ಸಂವಿಧಾನ ಉಳಿವಿಗಾಗಿ ಕರ್ನಾಟಕ -ಶೋಷಿತ ಸಮುದಾಯಗಳ ಸ್ವಾಭಿಮಾನಿ ಸಮಾವೇಶ

 

ನಮ್ಮ ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಸಮಸ್ತ ಶೋಷಿತ ವರ್ಗಗಳ ಹಾಗೂ ದಮನಿತ ಸಮುದಾಯಗಳ ಪ್ರತಿನಿಧಿಯಾಗಿ ಸಂವಿಧಾನ ರಚನೆಯಲ್ಲಿದ್ದ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ನ್ಯಾಯವನ್ನು ಸಂವಿಧಾನದ ಆಶಯಗಳನ್ನಾಗಿ ಮಾಡಿದರು. ಸಂವಿಧಾನದ ಆಶಯಗಳೆಂದರೆ ಪ್ರಭುತ್ವಗಳ ಹಾಗೂ ಇಡೀದೇಶದ ಆಶಯಗಳಾಗಬೇಕು ಎಂದು ಅರ್ಥ. ಆದರೆ ಇದುವರೆಗಿನ ಯಾವ ಆಳುವ ಪಕ್ಷಗಳೂ ಸಂವಿಧಾನದ ಈ ಆಶಯಗಳಿಗನುಸಾರ ನಡೆದುಕೊಳ್ಳಲಿಲ್ಲ. ಈಗ ಮುಂದುವರೆದು ಈ ಆಶಯಗಳನ್ನು ಸಾರಾಸಗಟು ವಿರೋಧಿಸುವ ಕಾರ್ಪೋರೇಟ್ ಮತ್ತು ಮತಾಂಧ ಶಕ್ತಿಗಳ ಜಂಟಿ ಸಂತಾನ ಭಾರತದಲ್ಲಿ ಬೆಳೆಯುತ್ತಿದೆ. ಇವರು ವಾಕ್ ಸ್ವಾತಂತ್ರ್ಯದ ವಿರೋಧಿಗಳಾಗಿದ್ದಾರೆ. ಭಿನ್ನ ಸ್ವರವನ್ನು ಹತ್ತಿಕ್ಕಲಿಕ್ಕಾಗಿಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿಯನ್ನು ಘೋರ ರೀತಿಯಲ್ಲಿ ಹತ್ಯೆಗೈದಿದ್ದಾರೆ. ಇವರು ಸಮಾನತೆಯ ವಿರೋಧಿಗಳಾಗಿದ್ದಾರೆ. ಇಡೀ ದೇಶವನ್ನು ಅಂಬಾನಿ, ಅದಾನಿಗಳಿಗೆ ಹರಾಜು ಹಾಕಿದ್ದಾರೆ. ಮಲ್ಯಾ, ಮೋದಿಗಳಿಗೆ ಕೋಟಿಗಟ್ಟಲೆ ಬಾಚಿ ಓಡಿಹೋಗಲು ಅವಕಾಶ ಒದಗಿಸಿದ್ದಾರೆ. ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎನ್ನುತ್ತಿದ್ದಾರೆ, ಕಾರ್ಮಿಕರ ಗುತ್ತಿಗೆ ಪದ್ದತಿಯನ್ನು ರದ್ದು ಮಾಡಲು ನಿರಾಕರಿಸುತ್ತಿದ್ದಾರೆ. ಬಕಾಸುರ ಕಂಪನಿಗಳ ಹೊಟ್ಟೆಗೆ ಸಣ್ಣ ಉದ್ದಿಮೆಗಳನ್ನು ಬಲಿಕೊಡುತ್ತಿದ್ದಾರೆ. ಬಡತನವನ್ನು ಬೆಳೆಸಿ ಕೋಟ್ಯಾಧೀಶ ಕಾರ್ಪೋರೇಟ್ ಕಂಪನಿಗಳನ್ನು ಸಾಕುತ್ತಿದ್ದಾರೆ. ಇವರು ಸಹೋದರ(ರಿ)ತೆಯ ವಿರೋಧಿಗಳಾಗಿದ್ದಾರೆ. ಧರ್ಮದ ಆಧಾರದ ಮೇಲೆ ಇಡೀ ದೇಶದಲ್ಲಿ ರಕ್ತ ರಾಜಕಾರಣವನ್ನು ನಡೆಸಿದ್ದಾರೆ. ಧರ್ಮದ ಹೆಸರಿನಲ್ಲಿ ದಯೆಯೇ ಇಲ್ಲದ ದೆವ್ವಗಳ ಕುಣಿತ ನಡಿಯುತ್ತಿದೆ. ಧರ್ಮದ ಹೆಸರಿನಲ್ಲಿ ಮತ್ತು ಜಾತಿಯ ಹೆಸರಿನಲ್ಲಿ ಚಿಂತನ ಗಂಗಾದ ಪಡೆಗಳು ಶೋಷಿತರ ಮಾರಣಹೋಮ ನಡೆಸುತ್ತಿವೆ. ಇವರು ನ್ಯಾಯದ ವಿರೋಧಿಗಳಾಗಿದ್ದಾರೆ. ರೋಹಿತ್ ವೆಮುಲರ ಸಾಂಸ್ಥಿಕ ಹತ್ಯೆಗೆ ನ್ಯಾಯ ಇನ್ನೂ ಮರೀಚಿಗೆಯಗಿದೆ. ಗುಜರಾತಿನ ೨೦೦೦ ಜನ ಅಮಾಯಕರ ಬಲಿಗೆ ಕಾರಣರಾದ ಮುಖ್ಯರಿಗೆ ಶಿಕ್ಷೆಯೇ ಆಗಲಿಲ್ಲ. ಆಮಾಯಕ ದಾನಮ್ಮಳಂತಹ ಅತ್ಯಾಚಾರ ಮತ್ತು ಕೊಲ್ಲಲ್ಪಟ್ಟ ಮಹಿಳೆಯರಿಗೆ ನ್ಯಾಯದ ತಕ್ಕಡಿ ತೂಗಲಿಲ್ಲ. ಪ್ರಜಾ ಪ್ರಭುತ್ವವನ್ನೇ ಅಣಕಿಸುವಂತೆ ನ್ಯಾಯಮೂರ್ತಿ ಲೋಯ ಕೊಲೆಗೀಡಾಗಿದ್ದಾರೆ.
ಜಾತಿಯತೆಯತೆ, ಧರ್ಮಾಂಧತೆ, ಭ್ರಷ್ಟಾಚಾರ, ಆಳುವವರ ಬಂಡವಾಳಶಾಹಿ ಪರ ನಿಲುವು ಇವ್ಯಾವುವೂ ಹೊಸದಲ್ಲ. ಆದರೆ ಅವೆಲ್ಲಾ ಈ ಧರ್ಮಾಂಧರ ಅವಧಿಯಲ್ಲಿ ಅಪಾಯಕಾರಿ ಹಂತವನ್ನು ತಲುಪುತ್ತಿವೆ ಮತ್ತು ಇದರ ವಿರುದ್ಧ ಏಳುವ ಎಲ್ಲಾ ದನಿಗಳನ್ನು ಕ್ರೂರವಾಗಿ ಹತ್ತಿಕ್ಕುವ ಸರ್ವಾಧಿಕಾರಿ ನಡವಳಿಕೆ ಬೆಳೆಯುತ್ತಿದೆ, ಓಟು ರಾಜಕಾರಣಕ್ಕಾಗಿ ಅಮಾಯಕರನ್ನು ಬಲಿತೆಗೆದುಕೊಳ್ಳುವ, ರಕ್ತದ ಕೋಡಿ ಹರಿಸುವ ಪೈಶಾಚಿಕತೆ ಎಲ್ಲದರಲ್ಲು ವ್ಯಾಪಿಸುತ್ತಿದೆ. ನಕಲಿ ದೇಶ ಭಕ್ತಿಯ ನಾಯಕ ಬಹುತೇಕ ಸಮಯವನ್ನು ವಿದೇಶಗಳಲ್ಲೇ ಕಳೆಯುತ್ತಾರೆ. ಹಿಂದುತ್ವದ ಹೆಸರಿನಲ್ಲಿ ಬುದ್ಧ, ಬಸವರ ತತ್ವಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಧರ್ಮರಕ್ಷಣೆಯ ಹೆಸರಿನಲ್ಲಿ ಗಾಂಧಿಯ ನಾಡಿನಲ್ಲಿ ಖಡ್ಗ, ತ್ರಿಶೂಲಗಳ ಮೆರವಣಿಗೆ ನಡೆಯುತ್ತಿದೆ. ನೋಟು ಅಮಾನ್ಯೀಕರಣದ ನೆಪದಲ್ಲಿ ಜನರ ಹಣವನ್ನು ತಿಜೋರಿಗಳಲ್ಲಿ ಬಾಚಿಕೊಂಡು ಜನರನ್ನು ಅಕ್ಷರಶಃ ಬೀದಿಯಲ್ಲಿ ನಿಲ್ಲಿಸಲಾಗಿದೆ. ಜಿಎಸ್‌ಟಿ ಹೆಸರಿನಲ್ಲಿ ಸಣ್ಣ ಉದ್ದಿಮೆದಾರರ ಉಳಿಕೆಯನ್ನೆಲ್ಲಾ ನುಂಗಿ ನೀರು ಕುಡಿಯಲಾಗುತ್ತಿದೆ. ಸಜ್ಜನ ಸಂಘದ ಪಕ್ಷ ಭ್ರಷ್ಟಾಚಾರಗಳ ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಂತ ಸನ್ಯಾಸಿಗಳ ಪಕ್ಷ ಕಾರ್ಪೊರೇಟ್ ಶಕ್ತಿಗಳ ಸೇವೆಯಲ್ಲಿ ನಿತ್ಯನಿರತವಾಗಿದೆ. ಒಟ್ಟಿನಲ್ಲಿ, ಮನುಷ್ಯ ವಿರೋಧಿ, ಜೀವ ವಿರೋಧಿ, ಧರ್ಮ ವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ ಶಕ್ತಿಗಳು ದೇಶದಲ್ಲಿ ಬೆಳೆಯುತ್ತಿವೆ. ಮತಾಂಧ ಮಾಫಿಯಾ ಪಡೆ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಬಂಡವಾಳವಾದಿ ಮತ್ತು ಬ್ರಾಹ್ಮಣ್ಯವಾದಿ ಶಕ್ತಿಗಳು ಒಗ್ಗೂಡಿ ಭಾರತವನ್ನು ಮತ್ತೆ ಸನಾತನ ಗುಲಾಮಗಿರಿಗೆ ಎಳೆಯಲು ಹವಣಿಸುತ್ತಿವೆ. ಇಡೀ ದೇಶ ವಿನಾಶದತ್ತ ಸಾಗುತ್ತಿರುವ ಎಲ್ಲಾ ಸ್ಪಷ್ಟ ಸೂಚನೆಗಳು ಕಣ್ಣ ಮುಂದಿವೆ.
ಪ್ರಜಾಪ್ರಭುತ್ವದ ೪ ಅಂಗಗಳು ತೀವ್ರ ಬಿಕಟ್ಟಿನಲ್ಲಿವೆ ಎಂಬುದನ್ನು ಮೇಲಿನೆಲ್ಲಾ ಅಂಶಗಳು ಅನುಮಾನಕ್ಕೆಡೆ ಇಲ್ಲದಂತೆ ಸಾಬಿತು ಪಡಿಸುತ್ತಿವೆ. ಸರ್ವೋಚ್ಚ ನ್ಯಾಯಾಲಯದ ೪ ಹಿರಿಯ ನ್ಯಾಯಾದೀಶರು ಆemoಛಿಡಿಚಿಛಿಥಿ is iಟಿ ಜಚಿಟಿgeಡಿ ಎಂದು ಹೇಳುವಷ್ಟು ಮಟ್ಟಿಗೆ ಅತಿರೇಕಕ್ಕೆ ತಲುಪಿದೆ. ಮಾಧ್ಯಮ ರಂಗವನ್ನು ಕಾರ್ಪೋರೇಟ್ ಬಕಾಸುರರು ಹಲ್ಲಿಲ್ಲದಂತೆ ಮಾಡಿವೆ. ಕಾಯಾಬೇಕಾದ ಅಂಗಗಳೇ ಕೊಲ್ಲಲ್ಪಡುತ್ತಿವೆ ಅಥವಾ ಕೊಲ್ಲಲು ಪ್ರೆರೇಪಿಸುತ್ತಿವೆ. ಚುನಾವಣೆಗಳು ಜನರ ಹಬ್ಬವಾಗದೇ ದರ್ಪಿಷ್ಟರ ಆಟದಂತೆ ಪರಿವರ್ತನೆ ಆಗುತ್ತಿವೆ.
ಒಟ್ಟಾರೆ ನಮ್ಮ ಸಂವಿಧಾನದ ಆಶಯಗಳನ್ನು ಉಳಿಸಬೇಕೆಂದರೆ, ದೇಶ ಉಳಿಸಬೇಕಾದರೆ ಮೊದಲು ಈ ವಿನಾಶಕಾರಿ ಶಕ್ತಿಗಳನ್ನು ಬರುವ ಚುನಾವಣೆಯಲ್ಲಿ ಸೋಲಿಸಬೇಕಿದೆ. ಈಗಾಗಲೇ ಇವರು ಕೇಂದ್ರದ ಅಧಿಕಾರವನ್ನು ಹಿಡಿದಿರುವುದಷ್ಟೇ ಅಲ್ಲದೆ, ದೇಶದ ೨೧ ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬಂದರೆ ಬಲಪಂಥೀಯ ಶಕ್ತಿಗಳಿಗೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣ ರಾಜ್ಯಗಳನ್ನು ಕಬಳಿಸಲು ದಿಡ್ಡಿ ಬಾಗಿಲು ತೆಗೆದಂತಾಗುತ್ತದೆ. ಕರ್ನಾಟಕದಲ್ಲಿ ಹೋರಾಡಿ ಕಾಪಾಡಿಕೊಂಡಿರುವ ಒಂದು ಮಟ್ಟದ ಪ್ರಜಾತಂತ್ರವನ್ನೂ ಬಲಿಕೊಟ್ಟಂತಾಗುತ್ತದೆ. ಹಾಗಾಗಿಯೇ ಬಲಪಂಥೀಯ ಶಕ್ತಿಗಳು ಈ ಬಾರಿ ಬಲಗೊಳ್ಳದಂತೆ ನೋಡಿಕೊಳ್ಳಬೇಕಿರುವುದು ನಮ್ಮೆಲ್ಲರ ಚಾರಿತ್ರಿಕ ಜವಾಬ್ದಾರಿಯಾಗಿದೆ.
ಈ ನಮ್ಮ ಹೈದ್ರಾಬಾದ್ ಕರ್ನಾಟಕ ಶರಣರ ನಾಡು-ಸೌಹಾರ್ಧತೆಯ ನೆಲೆಯ ಪರಂಪರೆಯಾಗಿದೆ. ಈ ಭಾಗದಲ್ಲಿ ಅಧಿಕಾರಕ್ಕಾಗಿ ಜಾತಿ, ಧರ್ಮ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ಇದೇ ಶಕ್ತಿಗಳು ಮಾಡುತ್ತಿದ್ದು, ಸಹಭಾಳ್ವೆಗೆ ದಕ್ಕೆ ತರುತ್ತಿದ್ದಾರೆ. ಕೋಮು ಗಲಭೆಗಳನ್ನು ಹಚ್ಚುವ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕಾಗಿ ಜನರ ನಂಬಿಕೆಯ ದೇವರನ್ನು ಬೀದಿಗೆ ತಂದು ಗಲಭೆಯ ಆಟವಾಉತ್ತಿದ್ದಾರೆ. ಇದನ್ನು ತಡೆಯಬೇಕಾದ ಮತ್ತು ಎಲ್ಲಾ ಜಾತಿ ಧರ್ಮದವರು ಶಾಂತಿ-ಪ್ರೀತಿಯಿಂದ ಭಾಳಬೇಕಾದ ವಾತಾವರಣವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಮತ್ತು ದೇಶ ಅಪಾಯದ ಸುಳಿಯಲ್ಲಿ ಸಿಲಿಕಿರುವುದು, ಪ್ರಜಾತಂತ್ರದ ಹೆಸರಲ್ಲಿ ನಿರಂಕುಶ ಶಕ್ತಿಗಳು ಅದಿಕಾರಕ್ಕೆ ಬಂದು ಮುಂದಿನ ದಿನಗಳಲ್ಲಿ ಆಗಬಹುದಾದ ಆಪಾಯದ ಸಂದರ್ಭದ ಸಂಧಿಗ್ದತೆ ಮತ್ತು ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ಉಳಿವಿಗಾಗಿ ಕರ್ನಾಟಕವು ರಾಜ್ಯದಾದ್ಯಂತ ಜನ ಜಾಗೃತಿಯನ್ನು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ದೇಶವನ್ನು ಪ್ರೀತಿಸುವ, ಸೌಹಾರ್ಧ ಬಯಸುವ ಎಲ್ಲರೂ ಸಂವಿಧಾನ ಆಶಯಗಳನ್ನು ಉಳಿಸಿ ಬೆಳೆಸುವ ಎಲ್ಲರೂ ಒಂದಾಗೋಣ, ಇದಕ್ಕಾಗಿ ದುಡಿಯೋಣವೆಂದು ಓ ಮೂಲಕ ಕರೆ ಕೊಡುತ್ತಿದೆ.

ಇದರ ಭಾಗವಾಗಿ ಏಪ್ರಿಲ್ ೬ ರಂದು ಗಂಗಾವತಿ ನಗರದಲ್ಲಿ ಸಂವಿಧಾನ ಉಳಿಸಿ ಕರ್ನಾಟಕ ವತಿಯಿಂದ ಹೈದ್ರಾಬಾದ್ ಕರ್ನಾಟಕ ವಿಭಾಗ ಮಟ್ಟದ ದಲಿತ-ಪ್ರಜಾತಂತ್ರವಾದಿಗಳ, ಅಲ್ಪಸಂಖ್ಯಾತ, ಶೋಷಿತ ಸಮುದಾಯಗಳ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಯನ್ನು ಉದ್ದೇಶಿಸಿ ದಲಿತ ಸಮುಧಾಯದ ಯುವ ಮುಖಂಡರೂ ಹಾಗೂ ಶಾಸಕರಾದ ಗುಜರಾತಿನ   ಜಿಗ್ನೇಶ್ ಮೇವಾನಿಯವರು, ದಲಿತ ಸಂಘರ್ಷ ಸಮಿತಿ ಮತ್ತು ಸಂವಿಧಾನ ಉಳಿಸಿ ಕರ್ನಾಟಕ ವೇದಿಕೆಯ ಮುಖಂಡರುಗಳಾದ ಎನ್.ವೆಂಕಟೇಶ್, ಇಂದೂಧರ ಹೊನ್ನಾಪುರ, ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ರಾಜ್ಯ ಕಾರ್ಯದರ್ಶಿಯಾದ ಕೆ.ಎಲ್.ಅಶೋಕ್ ಭಾಗವಹಿಸುವರಲ್ಲದೆ, ಲಿಂಗಾಯತ-ಕ್ರಿಶ್ಚಿಯನ್-ಮುಸ್ಲಿಮ್, ಸಮುಧಾಯದ ಧರ್ಮಗಳ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದ ಜನತೆ ಮತ್ತು ಎಲ್ಲಾ ಪ್ರಗತಿಪರರು, ಸಂಘಟನೆಗಳ ಮುಖಂಡರುಗಳು ದಲಿತ-ರೈತಪರ ಪ್ರಜಾತಂತ್ರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಸಂವಿದಾನ ಉಳಿಸಿ ಕರ್ನಾಟಕಮನವಿ ಮಾಡಿಕೊಳ್ಳುತ್ತದೆ.

೫ನೇ ತಿರುವು, ಕುಮಾರಾಪಾರ್ಕ್ ಪಶ್ಚಿಮ ೨೪(೪) ಸುಬ್ರಮಣ್ಯ ದೇವಸ್ಥಾನದ ಹತ್ತಿರ, ಶೇಷಾದ್ರಿಪುರಂ, ಬೆಂಗಳೂರು-೨೦
ಅದ್ಯಕ್ಷರು : ಎಚ್.ಎಸ್.ದೊರೆಸ್ವಾಮಿ. ಗೌರವಾಧ್ಯಕ್ಷರು : ಎ.ಕೆ.ಸುಬ್ಬಯ್ಯ.

Please follow and like us:
error

Related posts