ಶಿವಸೇನೆ ಬೇಡಿಕೆ ಹೊರತಾಗಿ ಸಿಎಂ ಹುದ್ದೆ ಹಂಚಿಕೆ ಪ್ರಶ್ನೆಯೇ ಇಲ್ಲ ಎಂದ ಬಿಜೆಪಿ

ಮುಂಬೈ, ಅ.26: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ದೊರೆತ ಜಯದ ಹಿನ್ನೆಲೆಯಲ್ಲಿ ಶುಕ್ರವಾರ ಗೃಹ ಸಚಿವ ಅಮಿತ್ ಶಾ ಅವರು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ ಹಾಗೂ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತಾದ ವಿಚಾರವನ್ನು ದೀಪಾವಳಿ ಹಬ್ಬದ ನಂತರ ಚರ್ಚಿಸುವ ಎಂದೂ ಹೇಳಿದ್ದಾರೆಂದು ಬಿಜೆಪಿ ಮೂಲಗಳು  ತಿಳಿಸಿವೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಉದ್ಧವ್ ಠಾಕ್ರೆ ಹೇಳಿಕೆ ನೀಡಿ ತಮ್ಮ ಪಕ್ಷ ಆಡಳಿತದಲ್ಲಿ 50-50 ಸೂತ್ರಕ್ಕೆ ಬೇಡಿಕೆಯಿಡುವುದು ಎಂದು ಹೇಳಿದ್ದರೂ ಶುಕ್ರವಾರ ಅಮಿತ್ ಶಾ ಜತೆಗಿನ ಸಂಭಾಷಣೆಯಲ್ಲಿ ಈ ವಿಚಾರ ಚರ್ಚೆಯಾಗಿಲ್ಲ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಹುದ್ದೆಯನ್ನು ಎರಡೂ ಪಕ್ಷಗಳು ಕ್ರಮವಾಗಿ ತಲಾ ಎರಡೂವರೆ ವರ್ಷಗಳಿಗೆ ಹೊಂದುವ ಕುರಿತಂತೆ ಸೇನೆ ಮುಂದಿಟ್ಟಿರುವ ಬೇಡಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಹತ್ತಿರದ ಮೂಲಗಳು ತಿಳಿಸಿವೆ. ಬಿಜೆಪಿಗೆ ಸ್ವಂತ ಬಲದಲ್ಲಿ 105 ಸ್ಥಾನಗಳು ದೊರಕಿವೆ ಹಾಗೂ 10 ಮಂದಿ ಪಕ್ಷೇತರರ ಬೆಂಬಲವೂ ಅದಕ್ಕಿದೆ ಎಂಬುದು ಪಕ್ಷದ ವಾದವಾಗಿದೆ. ಶಿವಸೇನೆ ತನಗೆ ಎರಡೂವರೆ ವರ್ಷಗಳ ಕಾಲ ಸಿಎಂ ಹುದ್ದೆ ಬೇಕೆಂದು ಹಠ ಹಿಡಿದರೆ ಬಿಜೆಪಿ  ಅಧಿಕಾರ ಹಂಚಿಕೆ ಒಪ್ಪಂದವನ್ನೇ ಮಾಡಿಕೊಳ್ಳುವುದಿಲ್ಲ ಎಂದೂ ಕೆಲ ಮೂಲಗಳು ತಿಳಿಸಿವೆ.

ಆದರೆ ಎರಡೂ ಮಿತ್ರ ಪಕ್ಷಗಳ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬುದು ಸೇನೆ ತನ್ನ ಮುಖವಾಣಿಯಲ್ಲಿ ‘ಅಧಿಕಾರ ಮತ್ತು ಪಕ್ಷಾಂತರಗಳು ವಿಪಕ್ಷಗಳನ್ನು ಸದೆ ಬಡಿಯುವುದಿಲ್ಲ’ ಎಂದು ಹೇಳುವ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಅಣಕಿಸಿದೆ. ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವತ್ ಟ್ವಿಟರ್ ನಲ್ಲಿ ಕುತ್ತಿಗೆಯಲ್ಲಿ ಗಡಿಯಾರ (ಎನ್‍ಸಿಪಿ ಚಿಹ್ನೆ) ಹೊಂದಿರುವ ದಾರವನ್ನು ಹಾಕಿರುವ ಹಾಗೂ ಕೈಯ್ಯಲ್ಲಿ ತಾವರೆ ಹಿಡಿದಿರುವ ನಗುತ್ತಿರುವ ಹುಲಿಯ ಕಾರ್ಟೂನ್ ಪೋಸ್ಟ್ ಮಾಡಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. “ಬುರಾ ನಾ ಮಾನೋ ದಿವಾಲಿ ಹೈ” ( ತಪ್ಪು ತಿಳಿಯಬೇಡಿ, ದೀಪಾವಳಿಯಲ್ಲವೇ) ಎಂದೂ ಈ ಕಾರ್ಟೂನ್ ಕೆಳಗೆ ರಾವತ್ ವಿವರಣೆ ನೀಡಿದ್ದಾರೆ.

ಹೊಸದಾಗಿ ಚುನಾಯಿತರಾದ ಶಿವಸೇನೆ ಶಾಸಕರು ಶುಕ್ರವಾರ ಠಾಕ್ರೆ ನಿವಾಸ ಮಾತೋಶ್ರೀಗೆ ಭೆಟಿ ನೀಡಿ ವರ್ಲಿ ಕ್ಷೇತ್ರದಿಂದ ಜಯ ಗಳಿಸಿರುವ ಆದಿತ್ಯ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬೇಡಿಕೆಯಿಟ್ಟಿದ್ದಾರೆನ್ನಲಾಗಿದೆ.

ತರುವಾಯ ಕೆಲವೊಂದು ಮಾಧ್ಯಮಗಳು ಎನ್‍ಸಿಪಿ ಹಾಗೂ ಕಾಂಗ್ರೆಸ್ ಪಕ್ಷ ಶಿವಸೇನೆಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿ ತೇಲಿ ಬಿಟ್ಟು ಸಂಚಲನ ಸೃಷ್ಟಿಸಿದರೂ ಕಾಂಗ್ರೆಸ್ ಪಕ್ಷ ಅಂತಹ ಉದ್ದೇಶ ಹೊಂದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್ ಸ್ಪಷ್ಟ ಪಡಿಸಿದ್ದರು

Please follow and like us:
error