ಶಿಕ್ಷಣ ಸಚಿವ ಸುರೇಶಕುಮಾರ್ ರಾಜೀನಾಮೆಗೆ ವೈದ್ಯರ,ಪ್ರಗತಿಪರ ಸಂಘಟಕರ ಒತ್ತಾಯ

 

ಬಡಮಕ್ಕಳ ಹಿತರಕ್ಷಣೆ ಮಾಡಲು ವಿಫಲವಾಗಿರುವ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಲು ವೈದ್ಯರ,ಪ್ರಗತಿಪರ ಸಂಘಟಕರ ಒತ್ತಾಯ

 

ಬೆಂಗಳೂರು : ಕರೋನಾ ಸಂದರ್ಭದಲ್ಲಿ ಬಡಮಕ್ಕಳ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿರುವ ಶಿಕ್ಷಣ ಸಚಿವ ಸುರೇಶಕುಮಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯದ ವಿವಿಧ ವೈದ್ಯರು,ಪ್ರಗತಿಪರ ಸಂಘಟಕರ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು

 

ಕರ್ನಾಟಕದಲ್ಲಿ ಮಾರ್ಚ್ ಬಳಿಕ ಕೊರೋನ ಸೋಂಕಿನ ನೆಪದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು ಈಗ ಕೊರೋನ ಹರಡುವಿಕೆಯು ಇಳಿಮುಖವಾಗಿ, ಬೇರೆಲ್ಲಾ ಚಟುವಟಿಕೆಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದ್ದರೂ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲದಿರುವುದರಿಂದಲೂ, ಕೊರೋನ ಹರಡುವಿಕೆಯು ಈಗಾಗಲೇ ಅತಿ ವಿರಳವಾಗಿರುವುದರಿಂದಲೂ ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗೆ ಪೂರ್ಣವಾಗಿ ತೆರೆಯಬೇಕೆಂದು ನಾವು ಇದೇ ಡಿಸೆಂಬರ್ 7ರಂದು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದೆವು, ಮಾತ್ರವಲ್ಲ, ತೆರೆಯದೇ ಹೋದರೆ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದೂ ಹೇಳಿದ್ದೆವು. ಸರಕಾರವು ಶಾಲೆಗಳನ್ನು ತೆರೆಯದೇ ಇರುವುದರಿಂದ ಹಲವು ಶಾಲೆಗಳನ್ನು ತೆರೆಯುವ ಪ್ರಯತ್ನಗಳು ಈಗಾಗಲೇ ಆಗಿವೆ.

ಶಾಲೆಗಳನ್ನು ತೆರೆಯಲು ಇನ್ನಷ್ಟೇ ನಿರ್ಧರಿಸಬೇಕಿರುವ ಸರಕಾರವು ಜನವರಿ 1ರಿಂದ ಸೀಮಿತ ಮಟ್ಟದಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಕೊಠಡಿಗಳಲ್ಲೇ ಆರಂಭಿಸುವುದಾಗಿ ಹೇಳಿದೆ. ಈಗ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯದ ಕೊರೋನ ಕಾರ್ಯಪಡೆ – ತಾಂತ್ರಿಕ ಸಲಹಾ ಸಮಿತಿಯು 10 ಮತ್ತು 12ನೆ ತರಗತಿಗಳನ್ನು ಜನವರಿ 1 ರಿಂದ ತೆರೆಯಬಹುದೆಂದೂ, 6-9 ಮತ್ತು 11ನೇ ತರಗತಿಗಳಿಗೆ ಜನವರಿ 14ರಿಂದ ವಿದ್ಯಾಗಮ ಆರಂಭಿಸಬಹುದೆಂದೂ, 6ಕ್ಕಿಂತ ಕೆಳಗಿನ ತರಗತಿಗಳನ್ನು ತೆರೆಯಲೇಬಾರದೆಂದೂ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ನಮ್ಮ ಮಕ್ಕಳ ಭವಿಷ್ಯವನ್ನು ಶಾಶ್ವತವಾಗಿ ಕೆಡಿಸಲಿದೆ. ಈ ಸಲಹೆಯು ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರುವ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಒಂದು ವರ್ಷ ಕಲಿಕೆಯಿಂದ ವಂಚಿತರಾದರೆ 3-15 ವಯಸ್ಸಿನ ಎಲ್ಲ ಮಕ್ಕಳೂ ಹಿಂದಿನದನ್ನು ಮರೆತು, ಮುಂದಿನದನ್ನು ಕಲಿಯಲಾಗದೆ ಎಂದೆಂದಿಗೂ ಕಷ್ಟಕ್ಕೀಡಾಗಲಿದ್ದಾರೆ ಎಂಬ ಸಾಮಾನ್ಯ ಜ್ಞಾನವೂ ಈ ಸಮಿತಿಯವರಿಗೆ ಇದ್ದಂತಿಲ್ಲ. ಜೊತೆಗೆ, ಈ ಸಂಕಷ್ಟಕ್ಕೆ ಒಳಗಾಗುವ ಬಹುತೇಕ ಮಕ್ಕಳು ಅತ್ಯಂತ ಕೆಳಸ್ತರದ ವರ್ಗಗಳಿಗೆ ಸೇರಿದ ಮಕ್ಕಳಾಗಿದ್ದು ಅವರು ಪೂರ್ಣವಾಗಿ ಶಾಲೆ ತೊರೆದು ಬಾಲ ಕಾರ್ಮಿಕ ಹಾಗು ಜೀತ ಕಾರ್ಮಿಕರಾಗುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಬಾಲ್ಯ ವಿವಾಹ ಮತ್ತು ಮಕ್ಕಳ ಸಾಗಾಣಿಕೆ ಹೆಚ್ಚಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಕರ್ನಾಟಕವೂ ಸೇರಿದಂತೆ ವಿಶ್ವದಾದ್ಯಂತದಿಂದ ಲಭ್ಯವಿರುವ ವರದಿಗಳನುಸಾರ ಕೊರೋನ ಸೋಂಕು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಯಾವ ಸಮಸ್ಯೆಯನ್ನೂ, ರೋಗಲಕ್ಷಣಗಳನ್ನೂ ಕೂಡ, ಉಂಟು ಮಾಡುವುದಿಲ್ಲ, ಮತ್ತು 10ರಿಂದ 20ರವರೆಗಿನ ಮಕ್ಕಳಲ್ಲೂ ಅತಿ ಸೌಮ್ಯ ಸೋಂಕಾಗಿ, ಯಾವುದೇ ಸಮಸ್ಯೆಯನ್ನುಂಟು ಮಾಡದೆ ವಾಸಿಯಾಗುತ್ತದೆ. ಇದನ್ನೇ ಪರಿಗಣಿಸಿ ಇಂದು ವಿಶ್ವದಾದ್ಯಂತ ಪ್ರಾಥಮಿಕ ಶಾಲೆಗಳನ್ನೇ ಆದ್ಯತೆಯ ಮೇರೆಗೆ ಮೊದಲಾಗಿ ತೆರೆಯಲಾಗಿದೆ. ಆದರೆ ನಮ್ಮ ರಾಜ್ಯದ ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯು ಈ ವೈಜ್ಞಾನಿಕ ಸತ್ಯಕ್ಕೆ ತೀರಾ ತದ್ವಿರುದ್ಧವಾದ, ಅಸಂಬದ್ಧವಾದ ಸಲಹೆಯನ್ನು ನೀಡಿರುವುದು ಖಂಡನೀಯವಾಗಿದೆ. ಆದ್ದರಿಂದ ಇಂಥ ಅವೈಜ್ಞಾನಿಕವಾದ, ಮಕ್ಕಳ ಹಿತಾಸಕ್ತಿಗಳಿಗೆ ಮಾರಕವಾದ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೆಂದೂ, ಈ ತಾಂತ್ರಿಕ ಸಮಿತಿಯನ್ನು ಈ ಕೂಡಲೇ ಬರಖಾಸ್ತು ಮಾಡಬೇಕೆಂದೂ ಸರಕಾರವನ್ನು ಆಗ್ರಹಿಸುತ್ತೇವೆ.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಜ್ಞರ ಸಮಿತಿಯ ಅಂದಾಜು ಈಗಷ್ಟೇ ಪ್ರಕಟವಾಗಿದ್ದು, ದೇಶದ 60% ಜನರಿಗೆ ಕೊರೋನ ಸೋಂಕಿರಬಹುದೆಂದೂ, ಅದರ ಹರಡುವಿಕೆಯು ಇಳಿಯುತ್ತಿದೆಯೆಂದೂ ಹೇಳಿದೆ. ನಮ್ಮ ರಾಜ್ಯದ ಆರೋಗ್ಯ ಇಲಾಖೆಯು ಈ ಹಿಂದೆ ಪ್ರಕಟಿಸಿದ್ದ ಮಾಹಿತಿಯಲ್ಲೂ ಅದನ್ನೇ ಹೇಳಲಾಗಿತ್ತು. ಹಾಗೆಯೇ, ಕೊರೋನ ಸೋಂಕಿನಿಂದ ಎಲ್ಲಾ ವಯೋವರ್ಗಗಳಲ್ಲಾಗಿರುವ ಸಾವುಗಳ ಬಗ್ಗೆ ಹಲವು ದೇಶಗಳ ವರದಿಗಳನ್ನಾಧಾರಿಸಿ ಯುರೋಪಿಯನ್ ಜರ್ನಲ್ ಆಫ್ ಎಪಿಡೆಮಿಯೋಲಜಿಯಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲೂ ಮಕ್ಕಳಲ್ಲಿ ಕೊರೋನ ಸೋಂಕಿನಿಂದ ಯಾವುದೇ ಮಾರಣಾಂತಿಕ ಸಮಸ್ಯೆಗಳಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಬಾಲವಾಡಿಯಿಂದ 12ರವರೆಗೆ ಎಲ್ಲಾ ತರಗತಿಗಳನ್ನು ಈ ಕೂಡಲೇ ತೆರೆಯುವುದರಿಂದ ಯಾವುದೇ ಸಮಸ್ಯೆಯಾಗದು. ಈ ಕೂಡಲೇ ಶಾಲೆಗಳನ್ನು ತೆರೆಯುವುದರಿಂದ ಜೂನ್ ವರೆಗೆ ಈ ಶೈಕ್ಷಣಿಕ ವರ್ಷದ ಪಾಠಗಳನ್ನು ಕಲಿಸುವುದಕ್ಕೂ ಸಾಧ್ಯವಾಗಲಿದೆ. ಪ್ರತಿಯಾಗಿ, ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾನವಾಧಿಕಾರ ಮತ್ತಿತರ ಎಲ್ಲಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಮಾತ್ರವಲ್ಲ ಮಕ್ಕಳ, ಅದರಲ್ಲೂ 3-10 ವಯಸ್ಸಿನ ಮಕ್ಕಳ, ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಮಿದುಳಿನ ಬೆಳವಣಿಗೆಗಳ ಮೇಲೆ ಶಾಶ್ವತವಾದ ಹಾನಿಯನ್ನುಂಟು ಮಾಡಲಿವೆ.

ಆದ್ದರಿಂದ ಈ ಕೂಡಲೇ ಎಲ್ಲಾ ತರಗತಿಗಳನ್ನು ಎಲ್ಲಾ ಶಾಲೆಗಳಲ್ಲಿ ಪುನರಾರಂಭಿಸಬೇಕೆಂದೂ, ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯನ್ನು ಬರಖಾಸ್ತು ಮಾಡಬೇಕೆಂದೂ ಬಲವಾಗಿ ಆಗ್ರಹಿಸುತ್ತೇವೆ ಹಾಗೂ ನಾವು ಈಗಾಗಲೇ ಹೇಳಿರುವಂತೆ ನಮ್ಮೂರ ಶಾಲೆಗಳನ್ನು ನಾವೇ ತೆರೆಯುವ ಅಭಿಯಾನವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಿದ್ದೇವೆ ಎಂದು ಈ ಮೂಲಕ ಘೋಷಿಸುತ್ತಿದ್ದೇವೆ. ಕರ್ನಾಟಕದ ಬಡಮಕ್ಕಳ ಹಿತರಕ್ಷಣೆ ಮಾಡಲು ವಿಫಲವಾಗಿರುವ ಮಾನ್ಯ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಕೂಡಾ ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ಧಾರೆ.

ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯ ಪರವಾಗಿ

ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು

  1. ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
  2. ಜ್ಯೋತಿ ಕೆ, ರಾಜ್ಯ ಅಧ್ಯಕ್ಷರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್),
  3. ವಾಸುದೇವ ರೆಡ್ಡಿ ಕೆ, ರಾಜ್ಯ ಕಾರ್ಯದರ್ಶಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)
  4. ಸರೋವರ್ ಬೆಂಕೀಕೆರೆ, ರಾಜ್ಯ ಸಂಚಾಲಕರು, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್)
  5. ಡಾ.ಶ್ರೀನಿವಾಸ್, ರಾಜ್ಯ ಸಂಚಾಲಕರು, ಭಾರತೀಯ ವಿದ್ಯಾರ್ಥಿ ಸಂಘಟನೆ (ಬಿವಿಎಸ್)
  6. ತೋಳಿ ಭರಮಣ್ಣ, ರಾಜ್ಯ ಸಂಚಾಲಕರು, ವಿದ್ಯಾರ್ಥಿ ಬಂಧುತ್ವ ವೇದಿಕೆ
  7. ತಿಪ್ಪೇಸ್ವಾಮಿ ಕೆಟಿ, ರಾಜ್ಯ ಸಂಚಾಲಕರು, ಕರ್ನಾಟಕ ಯುವ ಸಮನ್ವಯ
  8. ಪುಷ್ಪರಾಜ್ ಬೋಳೂರು, ಅಧ್ಯಕ್ಷರು, ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್), ಮಂಗಳೂರು

ಅಭಿಯಾನವನ್ನು ವೈಯುಕ್ತಿಕ ನೆಲೆಯಲ್ಲಿ ಬೆಂಬಲಿಸುತ್ತಿರುವ ತಜ್ಞರು

  1. ಡಾ. ನಿರಂಜನಾರಾಧ್ಯ ವಿಪಿ, ಅಭಿವೃದ್ಧಿ ಶಿಕ್ಷಣ ತಜ್ಞರು
  2. ಡಾ॥ ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಲೇಖಕರು
  3. ಡಾ॥ ಯೋಗಾನಂದ ರೆಡ್ಡಿ ವೈಸಿ, ಶಿಶು ತಜ್ಞರು, ಕರ್ನಾಟಕ ಐಎಂಎ ಮಾಜಿ ಅಧ್ಯಕ್ಷರು
  4. ಡಾ. ಸಿದ್ದನಗೌಡ ಪಾಟೀಲ, ಸಂಪಾದಕರು, ಹೊಸತು ಮಾಸ ಪತ್ರಿಕೆ, ಪ್ರಗತಿಪರ ಚಿಂತಕರು.
  5. ಡಾ. ವಡ್ಡಗೆರೆ ನಾಗರಾಜಯ್ಯ, ಕವಿ, ಸಾಂಸ್ಕೃತಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು
  6. ಶ್ರೀಪಾದ ಭಟ್, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ
  7. ಬಿಆರ್ ಭಾಸ್ಕರ್ ಪ್ರಸಾದ್, ಪ್ರಧಾನ ಸಂಪಾದಕ ನ್ಯೂಸ್ 14, ರಾಜ್ಯಾಧ್ಯಕ್ಷ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ.
  8. ಡಾ. ಬಿಆರ್ ಮಂಜುನಾಥ್, ರಾಜ್ಯ ಅಧ್ಯಕ್ಷರು, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ.
  9. ಡಾ.ಕೆಎಸ್ ಜನಾರ್ಧನ, ರಾಜ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಉನ್ನತ ಪದವೀಧರರ ಒಕ್ಕೂಟ
  10. ಪ್ರೊ. ನರೇಂದ್ರ ನಾಯಕ್, ಅಧ್ಯಕ್ಷರು, ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ
  11. ಡಾ॥ ಹೆಚ್ ಜಿ ಜಯಲಕ್ಷ್ಮಿ, ವೈದ್ಯರು, ಲೇಖಕರು, ಮಹಿಳಾ ಪರ ಹೋರಾಟಗಾರರು.
  12. ಡಾ॥ ಪಿವಿ ಭಂಡಾರಿ, ಮನೋರೋಗ ತಜ್ಞರು
  13. ಡಾ॥ ವಾಣಿ ಕೋರಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
  14. ಡಾ॥ ಬಾಲಸರಸ್ವತಿ, ಚರ್ಮ ತಜ್ಞರು
  15. ಡಾ॥ ಭಾನು ಪ್ರಕಾಶ್ ಎಎಸ್, ನರಶಸ್ತ್ರಚಿಕಿತ್ಸೆ ವೈದ್ಯರು, ಸತ್ಯ ಆರೋಗ್ಯ.
  16. ರಾಜಾರಾಂ ತಲ್ಲೂರು, ಪತ್ರಕರ್ತರು, ಲೇಖಕರು
  17. ಜಿ ರವಿ, ವಿಕಲಚೇತನ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು
  18. ಪಾರ್ಥಸಾರಥಿ ಕೆಎಸ್, ನಿವೃತ್ತ ಬಿಎಸ್ಎನ್‌ಎಲ್ ಅಧಿಕಾರಿ ಹಾಗೂ ಲೇಖಕರು.
  19. ಭಾರತಿ ಪ್ರಶಾಂತ್, ಸಾಮಾಜಿಕ ಹೋರಾಟಗಾರ್ತಿ

 

Please follow and like us:
error