ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ: ಸಂಪುಟದಲ್ಲಿ ಚರ್ಚಿಸಿ ಸೂಕ್ತ ಕ್ರಮ- ಯಡಿಯೂರಪ್ಪ

ಬೆಂಗಳೂರು, ಮಾ. 20: 2011ನೆ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ನೇಮಕ ಸಂಬಂಧ ಈ ಸದನದ ಎಲ್ಲ ಸದಸ್ಯರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಮೇಲಿನ ಅಲ್ಪಾವಧಿ ಚರ್ಚೆಗೆ ಕಾನೂನು

ಸಚಿವ ಮಾಧುಸ್ವಾಮಿ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, 362 ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಅಭ್ಯರ್ಥಿಗಳ ಬಗ್ಗೆ ಸಹಾನುಭೂತಿ: 2011ನೆ ಸಾಲಿನಲ್ಲಿ ನಡೆದ ಈ ನೇಮಕ ವಿಷಯದಲ್ಲಿ ರಾಜ್ಯ ಸರಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದು, ನೇಮಕ ಮರು ಪರಿಶೀಲನೆ ಹಾಗೂ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

2011ನೆ ಸಾಲಿನ ಕೆಪಿಎಸ್ಸಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಅದೇ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದೆ. ಹುದ್ದೆಗಳಿಗೆ ನೇಮಕಗೊಂಡ ಬಳಿಕ ಪಟ್ಟಿ ರದ್ದುಗೊಂಡಿದ್ದರಿಂದ ಕೆಲಸದಿಂದ ವಂಚಿತರಾದವರ ಬಗ್ಗೆ ಸರಕಾರಕ್ಕೂ ಸಹಾನುಭೂತಿ ಇದೆ ಎಂದು ಮಾಧುಸ್ವಾಮಿ ತಿಳಿಸಿದರು.

ಈ ಸಾಲಿನ ನೇಮಕಾತಿ ವಿಷಯದಲ್ಲಿ ಸತ್ಯವನ್ನು ಮುಚ್ಚಿಟ್ಟು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಲಾಗಿದೆ. ಅಲ್ಲದೆ, ಕೆಪಿಎಸ್ಸಿ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿ ಉಭಯ ಸದನಗಳಲ್ಲಿ ವರದಿ ಮಂಡಿಸಿದರೂ, ಸಂವಿಧಾನದ ವಿಧಿ 323(2) ಅನ್ವಯ ಸದಸ್ಯರಿಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಯಾರೊ ಮಾಡಿದ ತಪ್ಪಿಗೆ 362 ಅಭ್ಯರ್ಥಿಗಳು ಬಲಿಯಾಗಿದ್ದು, ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.

ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಕೆಪಿಎಸ್ಸಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದೂರವಾಣಿ ಸಂಭಾಷಣೆ ವಿಚಾರ ಯಾವುದು ಸಾಬೀತಾಗಿಲ್ಲ. ಭ್ರಷ್ಟಾಚಾರ ಎಂದರೆ ಕೊಟ್ಟವರು ಮತ್ತು ಪಡೆದವರು ಇರಬೇಕು, ಅದು ಕಾಣಿಸುತ್ತಿಲ್ಲ. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಅಧಿಸೂಚನೆ ವಾಪಸ್ ಪಡೆಯಲಾಗಿದೆ ಎಂದರು.

ಸುಗ್ರೀವಾಜ್ಞೆ ಹೊರಡಿಸಿ: 2011ನೆ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ನೇಮಕ ಸಂಬಂಧ ರಾಜ್ಯ ಸರಕಾರಕ್ಕೂ ಅಭ್ಯರ್ಥಿಗಳ ಬಗ್ಗೆ ಅನುಕಂಪವಿದ್ದು, ಕೂಡಲೇ ಸುಗ್ರೀವಾಜ್ಞೆ ಹೊರಡಿಸಿ ನೇಮಕ ಮಾಡಿ ಅನ್ಯಾಯ ಸರಿಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

Please follow and like us:
error