ಸಿಎಎ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ: ಸುಪ್ರೀಮ್‌ನಲ್ಲಿ ಕೇಂದ್ರದ ಹೇಳಿಕೆ

ಹೊಸದಿಲ್ಲಿ,ಮಾ.17: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯು ಯಾವುದೇ ಮೂಲಭೂತ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರವು ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಕಾಯ್ದೆಯು ಯಾವುದೇ ನ್ಯಾಯಾಂಗ ಪುನರ್‌ಪರಿಶೀಲನೆಯ ವ್ಯಾಪ್ತಿಗೆ ಒಳಪಡದಿರಬಹುದು ಎಂದೂ ಅದು ಪ್ರತಿಪಾದಿಸಿದೆ.

ಸಿಎಎದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಉತ್ತರವಾಗಿ ತನ್ನ 129 ಪುಟಗಳ ಅಫಿಡವಿಟ್‌ನಲ್ಲಿ ಸರಕಾರವು ಎರಡು ಅಂಶಗಳನ್ನು ಆಧರಿಸಿ ತನ್ನ ವಾದವನ್ನು ಮಂಡಿಸಿದೆ. ತನ ಶಾಸನವು ಕಾನೂನುಬದ್ಧವಾಗಿದೆ ಮತ್ತು ಅದು ಸಾಂವಿಧಾನಿಕ ನೈತಿಕತೆಯನ್ನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಎರಡನೆಯದಾಗಿ ವಲಸೆ ಮತ್ತು ಪೌರತ್ವ ಸಾರ್ವಭೌಮ ಸರಕಾರದ ಕಾರ್ಯಾಂಗದ ವ್ಯಾಪ್ತಿಗೊಳಪಡು ವುದರಿಂದ ಈ ವಿಷಯಗಳಲ್ಲಿ ನ್ಯಾಯಾಂಗದಿಂದ ಪುನರ್‌ಪರಿಶೀಲನೆಗೆ ಸೀಮಿತ ಅವಕಾಶವಿದೆ ಎಂದು ಅದು ಅಫಿಡವಿಟ್‌ನಲ್ಲಿ ತಿಳಿಸಿದೆ.

ಪೌರತ್ವ ನೀಡಿಕೆಯ ಮೇಲೆ ನಿಯಂತ್ರಣ ಹೊಂದಿರುವ ಕಾನೂನಿನಡಿ ನಿಗದಿತ ರೀತಿಯಲ್ಲಿ ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ರಿಗೆ ಪೌರತ್ವವನ್ನು ಮಂಜೂರು ಮಾಡಲಾಗುವುದರಿಂದ ಸಿಎಎ ಕಾರ್ಯಾಂಗಕ್ಕೆ ಯಾವುದೇ ನಿರಂಕುಶ ಮತ್ತು ಅನಿರ್ದೇಶಿತ ಅಧಿಕಾರವನ್ನು ನೀಡುವುದಿಲ್ಲ ಎಂದೂ ಸರಕಾರವು ತಿಳಿಸಿದೆ.

ಸಿಎಎ ಯಾವುದೇ ಭಾರತೀಯ ಪ್ರಜೆಯ ಕಾನೂನು, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಜಾತ್ಯತೀತವಲ್ಲದ ರಾಷ್ಟ್ರಗಳಲ್ಲಿಯ ಕೆಲವು ವರ್ಗೀಕೃತ ಸಮುದಾಯಗಳಿಗೆ ರಕ್ಷಣೆಯನ್ನು ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದೂ ಅದು ವಾದಿಸಿದೆ.

ಸಿಎಎದ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಡಿ.18ರಂದು ನಿರ್ಧರಿಸಿತ್ತು,ಆದರೆ ಸಿಎಎ ಕಾರ್ಯಾಚರಣೆಗೆ ತಡೆಯನ್ನು ನೀಡಲು ಅದು ನಿರಾಕರಿಸಿತ್ತು.

Please follow and like us:
error