಪತ್ರಿಕೆಯಲ್ಲಿ ತನ್ನ ಬಂಧನದ ವಿರುದ್ಧ ಜನಾಭಿಪ್ರಾಯ ರೂಪಿಸಲು ಮತ್ತು ರಾಜಕಕೀಯ ಲಾಬಿ ನಡೆಸಲು ಜೈನ್ ಅವರು ದುವಾ ಅವರಿಗೆ ತಿಳಿಸಿದ್ದರಂತೆ. ದುವಾ ನಿರಾಕರಿಸಿದಾಗ ಅವರನ್ನು ಸಂಪಾದಕನ ಸ್ಥಾನದಿಂದ ಕಿತ್ತು ಹಾಕಲಾಯಿತು. (ಇದನ್ನು ದುವಾ ಅವರೇ ಬರೆದುಕೊಂಡಿದ್ದಾರೆ). ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದ್ದು ಯಾರದ್ದು? ಇದರ ನಂತರ ಟೈಮ್ಸ್ ಆಫ್ ಇಂಡಿಯಾ ಬಹಳ ಎಚ್ಚರಿಕೆಯಿಂದ ಸಂಪಾದಕರನ್ನು ನೇಮಿಸತೊಡಗಿತು. ದೊಡ್ಡ ಹೆಸರಿನ ಪತ್ರಕರ್ತರನ್ನು ಸಂಪಾದಕನನ್ನಾಗಿ ಮಾಡಲು ಹೋಗಲಿಲ್ಲ.

ಪತ್ರಕರ್ತ/ಸಂಪಾದಕನ ವಿಶ್ವಾಸಾರ್ಹತೆ ಇರುವುದು ಆತನ ನಿಷ್ಪಕ್ಷಪಾತ ಧೋರಣೆಯಿಂದ. ಮುಖ್ಯವಾಹಿನಿ ಪತ್ರಿಕೆಗಳು ಮತ್ತು ಸಂಪಾದಕರ ವಿಶ್ವಾಸಾರ್ಹತೆ ಬಗ್ಗೆ ಮೊದಲ ಬಾರಿ ಪ್ರಶ್ನೆ ಹುಟ್ಟಿಕೊಂಡಿದ್ದು ರಾಮನಾಥ ಗೊಯೆಂಕಾ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಘರ್ಷಣೆಯಿಂದ. ಹುಟ್ಟು ಕಾಂಗ್ರೆಸ್ ವಿರೋಧಿಯಾಗಿದ್ದ ಗೋಯಂಕಾ ಅವರ ಕಾಂಗ್ರೆಸ್ ವಿರುದ್ಧದ ನಿಲುವಲ್ಲಿ ಯಾರೂ ದೋಷವನ್ನು ಕಂಡಿರಲಿಲ್ಲ. ಆದರೆ ಧೀರುಭಾಯಿ ಅಂಬಾನಿಯ ರಿಲಯನ್ಸ್ ವಿರುದ್ಧ ಸಮರ ಸಾರಿದಾಗ ರಾಮನಾಥ ಗೊಯೆಂಕಾ ಅವರು ಬಾಂಬೆ ಡೈಯಿಂಗ್ ನ ನುಸ್ಲಿ ವಾಡಿಯಾನ ಕೈಹಿಡಿದುಕೊಂಡ ಕಾರಣಕ್ಕಾಗಿ ವಿಶ್ವಾಸಾರ್ಹತೆ ಕಳೆದುಕೊಂಡರು.

ನಾನಿನ್ನೂ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದ ಪ್ರಾರಂಭದ ದಿನಗಳಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮುಖಪುಟದಲ್ಲಿ ಪ್ರತಿದಿನ ಸಂಪಾದಕ ಅರುಣ್ ಶೌರಿ ಮತ್ತು ಎಸ್. ಗುರುಮೂರ್ತಿ ಬರೆಯುತ್ತಿದ್ದ ರಿಲಯನ್ಸ್ ವಿರುದ್ದದ ಸರಣಿ ತನಿಖಾ ವರದಿಗಳು ಪ್ರಕಟವಾಗುತ್ತಿದ್ದವು. ಅದರ ನಂತರ ಪ್ರಧಾನಿ ರಾಜೀವ್ ಗಾಂಧಿಯವರು ಗೋಯೆಂಕಾ ಮೇಲೆ ಐಟಿ,ಇಡಿ ದಾಳಿಗಳನ್ನು ನಡೆಸಿದ್ದರು.

ಕಾಲದ ಚಕ್ರದ ಉರುಳಾಟ ನೋಡಿ, ಒಂದು ಕಾಲದಲ್ಲಿ ರಿಲಯನ್ಸ್ ಕಾಂಗ್ರೆಸ್ ಪರವಾಗಿದೆ ಎನ್ನುವ ಕಾರಣಕ್ಕಾಗಿ ಗೋಯೆಂಕಾ ಅವರು ಅದರ ವಿರುದ್ಧ ಸಮರ ಸಾರಿದ್ದರು. ಇಂದಿನ ರಿಲಯನ್ಸ್ ಯಾರ ಪರವಾಗಿದೆ? ಇನ್ನೂ ಒಂದು ಸುತ್ತಿನ ಉರುಳಾಟ ನೋಡಿ, ಗೊಯೆಂಕಾ ಅವರು ತನ್ನ ಪತ್ರಿಕೆಯ ಮೂಲಕ ಧೀರೂಬಾಯಿ ಅಂಬಾನಿಯನ್ನು ನಜ್ಜುಗುಜ್ಜು ಮಾಡಿದ್ದರು. ಇಂದು ಅದೇ ರಿಲಯನ್ಸ್ ದೇಶದ ಅತ್ಯಂತ ದೊಡ್ಡ ಮಾಧ್ಯಮ ಜಾಲದ ಒಡೆತನ ಹೊಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಬಹುಪಾಲು ಪತ್ರಕರ್ತರು ರಿಲಯನ್ಸ್ ಕಂಪೆನಿಯ ನೌಕರರಾಗಿರುತ್ತಾರೆ.

ನಾವು ಆತಂಕಕ್ಕೀಡಾಗಬೇಕಾಗಿರುವುದು ಈ ಬೆಳವಣಿಗೆ ಬಗ್ಗೆ. ಆದರೆ ನಾವಿನ್ನೂ ಅರ್ನಾಬ್ ಗೋಸ್ವಾಮಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆ ಎಂದು ರೋದಿಸುತ್ತಾ ಕೂತಿದ್ದೇವೆ.
(ಸದ್ಯಕ್ಕೆ ಮುಗಿಯಿತು)

 

 

Please follow and like us:
error