ಶ್ರದ್ಧೆ ಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ


ಕೊಪ್ಪಳ : ವಿದ್ಯಾರ್ಥಿಗಳು ಶೈಕ್ಷಣಿಕ ಓದಿನ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಸರ್ಕಾರಿ ಕೆಲಸ ಪಡೆದು ಉತ್ತಮ ಜೀವನ ನಿರ್ವಹಣೆ ಯಿಂದ ಸಮಾಜದ ಓರೆ ಕೊರೆಗಳನ್ನು ತಿದ್ದುವ ಹೊಣೆ ಮುಖ್ಯವಾಗುತ್ತದೆ. ಆದರೆ ಮಾತೃ ಭಾಷೆ ಕನ್ನಡವನ್ನು ಕಲಿಯುವುದರ ಜೊತೆಗೆ ಶ್ರದ್ಧೆ ಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಎಂದು ಸ.ಪ್ರ.ದ.ಕಾಲೇಜು ಹೊಸಬಂಡಿಹರಳಪುರದ ಪ್ರಾಚಾರ್ಯ ಡಾ|| ನಿಂಪ್ಪ ಕಂಬಳಿ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸುವ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳುವಲ್ಲಿ ಅವರ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ನಗರದಲ್ಲಿ ಸ್ಥಾಪಿತಗೊಂಡಿರುವ ಸ್ಪರ್ಧಾ ಕಲ್ಯಾಣ ಕೋಚಿಂಗ್ ಸೆಂಟರ್‌ನ ಉಚಿತ ಕಾರ್ಯಗಾರ ಉದ್ಘಾಟಿಸಿ ಮತ್ತು ಸ್ಪರ್ಧಾತ್ಮಕ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಮಾತೃಭಾಷೆ ಕನ್ನಡದಲ್ಲಿ ಓದಿದ ಮಕ್ಕಳು ಬೇರೆ ಭಾಷೆಯನ್ನು ಸರಾಗವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಮನೆ ಭಾಷೆ ಬಿಟ್ಟು ಬೇರೆ ಮಾಧ್ಯಮದಲ್ಲಿ ಕಲಿಕೆಗೆ ತೊಡಗಿದ ಕೆಲಮಕ್ಕಳಲ್ಲಿ ವಿದ್ಯಾಭ್ಯಾಸ ಕುಂಠಿತವಾಗಿರುವುದನ್ನು ಕಾಣುತ್ತೇವೆ. ಕೋಚಿಂಗ್ ಸೆಂಟರ್ ಪರಿಕಲ್ಪನೆ ಹುಟ್ಟಿದ್ದು ಮನೆ ಮನೆಗಳಲ್ಲಿ ಅಲ್ಲ ಮನ-ಮನಗಳಲ್ಲಿ ಎಂದು ತೇಜಸ್ವಿ ಹಲಗೇರಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಪರ್ಧಾ ಕಲ್ಯಾಣದ ಅಧ್ಯಕ್ಷರಾದ ವೆಂಕಟೆಶ ಗುಡ್ಲಾನೂರ್ ಅವರು ಮಾತನಾಡಿ, ಸ್ಪರ್ಧಾ ಕಲ್ಯಾಣಕ್ಕೆ ವ್ಯಾಪಕ ಅರ್ಥಗಳಿವೆ. ವಿದ್ಯಾರ್ಥಿಗಳು ಕಠಿಣ ವಿಷಯಗಳಿಗೆ ತರಬೇತಿ ಪಡೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಇದರಿಂದ ಜ್ಞಾನ ಸಂಪನ್ನತೆ ಪಡೆದು ವಿದ್ಯಾಥಿಗಳು ಹೆಚ್ಚಿನ ಸಂಖ್ಯೆಲ್ಲಿ ತೇರ್ಗಡೆ ಹೊಂದುವುದರಿಂದ ಕಾಲೇಜಿಗೆ ಹಾಗೂ ಜಿಲ್ಲೆಗೆ ಒಳ್ಳೆಯ ಹೆಸರು ಬರುತ್ತದೆ. ಅಂತಹ ಅವಕಾಶ ವಿದ್ಯಾರ್ಥಿಗಳಿಗೆ ಸ್ಥಳಿಯವಾಗಿ ಸಿಗುವುದು ಸಂತಸದ ಸಂಗತಿಯಾಗಿದೆ ಎಂದರು.
ಕೇವಲ ಅಕ್ಷರ ಕಲಿಕೆ ಜ್ಞಾನವಲ್ಲ. ಪುಸ್ತಕದ ಜ್ಞಾನವನ್ನು ‘ಜ್ಞಾನ’ವೆಂದು ಪರಿಗಣಿಸಲಾಗದು. ಪರಿಸರದಲ್ಲಿನ ಜ್ಞಾನ ಶಾಖೆಗಳು ಮನುಷ್ಯನಲ್ಲಿ ಒಂದುಗೂಡಿದಾಗ ಜ್ಞಾನದ ಬೆಳಕು ಪ್ರಜ್ವಲಿಸುತ್ತದೆ. ಅದಕ್ಕೆ ಸಂಸ್ಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳು ಭವಿಷ್ಯವನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು ಎಂದು ಅಥಿತಿ ಸ್ಥಾನ ವಹಿಸಿದ ಚಂದ್ರಶೇಖರ ಪಾಟೀಲ್ ಅವರು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊಪ್ಪಳದ ಡಿ.ವೈ.ಎಸ್.ಪಿ (ಡಿ.ಎ.ಆರ್) ಶಶಿಧರಯ್ಯ ಹಿರೇಮಠ ಅವರು ಮಾತನಾಡಿ ಹಿಂದೆ ನಮಗೆ ಇಂತಹ ಅವಕಾಶಗಳು ಇರಲಿಲ್ಲ. ಈ ಭಾಗದಲ್ಲಿ ಹೆಚ್ಚಿನ ಅಧ್ಯಯನ ಕೇಂದ್ರಗಳು ಇರಲಿಲ್ಲ. ಅನಿವಾರ್ಯವಾಗಿ ನಾನು ಬೇರೆ ಜಿಲ್ಲೆಗೆ ಹೋಗಿ ಪರೀಕ್ಷಾ ತಯಾರಿ ಮಾಡಬೇಕಾಯಿತು. ಇದು ಸ್ಪರ್ಧಾ ಯುಗ. ಹೊಸ ವಿಷಯಗಳ ಸೇರ್ಪಡೆ ವಿದ್ಯಾರ್ಥಿಗಳಿಗೆ ಕಠಿಣ ಸವಾಲಾಗಿದೆ. ಸ್ಪರ್ಧಾ ಕಲ್ಯಾಣ ಕೋಚಿಂಗ್ ಸೆಂಟರ್ ಕಲಿಕಾ ವಾತಾವರಣ ನಿರ್ಮಿಸಿದೆ. ಆಸಕ್ತರು ಪ್ರಯೋಜನ ಪಡೆದುಕೊಳ್ಳಬಹುದು ಎಂದರು .
ಸರ್ಕಾರಿ ಕಾಲೇಜು ಉಪನ್ಯಾಸಕರಾದ ವಿರುಪಣ್ಣ ಸ್ವಾಗತಿಸಿದರು. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಆಕಳವಾಡಿ ನಿರೂಪಿಸಿದರು. ವೆಂಕಟೆಶ ವಂದಿಸಿದರು. ನಾಗರಾಜ ಉಪ್ಪಾರ, ಮಂಜುನಾಥ ಆರ್, ದುಂಡಪ್ಪ ಬಿಜಲಿ, ಪ್ರವೀಣ ಚಿತ್ರಗಾರ, ಮಂಜುನಾಥ ಗುಡ್ಲಾನೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.

Please follow and like us:
error