ಸಂತಸವೆಂಬುದು ಕೊಂಡು ತರುವುದಲ್ಲ- ಸಿದ್ದರಾಮ ಕೂಡ್ಲಿಗಿ


ಇದು ಕೆಲವು ವರ್ಷಗಳ ಹಿಂದೆ ನಾನು ಆಕಸ್ಮಿಕವಾಗಿ ಕ್ಲಿಕ್ ಮಾಡಿದ ಚಿತ್ರ. ಈ ಚಿತ್ರ ಕ್ಲಿಕ್ಕಿಸುವಾಗ ಜೂಮ್ ಲೆನ್ಸ್ ಬಳಸಿದ್ದುದರಿಂದ ಈ ಮಕ್ಕಳಿಗೆ ಚಿತ್ರ ತೆಗೆದಿರುವುದು ಗೊತ್ತಿಲ್ಲ. ಇದು ನನ್ನನ್ನು ಪದೇ ಪದೇ ಚಿಂತನೆಗೆ ಹಚ್ಚುವ ಚಿತ್ರ.

ನಮ್ಮ ಕೂಡ್ಲಿಗಿಯಿಂದ ಸೋವೇನಹಳ್ಳಿಗೆ ಹೋಗಿ ಫೋಟೊಗ್ರಫಿ ಮುಗಿಸಿಕೊಂಡು ಬೈಕ್ ನಲ್ಲಿ ಮರಳಿಬರುತ್ತಿದ್ದೆ. ಆಕಸ್ಮಿಕವಾಗಿ ಈ ಇಬ್ಬರೂ ಮಕ್ಕಳು ಕಂಡರು. ದಾರಿಯಲ್ಲಿ ಮಾತನಾಡುತ್ತ ಹೊರಟಿದ್ದ ಈ ಮಕ್ಕಳಲ್ಲಿ ಅದೇನೋ ಚಂದದ ಸಂತಸ ಕಂಡಿತು. ನನ್ನ ಬಾಲ್ಯ ನೆನಪಾಯಿತು. ಸ್ವಲ್ಪ ದೂರ ಹೊಗಿ ನಿಂತುಕೊಂಡು ಗಮನಿಸಿದೆ. ಆ ಬಾಲಕ ಬಾಲಕಿಗೆ ಏನನ್ನೋ ಹೇಳುತ್ತಿದ್ದ ನಗಿಸುತ್ತಿದ್ದ. ತುಂಬಾ ಮುಗ್ಧ ಹಾಗೂ ಸಹಜ ಸಂತಸದ ಕ್ಷಣಗಳು ಅವು. ಬಾಲಕಿಯ ಕಾಲಲ್ಲಿ ಹಳೆಯ ಶೂಗಳು, ಇವನಿಗೆ ಚಪ್ಪಲಿಯೂ ಇಲ್ಲ. ಮಾಸಿದ ಬಟ್ಟೆಗಳು. ಅವರಲ್ಲಿದ್ದ ಶ್ರೀಮಂತಿಕೆ ಎಂದರೆ ಅವರ ಸಂತಸದ ನಗು. ನಿಜವಾಗಿಯೂ ನನಗೆ ಜಗತ್ತೇ ಮರೆತುಹೋಗಿತ್ತು.

ಪಟ್ಟಣ ಹಾಗೂ ನಗರಗಳಲ್ಲಿ ಮಕ್ಕಳನ್ನು ಎಷ್ಟು ಚಂದ ನೋಡಿಕೊಳ್ಳುತ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ವಿವಿಧ ಶಕ್ತಿವರ್ಧಕ ಪಾನೀಯಗಳನ್ನು ಕುಡಿಸಿ, ಬಿಸ್ಕಿಟ್ ಕೇಕ್ ಗಳನ್ನು ತುತ್ತು ಮಾಡೀ ತಿನ್ನಿಸಿ, ಹೊಸ ಬಟ್ಟೆಗಳೆಂದರೇ ಏನೆಂದು ಅರ್ಥವಾಗದ ರೀತಿಯಲ್ಲಿ ಹೊಸ ಮಾಡ್ ಡ್ರೆಸ್ ಗಳನ್ನು ಹಾಕಿ, ವಿವಿಧ ಬಗೆಯ ಶೂಗಳನ್ನೂ ಹಾಕಿ, ಕೈ ಸ್ವಲ್ಪ ಧೂಳಾದರೂ ಜಗತ್ತಿನ ಎಲ್ಲ ಕಾಯಿಲೆಗಳೂ ಮಗುವಿಗೇ ಬಂದುಬಿಡುತ್ತದೇನೋ ಎಂಬಂತೆ ಕಾಳಜಿ ವಹಿಸಿ, ಹೊರಗಿನ ಯಾವುದೇ ಗಾಳಿಯನ್ನೂ ಉಸಿರಾಡದೆ ಸ್ವಚ್ಛ ಗಾಳಿ ಉಸಿರಾಡುವಂತೆೆ ಜಾಗ್ರತೆ ವಹಿಸಿ, ಪರಿಶುದ್ಧ ಬಾಟಲಿಯ ನೀರನ್ನೇ ಕುಡಿಸಿ, ಕೇಳುವ ಮೊದಲೇ ಎಲ್ಲ ದುಬಾರಿ ಬೆಲೆಯ ಆಟಿಕೆಗಳನ್ನು ಕೊಡಿಸಿ……………. ಒಂದೇ ಎರಡೇ ಎಷ್ಟು ವೈಭವದಿಂದ ಮಕ್ಕಳನ್ನು ಬೆಳೆಸುತ್ತೇವೆ. ಇಷ್ಟೆಲ್ಲ ಇದ್ದರೂ ಮಕ್ಕಳ ಮೊಗದಲ್ಲಿ ನಗೆಯೇ ಇರುವುದಿಲ್ಲ, ದಷ್ಟಪುಷ್ಟವಾಗಿಯೂ ಇರುವುದಿಲ್ಲ. ಒಮ್ಮೆ ಸೀನಿದರೂ ಡಾಕ್ಟರ್ ಬಳಿ ಓಡಿಹೋಗುತ್ತೇವೆ.

ಇದಾವುದೂ ಈ ಮಕ್ಕಳಲ್ಲಿ ಕಾಣಲಿಲ್ಲ. ಅವರ ಮುಖಗಳೇ ಹೇಳುತ್ತಿದ್ದವು ಮೇಲೆ ತಿಳಿಸಿದ ಯಾವುದೂ ಇವರಿಗೆ ದಕ್ಕಿಲ್ಲವಾದರೂ ಆರೋಗ್ಯಪೂರ್ಣವಾಗಿದ್ದಾರೆಂಬುದನ್ನು ಅವರ ಮುಖದ ಸಂತಸದ ಕಳೆಯೇ ಹೇಳುತ್ತಿದ್ದವು. ಏನೆಲ್ಲ ಇದ್ದರೂ ಸಂತಸವನ್ನು ಹೊಂದಿರುವುದು ತುಂಬಾ ವಿರಳ. ಇನ್ನೂ ಬೇಕು ಬೇಕು ಎಂಬ ಹಪಹಪಿಯಲ್ಲಿ ನಾವು ಏನೆಲ್ಲವನ್ನೂ ಕಳೆದುಕೊಂಡುಬಿಡುತ್ತೇವೆ. ಅದು ಹಣವೇ ಆಗಿರಬಹುದು, ಕೀರ್ತಿಯೇ ಆಗಿರಬಹುದು, ಪ್ರಚಾರವೇ ಆಗಿರಬಹುದು, ಪ್ರತಿಷ್ಠೆ ಆಗಿರಬಹುದು, ಯಾವುದೇ ಆಗಿರಬಹುದು ಅವುಗಳ ಬೆನ್ನಟ್ಟಿಯೇ ಸಂತೋಷವನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ನಮ್ಮ ಸುತ್ತುಮುತ್ತಲೂ ಇರುವ ಕ್ಷಣದ ಸಂತಸದ ಗಳಿಗೆಗಳನೇ ಕಳೆದುಕೊಂಡುಬಿಡುತ್ತೇವೆ.

ಇದನ್ನು ಫೋಟೊಗ್ರಫಿಯ ಎಲ್ಲ ನಿಯಮಗಳನ್ನು ಪಾಲಿಸಿದ ಅತ್ಯುತ್ತಮ ಚಿತ್ರವೆಂದು ಹೇಳಲಾರೆ, ಅದು ನನಗೆ ಬೇಕಾಗೂ ಇಲ್ಲ, ಆದರೆ ಅತ್ಯುತ್ತಮವಾಗಿ ಹೇಗೆ ಬದುಕಬೇಕೆಂಬುದನ್ನು ತಿಳಿಸುವ ಚಿತ್ರವೆಂದು ಖಂಡಿತ ಹೇಳಬಲ್ಲೆ. ನನಗೆ ಬೇಸರವಾದಾಗಲೆಲ್ಲ ಈ ಚಿತ್ರ ನೋಡುತ್ತೇನೆ ಬದುಕಿನ ಪಾಠವನ್ನು ಈ ಮಕ್ಕಳಿಂದ ಕಲಿಯುತ್ತೇನೆ.

ಸಿದ್ಧರಾಮ ಕೂಡ್ಲಿಗಿ

Please follow and like us:
error