ಸಿಎಬಿ ತಿರಸ್ಕರಿಸಿದ ಕೇರಳ, ಪಂಜಾಬ್

ತಿರುವನಂತಪುರ/ ಚಂಡೀಗಢ, ಡಿ.13: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಬಿ)ಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ಪ್ರಶ್ನೆಯೇ ಇಲ್ಲ ಎಂದು ಕೇರಳ ಹಾಗೂ ಪಂಜಾಬ್ ರಾಜ್ಯಗಳು ಘೋಷಿಸಿವೆ.

ತಿರುವನಂತಪುರದಲ್ಲಿ ಹೇಳಿಕೆ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪೌರತ್ವ ವಿಚಾರ ಕೇಂದ್ರ ಪಟ್ಟಿಯಲ್ಲಿ ಸೇರಿದ್ದರೂ, ಈ ಸಂಬಂಧದ ಕಾಯ್ದೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವಂತಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಕಾಯ್ದೆ ಭಾರತದ ಜಾತ್ಯತೀತತೆ ಮೇಲಿನ ನೇರ ಹಲ್ಲೆಯಾಗಿದ್ದು, ಇದನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟರ್ ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ ಸಿಎಬಿ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಯಾವ ಪಾತ್ರವೂ ಇಲ್ಲ ಎಂದು ಸಂವಿಧಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇರಳ ಸಿಎಂ ತಳೆದಿರುವ ನಿಲುವಿಗೆ ಕಾನೂನಾತ್ಮಕವಾಗಿ ಯಾವ ಪ್ರಸ್ತುತತೆಯೂ ಇಲ್ಲ ಎಂದು ಹೇಳಿದ್ದಾರೆ.

ಪೌರತ್ವ ವಿಚಾರ ಕೇಂದ್ರ ಪಟ್ಟಿಯಲ್ಲಿ ಸೇರುವುದರಿಂದ ಯಾವ ರಾಜ್ಯ ಸರ್ಕಾರ ಕೂಡಾ ಈ ಸಂಬಂಧದ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ತಿರಸ್ಕರಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ಕಮಲ್ ಪಾಷಾ ಈ ಬಗ್ಗೆ ಪ್ರತಿಕ್ರಿಯಿಸಿ, “ಇಂಥ ಹೇಳಿಕೆಯನ್ನು ತಕ್ಷಣಕ್ಕೆ ನೀಡಿರಬಹುದು. ಆದರೆ ಪೌರತ್ವ ವಿಚಾರ ಕೇಂದ್ರಪಟ್ಟಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ನಿರಾಕರಿಸುವಂತಿಲ್ಲ” ಎಂದು ಅಭಿಪ್ರಾಯಪಟ್ಟರು.

ಖ್ಯಾತ ಕಾನೂನು ತಜ್ಞ ಕಲೀಶ್ವರರಾಮ ರಾಜ್ ಅವರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಕಾಯ್ದೆಯೇ ಸಂವಿಧಾನ ಬಾಹಿರವಾಗಿದ್ದು, ತಮ್ಮ ನಾಗರಿಕರನ್ನು ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಮಾರ್ಗಗಳಿವೆ ಎಂದು ಉಭಯ ಗಣ್ಯರು ಹೇಳಿದ್ದಾರೆ.

Please follow and like us:
error