ಸಮರವೀರ ಸಂಗೊಳ್ಳಿ ರಾಯಣ್ಣ ಮಾದರಿ ದೇಶಭಕ್ತರು- ಹನುಮೇಶ ಮುರಡಿ


ಕೊಪ್ಪಳ : ಸಮರವೀರ ಸಂಗೊಳ್ಳಿ ರಾಯಣ್ಣ ಮಾದರಿ ದೇಶಭಕ್ತರು. ಸ್ವಾತಂತ್ರ್ಯ ಹೋರಾಟಗಾರ, ಕನ್ನಡದ ಸ್ವತಂತ್ರ್ಯ ಸೇನಾನಿ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ, ಸಾಹಸಗಳನ್ನು ಪ್ರದರ್ಶಿಸುವ ಮೂಲಕ ಚರಿತ್ರೆಯ ಪುಟಗಳಲ್ಲಿ ಅಜರಾಮರನಾಗಿದ್ದಾನೆ. ಕಿತ್ತೂರು ಸಂಸ್ಥಾನದ ಅದಿಪತ್ಯವನ್ನು ಪುನಃ ಸ್ಥಾಪಿಸಬೇಕೆಂಬ ಸದುದ್ಧೇಶದಿಂದ ಬ್ರಿಟಿಷರಿಗೆ ಕೆಲಕಾಲ ನಡುಕ ಹುಟ್ಟಿಸಿದ್ದ ಗೆರಿಲ್ಲಾ ತಂತ್ರದ ವೀರಯೋಧ ಸಂಗೊಳ್ಳಿ ರಾಯಣ್ಣ ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾನೆ ಎಂದು ವಕೀಲರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮೇಶ ಮುರಡಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಹಲಗೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ ಹಾಗೂ ಆಶಾ ಕಾರ್ಯಕರ್ತೆಯರಿಗೆ, ವೈದ್ಯಕೀಯ ಸಹಾಯಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವದೇಶಾಭಿಮಾನದೊಂದಿಗೆ ರಾಷ್ಟ್ರಾಭಿಮಾನವನ್ನು ಒಗ್ಗೂಡಿಸಿಕೊಂಡು, ಬ್ರಿಟಿಷರನ್ನು ಈ ರಾಷ್ಟ್ರದಿಂದ ಓಡಿಸಬೇಕೆಂಬ ಛಲತೊಟ್ಟ ಛಲದಂಕಮಲ್ಲ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ದುರಾಡಳಿತ ಪ್ರತಿಭಟಿಸಿ, ಪೌರುಷದಿಂದ ಹೋರಾಡಿರೂ ಸ್ವಾರ್ಥಿಗಳ ಸಂಚಿಗೆ ಬಲಿಯಾದ ಗಂಡುಗಲಿ. ಇಂತವರ ತ್ಯಾಗ, ಬಲಿದಾನದ ಪರಿಣಾಮವಾಗಿ ದೇಶ ಇಂದು ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತು ಪ್ರಗತಿಯತ್ತ ಸಾಗುತ್ತಿದೆ. ಅಂದು ಅವರು ಹರಿಸಿದ ನೆತ್ತರಿನಿಂದಾಗಿ ಇಂದು ನಾವೆಲ್ಲಾ ನೆಮಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಗುಡದಪ್ಪ ಬನಪ್ಪನವರ ಮಾತನಾಡುತ್ತಾ, ಕುರಿಗಾರರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸಕಾಲದಲ್ಲಿ ದೊರೆಯಬೇಕು. ಅಕಾಲ ಮರಣಕ್ಕೀಡಾದ ಕುರಿಗಳಿಗೂ ಕೂಡ ತಕ್ಷಣ ಪರಿಹಾರ ನೀಡಬೇಕೆಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಬೇವಿನಹಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷರಾದ ಬೆಳ್ಳೆಪ್ಪ ಆರ್.ಮಡ್ಡಿ, ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ೭ ನೇ ರ್‍ಯಾಂಕ್ ಪಡೆದ ಸಂತೋಷ ಶಿವಪ್ಪ ಗುಡದನ್ನವರ, ಆರೋಗ್ಯ ಇಲಾಖೆಯ ಸಿಬ್ಬಂದಿಯವರನ್ನು, ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಶರಣಪ್ಪ ಬಿನ್ನಾಳ, ದೇವಪ್ಪ ವದಗನಾಳ, ಸಿದ್ಧಪ್ಪ ಕಂಠಿ, ಮಾಳಪ್ಪ ಕರೇಕುರಿ, ದ್ಯಾಮಣ್ಣ ಅಬ್ಬೀಗೇರಿ, ನಾಯಕ್ಕಪ್ಪ ತಳವಾರ, ಮಾರ್ಕಂಡಪ್ಪ ಅಡಿಗಿ, ನಾಗಪ್ಪ ಯಲಮಗೇರಿ, ನಾಗರಾಜ ಬಹದ್ಧೂರಬಂಡಿ, ಸೋಮಣ್ಣ ಬೈರಣ್ಣನವರ, ಮುದಕಪ್ಪ ಗೊಂದಿಹೊಸಳ್ಳಿ, ಕನಕಪ್ಪ ಕುರಿ, ಮಲ್ಲಪ್ಪ ಮಂಡಲಗೇರಿ, ಬಸವರಾಜ ಬಾರಕೇರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದಯಕುಮಾರ ಲಕ್ಕಿಮರದ ಪ್ರಾರ್ಥಿಸಿದರು. ಫಕೀರಪ್ಪ ಅಜ್ಜಿ ನಿರೂಪಿಸಿದರು. ಶಿವಮೂರ್ತಿ ಮಡ್ಡಿ ಸ್ವಾಗತಿಸಿದರು. ಮುದ್ದೆಪ್ಪ ಗೊಂದಿಹೊಸಳ್ಳಿ ವಂದಿಸಿದರು.

Please follow and like us:
error