ಬೆಂಗಳೂರು, ಜ.8: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಪ್ರಕ್ರಿಯೆ ಮುಸ್ಲಿಮರ ಮೇಲೆ ಪರಿಣಾಮ ಬೀರುವುದಲ್ಲದೆ, ಹಿಂದುಗಳಿಗೂ ಗಂಭೀರ ಪೆಟ್ಟು ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಬುಧವಾರ ನಗರದ ಗಾಂಧಿಭವನದಲ್ಲಿ ದಸಂಸ ಹಮ್ಮಿಕೊಂಡಿದ್ದ ಸಂವಿಧಾನ ವಿರೋಧಿಸಿ ಸಿಎಎ, ಎನ್ಆರ್ಸಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಎ, ಎನ್ಆರ್ಸಿಗಾಗಿ ಅನಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ಹೇಳುತ್ತಾರೆ. ಆ ದಾಖಲೆಗಳನ್ನು ಬಡಜನರು ಒದಗಿಸಲು ಸಾಧ್ಯವೆ ಎಂದು ಕೇಂದ್ರ ಸರಕಾರ ಒಮ್ಮೆ ಯೋಚಿಸಬೇಕು. ಅಲ್ಲದೆ, ನನ್ನ ಬಳಿಯೇ ಜನ್ಮ ದಿನಾಂಕ ಪ್ರತಿ ಇಲ್ಲ ಎಂದ ಅವರು, ಇಂತಹ ಕಾನೂನುಗಳಿಂದ ದಲಿತರು, ಹಿಂದುಳಿದವರು, ಅವಿದ್ಯಾವಂತರು, ಬುಡಕಟ್ಟು ಜನರು ಕಷ್ಟ ಎದುರಿಸಬೇಕಾಗುತ್ತದೆ ಎಂದರು.
ಸಿಎಎ, ಎನ್ಆರ್ಸಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಸತ್ಯ ತಿಳಿಸುತ್ತಿಲ್ಲ. ಪದೇ ಪದೇ ಸುಳ್ಳುಗಳನ್ನೇ ಹಬ್ಬಿಸುತ್ತಿದ್ದಾರೆ. ಆದರೆ, ಇಂದು ಕೇಂದ್ರ ಸರಕಾರದ ವಿರುದ್ಧ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.