ಸಿಎಎ ವಿರುದ್ಧ ಹೋರಾಡಿ, ಜೈಲಿಗೆ ಹೋಗಲು ಸಿದ್ಧರಾಗಿ: ಎಚ್.ಡಿ.ದೇವೇಗೌಡ ಕರೆ

“ಮುಸ್ಲಿಮರನ್ನು 2ನೇ ದರ್ಜೆ ನಾಗರಿಕರನ್ನಾಗಿ ಮಾಡಲು ಹೊರಟಿದ್ದಾರೆ”

ಬೆಂಗಳೂರು, ಜ.23: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್ಸಿ ಹಾಗೂ ಎನ್‌ಪಿಆರ್ ದೇಶಕ್ಕೆ ಬಂದಿರುವ ಅತಿದೊಡ್ಡ ಗಂಡಾಂತರವಾಗಿದ್ದು, ಇದರ ವಿರುದ್ಧದ ಹೋರಾಟದಲ್ಲಿ ಜೈಲಿಗೆ ಹೋಗಲು ಸಿದ್ಧರಾಗೋಣವೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಸಿಎಎ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಕಾರ್ಯಕರ್ತರು ಜೈಲಿಗೆ ಹೋಗಲು ಸಿದ್ಧರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೇರಿದಂತೆ ಬಿಜೆಪಿ ವಿರುದ್ಧದ ಯಾವ ಹಂತದ ಹೋರಾಟಕ್ಕೂ ಮುನ್ನುಗ್ಗಬೇಕಾದ ಸಂದರ್ಭವಿದು ಎಂದು ತಿಳಿಸಿದರು.

ದೇಶಕ್ಕೆ ಸಂಕಷ್ಟದ ಪರಿಸ್ಥಿತಿ ಬಂದಿದೆ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದರ ವಿರುದ್ಧ ಜಾತ್ಯತೀತತೆಯ ಮೇಲೆ ವಿಶ್ವಾಸವಿರುವ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಒಟ್ಟಾಗಿ ಯೋಜನೆ ರೂಪಿಸುವ ಮೂಲಕ ಮುಂದಾಗುವ ಅನಾಹುತಗಳನ್ನ ತಪ್ಪಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿಗಿರುವ ಸಂಖ್ಯಾ ಬಲದಿಂದ ಕಾಯ್ದೆಗಳನ್ನ ಜಾರಿ ಮಾಡಿದ್ದಾರೆ. ರಾಜ್ಯ ಸಭೆಯಲ್ಲಿ ಬಿಜೆಪಿಗೆ ಪೂರ್ಣ ಶಕ್ತಿ ಇರಲಿಲ್ಲ. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರುದ್ಧವಾಗಿ ಮತ ಹಾಕದೇ ಇರುವ ರೀತಿಯ ಬೆದರಿಕೆ ಹಾಕುವ ತಂತ್ರಗಳನ್ನು ರೂಪಿಸಿದ್ದರು. ಇದರ ದುಷ್ಪರಿಣಾಮ ದೇಶದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ಎಲ್ಲರೂ ಕಣ್ಣಾರೆ ಕಾಣುತ್ತಿದ್ದಾರೆಂದು ಅವರು ಹೇಳಿದರು.

ಬಿಜೆಪಿ ಹಾಗೂ ಆರೆಸ್ಸೆಸ್ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಸುಮಾರು ನಲವತ್ತು ಕೋಟಿ ಮುಸ್ಲಿಮರಿದ್ದಾರೆ. ಅವರೆಲ್ಲರನ್ನು ಎಲ್ಲಿಗೆ ಕಳುಹಿಸಲು ಸಾಧ್ಯ. ಕೇವಲ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ಕೊಡುವುದಕ್ಕಾಗಿಯೇ ಇಂತಹ ಕಾಯ್ದೆಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಿಹಾರ, ಕೇರಳ, ಒಡಿಶ್ಶಾ ಸರಕಾರಗಳು ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆ ಜಾರಿ ಮಾಡಲ್ಲವೆಂದು ಈಗಾಗಲೇ ಘೋಷಿಸಿವೆ. ಅದೇ ರೀತಿ ಕರ್ನಾಟಕದಲ್ಲೂ ಘೋಷಣೆಯಾಗಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಗ್ರಾಮ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುವ ಮೂಲಕ ಒತ್ತಾಯಿಸಬೇಕಾಗಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 96ನೇ ವಯಸಿನಲ್ಲೂ ವೀಲ್ ಚೇರ್‌ನಲ್ಲಿ ಹೋಗಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಅದೇ ರೀತಿ ನಾನು ನನ್ನ ಉಸಿರಿರುವ ತನಕ ರಾಜ್ಯದ ಜನತೆಗೋಸ್ಕರ ಹೋರಾಟ ಮಾಡುತ್ತೇನೆ. ನನಗೆ ಅದಿಕಾರಕ್ಕಿಂತ ರಾಜ್ಯದ ನೆಲ, ಜಲ, ಭಾಷೆ ಅತಿ ಮುಖ್ಯ. ಇದಕ್ಕೋಸ್ಕರ ನನ್ನ ಉಸಿರು ಮುಡಿಪಾಗಿಡುತ್ತೇನೆ. ಜೊತೆಗೆ ಈ ಪಕ್ಷ ಸೂರ್ಯ ಚಂದ್ರರಿರುವ ತನಕ ಇರಬೇಕು, ಪಕ್ಷದ ಉಳಿವಿಗಾಗಿ ನಿಮ್ಮ ಸಹಕಾರ ಮತ್ತು ಹೋರಾಟ ಅತ್ಯವಶ್ಯಕ.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

ಜೆಡಿಎಸ್ ಸಭೆಯ ನಿರ್ಣಯಗಳು

-ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಪರಿಣಾಮವಾಗಿ ದಿನಬಳಕೆಯ ಸಾಮಗ್ರಿಗಳ ಬೆಲೆ ಏರಿಕೆ, ನಿರುದ್ಯೋಗದಿಂದ ದೇಶದಲ್ಲಿ ಅಘೋಷಿತ ಆರ್ಥಿಕ ಅರಾಜಕತೆ ಮೂಡಿದೆ. ಇದರ ವಿರುದ್ಧ ಜನಾಂದೋಲನ ಹಮ್ಮಿಕೊಳ್ಳಲು ಜೆಡಿಎಸ್ ನಿರ್ಣಯಿಸಿದೆ.

-15 ದಿನಗಳ ಒಳಗಾಗಿ ಸಾಲಕ್ಕೆ ಸಿಲುಕಿರುವ ಜನರ ನೆರವಿಗೆ ಕನಿಷ್ಠ 5ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಹಾಗೂ ಉದ್ಯೋಗ ಖಾತರಿಯ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.

-ಕೇಂದ್ರ ಸರಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ನಮ್ಮ ದೇಶಕ್ಕೆ ಅಗತ್ಯವಿಲ್ಲ. ಸಂಸತ್‌ನಲ್ಲಿ ಯಾವುದೇ ಚರ್ಚೆ ಮಾಡದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ಪ್ರತಿಷ್ಠೆಗೆ ಜೋತು ಬೀಳದೆ ಸಿಎಎ ಕಾಯ್ದೆಯನ್ನು ಹಿಂಪಡೆಯಬೇಕು.

Please follow and like us:
error