ಸಮಸ್ಯೆಯಿಲ್ಲದ ಸೋಂಕಿತರು ಮನೆಯೊಳಗೇ ಉಳಿಯಿರಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದಾಗ (ಮುಂದಿನ 3ನೇ ಹಂತ) ಎಲ್ಲಾ ಸೋಂಕಿತರಿಗೆ ಕೊರೊನಾ ಪರೀಕ್ಷೆ ಮಾಡುವ ಅಗತ್ಯವಿಲ್ಲ ಹಾಗೂ ಬಹುತೇಕ (85%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಅಂಥ ಸೋಂಕಿತರು ಮನೆಯೊಳಗೇ ಉಳಿದುಕೊಂಡು ಇತರರಿಗೆ ಸೋಂಕು ಹರಡದಂತೆ ನೆರವಾಗಬೇಕು ಎಂದು ಖ್ಯಾತ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ

ಈ ಕುರಿತ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ:

ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದಾಗ (ಮುಂದಿನ 3ನೇ ಹಂತ) ಎಲ್ಲಾ ಸೋಂಕಿತರಿಗೆ ಕೊರೊನಾ ಪರೀಕ್ಷೆ ಮಾಡುವ ಅಗತ್ಯವಿಲ್ಲ ಹಾಗೂ ಬಹುತೇಕ (85%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಅಂಥ ಸೋಂಕಿತರು ಮನೆಯೊಳಗೇ ಉಳಿದುಕೊಂಡು ಇತರರಿಗೆ ಸೋಂಕು ಹರಡದಂತೆ ನೆರವಾಗಬೇಕು ಎಂಬುದನ್ನು ಹೆಚ್ಚಿನ ದೇಶಗಳಲ್ಲಿ ಪಾಲಿಸಲಾಗುತ್ತಿದೆ. ಕೇರಳ ಸರಕಾರವೂ ಇಂಥದ್ದೇ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದೆ. ಹೆಚ್ಚಿನ ಸೋಂಕಿತರನ್ನು ಮನೆಗಳಲ್ಲೇ ಉಳಿಯುವಂತೆ ಮಾಡಿ, ಸಮಸ್ಯೆಗಳಾಗಬಲ್ಲವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ:

1. ಸಮಸ್ಯೆಯಿಲ್ಲದ ಸೋಂಕಿತರು ಮನೆಯೊಳಗೇ ಉಳಿಯಬೇಕು ಎಂಬುದನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕು. ಇದರಲ್ಲಿ ಮಾಧ್ಯಮಗಳ ಪಾತ್ರ ಬಲು ದೊಡ್ಡದು.

2. ಚಿಕಿತ್ಸೆಯ ಅಗತ್ಯವಿಲ್ಲ ಎಂದಾಗ ಜನರು ಆತಂಕಗೊಂಡು ಆಧುನಿಕ ವೈದ್ಯರಿಂದ ಹಿಡಿದು ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಚಿಕಿತ್ಸಕರೆಲ್ಲರ ಬಳಿಗೆ ಚಿಕಿತ್ಸೆಗಾಗಿ ಹೋಗುವ ಸಾಧ್ಯತೆಗಳಿರುತ್ತವೆ. ಕೊರೊನಾ ಸೋಂಕು ಒಂದು ವಾರದ ಕಾಲ ರೋಗಲಕ್ಷಣಗಳನ್ನುಂಟು ಮಾಡುವುದರಿಂದ ಅಷ್ಟು ದಿನ ಕಾಯುವ ತಾಳ್ಮೆಯಿಲ್ಲದೆ ಅಲ್ಲಿಲ್ಲಿ ಚಿಕಿತ್ಸೆಗೆ ಹೊರಹೋಗುವುದು, ಒಬ್ಬರು ಚಿಕಿತ್ಸಕರಿಂದ ಇನ್ನೊಬ್ಬರ ಬಳಿಗೆ ಹೋಗುವುದು, ಆಸ್ಪತ್ರೆಗಳಲ್ಲಿ ಸಾಲುಗಟ್ಟುವುದು ಇತ್ಯಾದಿಗಳಾಗುವ ಸಾಧ್ಯತೆಗಳಿದ್ದೇ ಇವೆ. ಜನರು ಆತಂಕಕ್ಕೊಳಗಾಗದೆ, ಧೈರ್ಯದಿಂದ ಮನೆಯೊಳಗೇ ಇರಬೇಕು, ಯಾವ ಚಿಕಿತ್ಸೆಗೂ ಯಾರ ಬಳಿಯೂ ಹೋಗುವ ಅಗತ್ಯವಿಲ್ಲ, ಹೋಗಕೂಡದು ಎನ್ನುವುದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು, ಧೈರ್ಯ ತುಂಬಬೇಕು.

3. ಜ್ವರ, ಕೆಮ್ಮು ವಿಪರೀತವಾಗಿದ್ದರೆ, ಉಸಿರಾಟಕ್ಕೆ ಸಮಸ್ಯೆಯಾದರೆ ಕೂಡಲೇ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸಬೇಕು ಅಥವಾ ತಮ್ಮ ವೈದ್ಯರಿಗೆ ಕರೆ ಮಾಡಬೇಕು. ಅಮೆರಿಕಾ, ಇಂಗ್ಲೆಂಡ್ ಗಳಲ್ಲಿ ಅಂಥ ರೋಗಿಗಳು ವಿಡಿಯೋ ಕರೆಗಳ ಮೂಲಕ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ನಮ್ಮಲ್ಲಿಯೂ ಇಂಥ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡಿ, ಅದನ್ನು ನಿಭಾಯಿಸಲು ವೈದ್ಯರ ತಂಡವನ್ನು ಸಿದ್ಧಗೊಳಿಸುವುದು ಅಪೇಕ್ಷಣೀಯ. ಖಾಸಗಿ ವೈದ್ಯರನ್ನು (ಕೊರೊನಾ ಬಗ್ಗೆ ಅರಿವಿರುವ ಆಧುನಿಕ ವೈದ್ಯ ವಿಜ್ಞಾನದ ವೈದ್ಯರನ್ನು ಮಾತ್ರ) ಕೂಡ ಹೀಗೆ ವಿಡಿಯೋ ಕರೆಗಳ (ವಾಟ್ಸಾಪ್, ಗೂಗಲ್ ಡುವೋ) ಮೂಲಕ ಸಂಪರ್ಕಿಸುವ ವ್ಯವಸ್ಥೆ ಮಾಡುವ ಬಗ್ಗೆ ಪರಿಗಣಿಸಬಹುದು. ಹಾಗೆ ಕರೆ ಮಾಡಿದವರಲ್ಲಿ ಗಂಭೀರ ಸಮಸ್ಯೆಗಳಿದ್ದವರು ಗುರುತಿಸಲ್ಪಟ್ಟರೆ ಅಂಥವರನ್ನಷ್ಟೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

4. ಸಮಸ್ಯೆಗೊಳಗಾದ ಕೊರೊನಾ ಪೀಡಿತರು (ಹೆಚ್ಚಿನವರು 60 ವರ್ಷಕ್ಕೆ ಮೇಲ್ಪಟ್ಟವರೇ ಆಗಿರುತ್ತಾರೆ) ದಾಖಲಾಗುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ. ಒಂದು ಆಸ್ಪತ್ರೆಯ ಒಂದು ವಿಭಾಗವನ್ನು ಕಾಯ್ದಿರಿಸುವುದರಿಂದ ಅಲ್ಲಿರುವ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದಲೂ, ಇತರ ಎಲ್ಲಾ ರೋಗಿಗಳ ಚಿಕಿತ್ಸೆಗಳನ್ನೂ, ಹಾಗೂ ತುರ್ತು ಚಿಕಿತ್ಸೆಗಳನ್ನೂ ನಿರಾತಂಕವಾಗಿ ನಡೆಸಬೇಕಾಗಿರುವುದರಿಂದಲೂ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ.

5. ಗಂಭೀರವಾಗಿರುವ ಕೊರೊನಾ ಪೀಡಿತರಿಗಾಗಿ ವಿಶೇಷ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಶಾಲೆ, ಕಾಲೇಜು, ಬಳಕೆಯಲ್ಲಿಲ್ಲದ ಕಟ್ಟಡಗಳಲ್ಲಿ ತೆರೆಯಬಹುದು, ಮೂರ್ನಾಲ್ಕು ತಿಂಗಳಲ್ಲಿ ಕೊರೊನಾ ಬಾಧೆಯು ಮರೆಯಾದಾಗ ಅವನ್ನು ಮುಚ್ಚಬಹುದು.(ಚೀನಾದಲ್ಲಿ ಮಾಡಿದಂತೆ)

6. ಅಂಥ ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಸಿದ್ಧಪಡಿಸುವುದು ಹಾಗೂ ಕೃತಕ ಉಸಿರಾಟದಂತಹ ಉನ್ನತ ಚಿಕಿತ್ಸೆ ನೀಡುವುದಕ್ಕೆ ವೈದ್ಯರನ್ನೂ,ವೈದ್ಯಕೀಯ ಸಿಬ್ಬಂದಿಯನ್ನೂ ಸಿದ್ಧಪಡಿಸುವುದು ಅತ್ಯಗತ್ಯ.

7. ಈ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ/ಆಂಬುಲೆನ್ಸ್ ವ್ಯವಸ್ಥೆ ಇರುವುದು ಒಳ್ಳೆಯದು. ಸೋಂಕಿತರು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಅಥವಾ ಎಲ್ಲರಿಗೂ ಬಳಕೆಯಾಗುವ ಅಂಬ್ಯುಲೆನ್ಸ್ ಬಳಸಿದರೆ ಸೋಂಕು ಹರಡುವುದಕ್ಕೆ ಅವಕಾಶವಾಗಬಹುದು. (ಯಾವುದೇ ಸಮಸ್ಯೆಯಿಲ್ಲದ ಸೋಂಕಿತರು ಮನೆಯಲ್ಲೇ ಇದ್ದು ಹೊರಹೋಗಬಾರದು ಎಂದು ಹೇಳುವುದು ಕೂಡ ಇದೇ ಕಾರಣಕ್ಕೆ)

 

https://www.facebook.com/srinivas.kakkilaya/posts/10219613108732818

Please follow and like us:
error