ಸತ್ತವರು ಆಕಾಶಕ್ಕೇರಿ ತಾರೆಯಾಗುತ್ತಾರೆ : ಸಂಗೀತ ನಿರ್ದೇಶಕ ಜೋಡಿ ರಾಜನ್- ನಾಗೇಂದ್ರ ಬದುಕಿದ್ದಾಗಲೇ ತಾರೆಯಾದವರು-ಬಿ.ಎಂ.ಹನೀಫ್

ಹಿರಿಯ ಸಂಗೀತ ನಿರ್ದೇಶಕ ರಾಜನ್ (87) ರವಿವಾರ ರಾತ್ರಿ ನಿಧನ
ಸತ್ತವರು ಆಕಾಶಕ್ಕೇರಿ ತಾರೆಯಾಗುತ್ತಾರೆ ಎಂದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವುದಿದೆ. ಸಂಗೀತ ನಿರ್ದೇಶಕ ಜೋಡಿ ರಾಜನ್- ನಾಗೇಂದ್ರ ಬದುಕಿದ್ದಾಗಲೇ ತಾರೆಯಾದವರು. ತಮ್ಮ ನಾಗೇಂದ್ರ ಅವರು ತೀರಿಕೊಂಡು ೨೦ ವರ್ಷಗಳೇ ಆಗಿವೆ. ಈಗ ಅಣ್ಣ ರಾಜನ್ ನಮ್ಮನ್ನು ಅಗಲಿದ್ದಾರೆ.
ಆಕಾಶಕ್ಕೂ ಈ ಸಂಗೀತ ನಿರ್ದೇಶಕ ಜೋಡಿಗೂ ನಿಕಟ ನಂಟು ಇದ್ದಂತಿದೆ. ಈ ಜೋಡಿಯ ಯಶಸ್ವಿ ಹಾಡುಗಳ ಪಟ್ಟಿಯಲ್ಲಿ, ‘ನ್ಯಾಯವೇ ದೇವರು’ ಚಿತ್ರದ ‘ಆಕಾಶವೆ ಬೀಳಲಿ ಮೇಲೆ’ ನಿಸ್ಸಂಶಯವಾಗಿಯೂ ನಂಬರ್ ಒನ್. ಆ ಬಳಿಕದ್ದು ‘ಚಂದನದ ಗೊಂಬೆ’ಯ ‘ಆಕಾಶದಿಂದ ಧರೆಗಿಳಿದ ರಂಬೆ..’ ಹಾಡು. ಇವುಗಳ ಮಧ್ಯೆ ಬಂದದ್ದು ‘ಆಕಾಶದೀಪವು ನೀನು’. ಈ ಸಂಗೀತ ಜೋಡಿಯ ಕೀರ್ತಿಯನ್ನು ಆಕಾಶಕ್ಕೇರಿಸಿದ ಹಾಡುಗಳಲ್ಲಿ ಈ ಮೂರೂ ಸದಾ ನೆನಪಿಗೆ ಬರುತ್ತವೆ.
೭೦ರ ದಶಕದಲ್ಲಿ ನಾವು ಮಕ್ಕಳು ಜನಪ್ರಿಯ ಚಿತ್ರಗೀತೆಗಳನ್ನು ಹಾದಿ ಬೀದಿಗಳಲ್ಲಿ ದೊಡ್ಡ ಗಂಟಲಲ್ಲಿ ಹಾಡುತ್ತಿದ್ದೆವು. ಕುಂದಾಪುರದ ಚರ್ಚ್ ಸ್ಟ್ರೀಟ್ ನಲ್ಲಿ ನಮ್ಮ ಮನೆಯಿತ್ತು. ಆಗ ಶಾಲಾ ಮಕ್ಕಳ ಮಧ್ಯೆ ಅತ್ಯಂತ ಜನಪ್ರಿಯವಾಗಿದ್ದ ಹಾಡು- ಆಕಾಶವೆ ಬೀಳಲಿ ಮೇಲೆ..! ಮಕ್ಕಳಾಗಿದ್ದ ನಮಗೆ ಆಕಾಶ ಮೇಲೆ ಬೀಳುವ ಕಲ್ಪನೆಯೇ ಅತ್ಯಂತ ರೋಚಕವಾಗಿತ್ತು. ಪ್ರೇಮದ ತೀವ್ರತೆಯ ಬಗ್ಗೆ ಆಗ ಏನೇನೂ ಗೊತ್ತಿರಲಿಲ್ಲ. ಆದರೆ ಆಕಾಶ ತಲೆಯ ಮೇಲೆ ಬೀಳುವ ಕಲ್ಪನೆಯೇ ಅತ್ಯಂತ ರಮ್ಯ ಅನ್ನಿಸುತ್ತಿತ್ತು. ಶಾಲೆಯಲ್ಲಂತೂ ಈ ಹಾಡು ಹಾಡಲು ನಮ್ಮಗಳ ಮಧ್ಯೆ ಪೈಪೋಟಿ ಇರುತ್ತಿತ್ತು. ಏಕೆಂದರೆ ಸಂಗೀತ ಗೊತ್ತಿಲ್ಲದವರಿಗೂ ಈ ಹಾಡಿನ ಧಾಟಿ ಸುಲಭವಾಗಿ ದಕ್ಕುವಂತಿತ್ತು.
ಸರಳ ಕನ್ನಡದ ಹಲವು ಪ್ರೇಮಗೀತೆಗಳಿಗೆ ಭಾವುಕ ರಾಗಸಂಯೋಜನೆಯ ಮೂಲಕ ಮಾಧುರ್ಯ ತುಂಬುತ್ತಿದ್ದ ಜೋಡಿ ರಾಜನ್- ನಾಗೇಂದ್ರ. ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..’ ಅಂತಹ ಒಂದು ಹಾಡು. ಇವತ್ತಿಗೂ ರಾಜ್ಯೋತ್ಸವ ಸಮಾರಂಭದ ಪ್ರಾರ್ಥನಾ ಗೀತೆ- ನಾವಾಡುವ ನುಡಿಯೇ ಕನ್ನಡ ನುಡಿ…!
ಆಸೆಯ ಭಾವ, ಒಲವಿನ ಜೀವ/ ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ/ ದುಂಡು ಮಲ್ಲಿಗೆ ಮಾತಾಡೆಯಾ… ಹೀಗೆ ಪ್ರೇಮಗೀತೆಗಳ ಆಶಯವನ್ನು ಮಧುರ ರಾಗಗಳಲ್ಲಿ ಪ್ರೇಕ್ಷಕನಿಗೆ ಸರಾಗವಾಗಿ ದಾಟಿಸುವ ಮತ್ತು ಅದನ್ನು ಸದಾ ಸ್ಮರಣೀಯವನ್ನಾಗಿಸುವ ಸಂಗೀತ ಸಾಮರ್ಥ್ಯವೊಂದು ಈ ಜೋಡಿಯಲ್ಲಿತ್ತು. ‘ಯುಗ ಯುಗಗಳೆ ಸಾಗಲಿ, ನಮ್ಮ ಪ್ರೇಮ ಶಾಶ್ವತ’ ಎನ್ನುವ ಹಾಡಂತೂ ಪ್ರೇಮದ ಕ್ರಾಂತಿಗೀತೆಯಂತಿತ್ತು.
‘ಬಯಲುದಾರಿ’ಯ ‘ಬಾನಲ್ಲು ನೀನೇ, ಭುವಿಯಲ್ಲು ನೀನೇ..’ ಎನ್ನುವ ಹಾಡು ಇವತ್ತಿಗೂ ಪ್ರೇಮದ ಅನೂಹ್ಯ ಕಂಪನಗಳನ್ನು ಎಬ್ಬಿಸುವ ಪರಿ ಅನನ್ಯ. ಸಿನಿಮಾ ನೋಡದವರೂ ಕೂಡ ರೇಡಿಯೊ ಮೂಲಕ ಈ ಹಾಡುಗಳನ್ನು ಕೇಳಿ ತಮ್ಮದೇ ಆದ ಸ್ವತಂತ್ರ ರೊಮ್ಯಾಂಟಿಕ್ ಕಲ್ಪನೆಗಳನ್ನು ರೂಪಿಸಿಕೊಳ್ಳುವಂತೆ ಮಾಡುತ್ತಿದ್ದುದು ಈ ಹಾಡುಗಳ ಸಾಹಿತ್ಯ ಮತ್ತು ರಾಗಸಂಯೋಜನೆಯ ಅಗಾಧ ಸಾಮರ್ಥ್ಯಕ್ಕೆ ಸಾಕ್ಷಿ.
70ರ ದಶಕದಿಂದ, 90ರ ದಶಕದ ಆರಂಭದವರೆಗೂ ಈ ಸಂಗೀತ ನಿರ್ದೇಶಕ ಜೋಡಿ ಕನ್ನಡದ ಚಿತ್ರಪ್ರೇಕ್ಷಕರಿಗೆ ಮಾಡಿದ ಮೋಡಿಯನ್ನು ಬಣ್ಣಿಸಲು ಸೂಕ್ತ ಪದಗಳು ಸಿಗುವುದು ಕಷ್ಟ.
ಪಟ್ಟಿ ಉದ್ದವಿದೆ. ಭಾಗ್ಯವಂತರು, ಎರಡು ಕನಸು, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಿರಿಕನ್ಯೆ….
ಸೂರ್ಯ ಇನ್ನೂ ಮೋಡದ ಮರೆಯಲ್ಲಿ ಮೀನ ಮೇಷ ಎಣಿಸುತ್ತಿರುವ ತಂಪು ಮುಂಜಾನೆಯಲ್ಲಿ ‘ಬಾನಲ್ಲು ನೀನೇ…ಭುವಿಯಲ್ಲು ನೀನೇ..’ ಹಾಡು ಕೇಳುತ್ತಾ ಬಿಸಿ ಅಕ್ಕಿ ರೊಟ್ಟಿ ಮೆಲ್ಲುತ್ತಿದ್ದೇನೆ. 77ರಲ್ಲಿ ರಾಜಕೀಯ ಕ್ಷೇತ್ರದ ತಲ್ಲಣಗಳ ಮಧ್ಯೆಯೂ ಕನ್ನಡ ಚಿತ್ರರಸಿಕರಿಗೆ ಚಿ ಉದಯಶಂಕರ್ ಮತ್ತು ರಾಜನ್-ನಾಗೇಂದ್ರ ಜೋಡಿ ಉಣಬಡಿಸಿದ ಈ ರಸಕವಳದ ರುಚಿ ಸವಿದಷ್ಟೂ ಹೆಚ್ಚು.
Please follow and like us:
error