ಶಿರಡಿ ಸಾಯಿಬಾಬಾ ಜನ್ಮಸ್ಥಳ ವಿವಾದ ; ಶಿರಡಿ ಪಟ್ಟಣ ಬಂದ್

ಮುಂಬೈ, ಜ.19: ಶಿರಡಿ ಸಾಯಿಬಾಬಾ ಜನ್ಮಸ್ಥಳ  ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಿರಡಿ ಪಟ್ಟಣ ರವಿವಾರ ಬಂದ್ ಆಗಿದ್ದು, ಶಿರಡಿ  ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಸ್ಥಳೀಯ ಸಾರಿಗೆ  ಬಂದ್ ಆಗಿದೆ.

19 ನೇ ಶತಮಾನದ ಸಂತ ಸಾಯಿಬಾಬಾರ  ಜನ್ಮಸ್ಥಳದ ಬಗ್ಗೆ ವಿವಾದ ಉಂಟಾಗಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಮುಂಬೈನ ರಾಜ್ಯ  ಸಚಿವಾಲಯದಲ್ಲಿ ಈ ಸಂಬಂಧ ಚರ್ಚಿಸಲು ಸಭೆ ಕರೆದಿದ್ದಾರೆ.

ಶಿರಡಿ ಪಟ್ಟಣ ಬಂದ್ ಆಗಿದ್ದರೂ ಶಿರಡಿ ಸಾಯಿಬಾಬಾದೇವಸ್ಥಾನ ತೆರೆದಿದ್ದು ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ, ಎಂದು ದೇವಾಲಯದ ಟ್ರಸ್ಟ್ ಮತ್ತು ಅಹ್ಮದ್‌ನಗರ ಜಿಲ್ಲಾಡಳಿತ ತಿಳಿಸಿದೆ.

ಭಕ್ತರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ‘ಪ್ರಸಾದಾಲಯ’ ಮತ್ತು ದೇವಾಲಯದ ಅಡುಗೆಮನೆ ಕೂಡ ತೆರೆಯಲಾಗಿದೆ ಎಂದು  ಜಿಲ್ಲಾಡಳಿತ ಮಾಹಿತಿ ನೀಡಿದೆ.

ದೇವಾಲಯದ ‘ಪ್ರಸಾದಾಲಯ’, ಬೆಳಗ್ಗಿನ ಉಪಾಹಾರ ಕೇಂದ್ರ ಮತ್ತು ‘ಲಡ್ಡೂ’ ಮಾರಾಟ ಕೇಂದ್ರಗಳ ಮುಂದೆ ಭಕ್ತರ ಉದ್ದನೆಯ ಸಾಲುಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಬಂದ್  ಯಶಸ್ವಿಯಾಗಿದೆ ಎಂದು ಹೇಳಿರುವ   ಸಾಯಿಬಾಬಾ ದೇವಾಲಯದ ಮಾಜಿ ಟ್ರಸ್ಟಿಗಳಲ್ಲಿ ಒಬ್ಬರಾಗಿರುವ ಸ್ಥಳೀಯ ಬಿಜೆಪಿ ಕಾರ್ಯಕರ್ತ ಸಚಿನ್ ತಂಬೆ ಪಾಟೀಲ್, “ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ.  ಸ್ಥಳೀಯ ಸಾರಿಗೆ (ಆಟೋರಿಕ್ಷಾ ಮತ್ತು ಇತರ ಖಾಸಗಿ ವಾಹನಗಳು)  ಬಂದ್ ಆಗಿದೆ.  ಪಟ್ಟಣದಲ್ಲಿ ಮತ್ತು ಶಿರಡಿಯ ಸುತ್ತಮುತ್ತಲಿನ 25 ಗ್ರಾಮಗಳಲ್ಲಿ ಬಂದ್ ಆಚರಿಸಲಾಗಿದೆ ‘’ಎಂದು ಹೇಳಿದರು.

ಹೋಟೆಲ್‌ಗಳಲ್ಲಿ ಮೊದಲೇ  ಕಾಯ್ದಿರಿಸಿದ  ಭಕ್ತರಿಗೆ ಉಳಿದುಕೊಳ್ಳಲು ಅವಕಾಶವಿದೆ.  ವಿಮಾನ ನಿಲ್ದಾಣದಿಂದ ದೇವಸ್ಥಾನಕ್ಕೆ ಟ್ಯಾಕ್ಸಿ ಸೇವೆಗಳ ಮೇಲೆ ಬಂದ್ ಪರಿಣಾಮ ಬೀರಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಪರಭಾನಿ ಜಿಲ್ಲೆಯ ಪಾಥ್ರಿ “ಸಾಯಿ ಜನ್ಮಸ್ಥಾನ್” (ಜನ್ಮಸ್ಥಳ) ದಲ್ಲಿ ಸೌಲಭ್ಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಠಾಕ್ರೆ 100 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದ ನಂತರ ವಿವಾದ  ಉಂಟಾಗಿದೆ.

ಶಿರಡಿಯಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ನಾಯಕರು ಮುಖ್ಯಮಂತ್ರಿಯವರ ಘೋಷಣೆಗೆ ಹೊರತಾಗಿಯೂ  ಸಾಯಿಬಾಬಾರ  ಜನ್ಮಸ್ಥಳ  ಯಾವುದೆಂದು ಗೊತ್ತಿಲ್ಲ. ಹಾಗಿರುವಾಗ  ಪಾಥ್ರಿ ಅವರ ಜನ್ಮಸ್ಥಳವೆಂದು ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಥ್ರಿಯನ್ನು ಸೈಬಾಬಾ ಅವರ ಜನ್ಮಸ್ಥಳ ಎಂದು ಘೋಷಿಸಿರುವ ಮುಖ್ಯ ಮಂತ್ರಿ  ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು  ಸ್ಥಳೀಯರು  ಒತ್ತಾಯಿಸಿದ್ದಾರೆ.

Please follow and like us:
error