ಸರಕಾರ, ಸಚಿವರು ಅವ್ಯವಹಾರ ಮಾಡಿಲ್ಲ ಎನ್ನುವುದಾದದರೆ ತನಿಖೆ ಯಾಕೆ ಬೇಡ ?- ಸಿದ್ದರಾಮಯ್ಯ ಪ್ರಶ್ನೆ

ಇದು ಭಂಡತನದ ಪರಮಾವಧಿ ಎಂದು ಸರಕಾರದ ವಿರುದ್ದ ಹರಿಹಾಯ್ದ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು : ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸರ್ಕಾರ ಅಕ್ರಮ‌‌‌ ಮಾಡಿಲ್ಲ, ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,  ಕೊರೊನಾ ಖರೀದಿ ಅವ್ಯವಹಾರದ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಅವು ಸರ್ಕಾರದ್ದೇ ದಾಖಲೆಗಳು. ಅವುಗಳನ್ನು ಸಚಿವರು ನಿರಾಕರಿಸುತ್ತಾರೆ ಎಂದಾದರೆ, ನಿನ್ನೆ ಸರ್ಕಾರದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದವರು ಮಂತ್ರಿಗಳಾಗಿರುವುದು ನಿಜನಾ? ಸುಳ್ಳಾ?, ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕಾದರೆ ನ್ಯಾಯಾಂಗ ತನಿಖೆಯಾಗಲಿ. ಸತ್ಯ ಹೊರ ಬಂದರೆ ಜನ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ. ನಮ್ಮದು ಸುಳ್ಳು ಅವರದ್ದು ಸತ್ಯ ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಮತ್ತೆ ಒತ್ತಾಯಿಸುತ್ತೇನೆ. ತನಿಖೆಗೆ ಸರ್ಕಾರ ಒಪ್ಪುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ. ನಾವು ತನಿಖೆಗೆ ಆಗ್ರಹಿಸಿದ ಮೇಲೆ ಉಪಕರಣಗಳ ಖರೀದಿಗೆ ನೀಡಿದ್ದ ಆದೇಶ ರದ್ದು ಮಾಡಲಾಗಿದೆ ಎಂಬುದರ ಬಗ್ಗೆ ನನಗೆ ತಿಳಿಯದು “2,000 ಕೋಟಿ ವೆಚ್ಚದಲ್ಲಿ 50,000 ವೆಂಟಿಲೇಟರ್‌ಗಳನ್ನು ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ” ಎಂದು ಪ್ರಧಾನಿ‌ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. “ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‌ಗಳು ಕಳಪೆ” ಎಂದು ಈ ಮಂತ್ರಿಗಳು ಹೇಳಲಿ ನೋಡೋಣ.

ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರು,ಮೊಬೈಲ್ ಎಲ್ಲದರಲ್ಲಿಯೂ‌ ಸಾಮಾನ್ಯ, ಐಷಾರಾಮಿ‌ ಎರಡೂ ಇರುತ್ತವೆ. ಕೇಂದ್ರ ಸರ್ಕಾರ ಸಹ 18 ಲಕ್ಷ ರೂ. ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬಹುದಿತ್ತಲ್ಲವೇ? ಯಾಕೆ 4 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದರು? ಇದಕ್ಕೆ ಮಂತ್ರಿಗಳಲ್ಲಿ ಉತ್ತರ ಇದೆಯೇ? ಕಾರ್ಮಿಕ ಇಲಾಖೆಯಲ್ಲಿ 1,000 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಹೇಳಿಲ್ಲ, ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ, ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಅಂದಿದ್ದೆ. ಕಾರ್ಮಿಕ‌ ಸಚಿವರು ಮೊದಲು ಆ ಲೆಕ್ಕ‌‌ ಕೊಡಲಿ. ವೈದ್ಯಕೀಯ ಶಿಕ್ಷಣ ಇಲಾಖೆ 815 ಕೋಟಿಗೆ ಪ್ರಸ್ತಾವನೆ ಕಳುಹಿಸಿದೆ ಎಂದು ಹೇಳಿದ್ದು ನಿಜ. ತಜ್ಞರ ಶಿಫಾರಸು ಇಲ್ಲದೆ ಉಪಕರಣಗಳ ಖರೀದಿಗೆ ಮುಂದಾಗಿರುವುದಾಗಿ‌ ಟಿಪ್ಪಣಿ ಬರೆಯಲಾಗಿರುವುದು ನಿಜ. ಈ ಟಿಪ್ಪಣಿಯ ಮಹತ್ವ ಏನು?

 

 

Please follow and like us:
error