‘ಸಂವಿಧಾನ ದಿನಾಚರಣೆ’ ಆಹ್ವಾನ ಪತ್ರಿಕೆಯಲ್ಲಿ ಅಂಬೇಡ್ಕರ್ ಬದಲು ಶ್ಯಾಮ್ ಪ್ರಸಾದ್ ಮುಖರ್ಜಿ ಫೋಟೋ !

ವ್ಯಾಪಕ ಟೀಕೆ ಬಳಿಕ ಪೋಸ್ಟರ್ ಬದಲಿಸಿದ ಆರೆಸ್ಸೆಸ್ ಬೆಂಬಲಿತ ‘ನವ ಬೆಂಗಳೂರು ಫೌಂಡೇಷನ್’

ಬೆಂಗಳೂರು, ನ. 15: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪಮಾನಿಸಿದ ಘಟನೆ ಮಾಸುವ ಮುನ್ನವೇ ಆರೆಸ್ಸೆಸ್ ಬೆಂಬಲಿತ ನವ ಬೆಂಗಳೂರು ಫೌಂಡೇಷನ್ ‘ಸಂವಿಧಾನ ದಿನಾಚರಣೆ’ ಆಹ್ವಾನ ಪತ್ರಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರದ ಬದಲಿಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಫೋಟೋ ಪ್ರಕಟಿಸಿ ಉದ್ಧಟತನ ಮೆರೆದಿದೆ.

‘ನವ ಬೆಂಗಳೂರು ಫೌಂಡೇಷನ್’ ಸಂವಿಧಾನ ದಿನದ ಆಹ್ವಾನ ಪತ್ರಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಕಟಿಸುವ ಮೂಲಕ ಪರೋಕ್ಷವಾಗಿ ಕ್ಷಮೆ ಕೋರಿದೆ.

ನ.24ಕ್ಕೆ ಜಯನಗರದ ಆರ್.ವಿ.ಟೀಚರ್ಸ್‌ ಕಾಲೇಜಿನ ಸಭಾಂಗಣದಲ್ಲಿ ‘ನವ ಬೆಂಗಳೂರು ಫೌಂಡೇಷನ್’ ಸಂವಿಧಾನ ದಿನಾಚರಣೆ ಏರ್ಪಡಿಸಿದ್ದು, ಕೇಸರಿ ಬಣ್ಣದ ಆಹ್ವಾನ ಪತ್ರಿಕೆಯಲ್ಲಿ ‘ಒಂದು ದೇಶ ಒಂದು ಸಂವಿಧಾನ’ ಎಂಬ ಘೋಷಣೆಯೊಂದಿಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರ ಪ್ರಕಟಿಸಲಾಗಿದೆ.  ಅಲ್ಲದೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಲಿದ್ದು, ಇನ್ಪೋಸೀಸ್ ಮಾಜಿ ನಿರ್ದೇಶಕ ಟಿ.ವಿ.ಮೋಹನ್‌ದಾಸ್ ಪೈ ಹಾಗೂ ಫೌಂಡೇಷನ್‌ನ ಅನಿಲ್ ಶೆಟ್ಟಿ ಪಾಲ್ಗೊಳ್ಳಲಿದ್ದು, ಅವರ ಭಾವಚಿತ್ರಗಳಿವೆ. ಆದರೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರವೇ ಇರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನೀಲಿಬಣ್ಣದ ಮತ್ತೊಂದು ಆಹ್ವಾನ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ಉಳಿದವರ ಫೋಟೋಗಳನ್ನು ಪ್ರಕಟಿಸಿದ್ದು, ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರವನ್ನು ಕೈಬಿಡಲಾಗಿದೆ.

‘ಕೇಸರಿ ಪತ್ರಿಕೆಯಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿಯವರ ಚಿತ್ರ ಕಂಡೂ ಕಾಣದಂತೆ ಅಸ್ಪಷ್ಟವಾಗಿದೆ. ನೀಲಿ ಬಣ್ಣದ ಆಹ್ವಾನ ಪತ್ರಿಕೆಯಲ್ಲಿ ಡಾ.ಅಂಬೇಡ್ಕರ್ ಅವರ ಚಿತ್ರ ಡಾಳಾಗಿ, ಸ್ಪಷ್ಟವಾಗಿ ಕಾಣುವಂತಿದೆ. ಇದರ ಅರ್ಥ ಸುಳ್ಳು ಮತ್ತು ಸತ್ಯದ ನಡುವಿನ ನೇರವಾದ ವ್ಯತ್ಯಾಸವಿದು!?’
-ಡಾ.ಸಿ.ಎಸ್.ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

Please follow and like us:
error