ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

ಭಾರತೀಯ ಸಮಾಜವು ಛಿದ್ರವಾಗುತ್ತಿದೆ. ಚರಿತ್ರೆಯಲ್ಲಿ ಅಪರೂಪಕ್ಕೆ ನೋಡಿದಂಥ ಅಪಾಯವು ನಮ್ಮೆದುರಿಗಿದೆ. ಮನುಷ್ಯಪರ ಧರ್ಮಗಳು, ಬದುಕಿನ ಕ್ರಮಗಳು, ಸಹಬಾಳ್ವೆಯ ರೀತಿಗಳು ನಾಶವಾಗುತ್ತಿವೆ. ಯಂತ್ರ ನಾಗರೀಕತೆ, ಆರ್ಥಿಕ ಏರುಪೇರುಗಳು, ಗ್ರಾಮನಾಶ, ಕಸುಬುನಾಶ ಅವ್ಯಾಹತವಾಗಿ ನಡೆದಿವೆ. ಬಿಕ್ಕಟ್ಟುಗಳ ನಿಜ ಸ್ವರೂಪ ಬೇರೆಯೇ ಆದರೂ ಅವುಗಳನ್ನು ಧಾರ್ಮಿಕ ಸಂಗತಿಗಳನ್ನಾಗಿ ಪರಿವರ್ತಿಸಲಾಗುತ್ತದೆ. ಧರ್ಮಗಳ ಮಾನವೀಯ ಅಂಶಗಳನ್ನು ಬದಿಗೊತ್ತಿ ಆಕ್ರಾಮಕ ವಿಕೃತಿಯನ್ನು ಧಾರ್ಮಿಕತೆಯೆಂದು ಪ್ರಚಾರ ಮಾಡಲಾಗುತ್ತಿದೆ. ಪರಿಣಾಮವಾಗಿ ಅಸಹಿಷ್ಣುತೆ, ದ್ವೇಷ ಪ್ರತಿಪಾದನೆಯಾಗುತ್ತಿವೆ. ಸಂವಿಧಾನವನ್ನು ಬುಡಮೇಲು ಮಾಡಲಾಗುತ್ತಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಸಾಹಿತ್ಯವು ತನ್ನ ಅಂತಃಶಕ್ತಿಯನ್ನು ಕಂಡುಕೊಳುತ್ತದೆ ಹಾಗೂ ಸಮುದಾಯಗಳ ಜೊತೆಗೆ ಸಂಭಾಷಣೆಯನ್ನು ಆರಂಭಿಸುತ್ತದೆ. ಈಗ ನಮ್ಮೆದುರಿಗೆ ಇರುವ ಜವಾಬ್ದಾರಿಯೆಂದರೆ ನಮ್ಮ ನಮ್ಮ ಸಮುದಾಯಗಳೊಂದಿಗೆ ಮಾತುಕತೆಗೆ ತೊಡಗಬೇಕಾದ ಅಗತ್ಯವಿದೆ. ನಾವೆಲ್ಲ ಸೇರಿ ದಾರಿಗಳನ್ನು ಹುಡುಕಬೇಕಾಗಿದೆ. ಈ ಹಿನ್ನೆಲೆಯಲ್ಲಿ ೨ ಸೆಪ್ಟೆಂಬರ್ ೨೦೧೮ ರ ಭಾನುವಾರದಂದು ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಭವನದಲ್ಲಿ (ಅದು ಈಗ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಭಾಗವಾಗಿದೆ) ಏರ್ಪಡಿಸಲು ದಕ್ಷಿಣಾಯಣ ಹಾಗೂ ಗ್ರಾಮ ಸೇವಾ ಸಂಘಗಳು ಜೊತೆಗೂಡುತ್ತಿವೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಬರಹಗಾರರ ಜೊತೆಗೆ ಅನೇಕ ರಾಜ್ಯಗಳಿಂದ ವಿವಿಧ ಭಾಷೆಯ ಬರಹಗಾರರು ದನಿಗೂಡಿಸಲಿದ್ದಾರೆ. ಎಲ್ಲಾ ಬಗೆಯ ಧಾರ್ಮಿಕ ಉಗ್ರವಾದವನ್ನು ಶಮನಗೊಳಿಸುವುದು ಮತ್ತು ಗ್ರಾಮಗಳನ್ನು ಕಟ್ಟುವುದು, ಇವು ಈ ಸಾಹಿತ್ಯ ಸಮ್ಮೇಳನದ ಎರಡು ಪ್ರಧಾನ ಆಶಯಗಳಾಗಿವೆ. ಎಲ್ಲಾ ಮನುಷ್ಯರೊಳಗೆ ತುಡಿಯುವ ಅಂತಃಕರಣವನ್ನು ಸಂಭ್ರಮಿಸುವುದೂ ಸಮ್ಮೇಳನದ ಉದ್ದೇಶವಾಗಿದೆ. ಈ ಸಮ್ಮೇಳನವು ಕನ್ನಡ ಸಾಹಿತ್ಯಕ್ಕೆ ಹಾಗೂ ಭಾರತೀಯ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನು ಕೊಡಲಿದೆಯೆಂದು ನಿರೀಕ್ಷಿಸುತ್ತಿದ್ದೇವೆ.

ನಾವು ಲೇಖಕರು, ಕಲಾವಿದರು, ಸಹಿಷ್ಣುತೆಯ ಸಾಮಾಜಿಕ ಜವಾಬ್ದಾರಿಯನ್ನು ಹೊರಲಿಕ್ಕೆ ಸಿದ್ಧರಾಗಿದ್ದೇವೆ. ನಾವು ಪ್ರತಿಯೊಬ್ಬರು, ನಮ್ಮ ನಮ್ಮ ಹಿತ್ತಲಿಗೆ ಹೋಗಿ ನಮ್ಮ ಸಮುದಾಯದೊಂದಿಗೆ ಮಾತನಾಡುತ್ತೇವೆ.
ದಕ್ಷಿಣಾಯಣ
ದಕ್ಷಿಣಾಯಣವು ಪ್ರಸಿದ್ದ ವಿಮರ್ಶಕರು ಹಾಗೂ ಭಾಷಾತಜ್ಙರಾದ ಪ್ರೊ. ಗಣೇಶ್ ದೇವಿಯವರ ಮಾರ್ಗದರ್ಶನದಲ್ಲಿ ಜೊತೆಗೂಡಿದ ಭಾರತೀಯ ಬರಹಗಾರರ, ಕಲಾವಿದರ, ಚಲನಚಿತ್ರ ನಿರ್ದೇಶಕರ ಚಳುವಳಿಯಾಗಿದೆ. ಪ್ರಜಾಪ್ರಭುತ್ವವಾದಿ, ಅಭಿವ್ಯಕ್ತಿ ಸ್ವಾತಂತ್ರ್ಯ ಪರವಾದ ಎಲ್ಲಾ ಭಾಷೆಗಳ ಬರಹಗಾರರು, ಕಲಾವಿದರಿಗೆ ಒಂದು ವೇದಿಕೆಯಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ದಕ್ಷಿಣಾಯಣವು ಅತ್ಯಂತ ಕ್ರಿಯಾಶೀಲವಾಗಿದೆ. ಇದರ ಭಾಗವಾಗಿ ದಕ್ಷಿಣಾಯಣ ಕರ್ನಾಟಕವು ಕಳೆದ ವರ್ಷ ಶಿವಮೊಗ್ಗದಲ್ಲಿ ಚಾರಿತ್ರಿಕವಾದ ಸಮ್ಮೇಳನವನ್ನು ನಡೆಸಿತ್ತು. ಅಲ್ಲದೆ ಹತ್ಯೆಗಳಿಗೆ ಬಲಿಯಾದ ಪ್ರೊ.ಎಂ.ಎಂ. ಕಲುಬುರ್ಗಿ ಮತ್ತು ಗೌರಿ ಲಂಕೇಶರ ಪರವಾದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.

ಗ್ರಾಮ ಸೇವಾ ಸಂಘ
ಗ್ರಾಮ ಸೇವಾ ಸಂಘವು ಚಿಂತಕರು, ಸಾಂಸ್ಕೃತಿಕ ಚಳುವಳಿಗಳನ್ನು ಹುಟ್ಟುಹಾಕಿದ ಶ್ರೀ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕ್ರಿಯಾಶೀಲವಾಗಿರುವ ಸಂಘಟನೆಯಾಗಿದೆ. ಗ್ರಾಮಸ್ವರಾಜ್ಯ ಮತ್ತು ಕೈಉತ್ಪನ್ನಗಳ ಶ್ರಮಜೀವಿಗಳ ಪರವಾಗಿ ಜನ ಆಂದೋಲನವನ್ನು ನಡೆಸುತ್ತಲಿದೆ. ಯಂತ್ರನಾಗರಿಕತೆ ಹಾಗೂ ಅದರ ಫಲವಾಗಿ ಹುಟ್ಟುಕೊಂಡಿರುವ ಎಲ್ಲಾ ಬಗೆಯ ಉಗ್ರವಾದವನ್ನು ಅದು ವಿರೋಧಿಸುತ್ತದೆ.
ಬೆಂಗಳೂರಿನ ನೂತನವಾಗಿ ಸ್ಥಾಪಿತವಾದ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಸಹಯೋಗವನ್ನು ಈ ಕಾರ್ಯಕ್ರಮಕ್ಕೆ ನೀಡುತ್ತಿದೆ.
ಗಣೇಶ್ ದೇವಿ, ರಹಮತ್ ತರಿಕೆರೆ, ಜಿ. ಎನ್ ನಾಗರಾಜ್, ಪ್ರಸನ್ನ, ರಾಜೇಂದ್ರ ಚೆನ್ನಿ, ಹಾಗೂ ಇನ್ನೂ ಹೆಸರಾಂತ ಸಾಹಿತಿಗಳು ಭಾರತದಾದ್ಯಂತದಿಂದಲೂ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ನೀವು ನಮ್ಮ ಜೊತೆಗಿರಿ ಎಂದು ವೈಯಕ್ತಿಕವಾಗಿ ತಮ್ಮನ್ನು ಪ್ರಿತಿಯಿಂದ ಆಹ್ವಾನಿಸುತ್ತಿದ್ದೇವೆ.

ರಾಜೇಂದ್ರ ಚೆನ್ನಿ ಪ್ರಸನ್ನ ದಕ್ಷಿಣಾಯಣ ಗ್ರಾಮ ಸೇವಾ ಸಂ

Please follow and like us: