ಶಾಸಕರ ‘ಸಾಮೂಹಿಕ ರಾಜೀನಾಮೆ’ ಅಸ್ತ್ರ ಪ್ರಯೋಗ?

ಎಸ್ಟಿಗೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

 ಚಂದ್ರಶೇಖರ್ ವಾಲ್ಮೀಕಿ

 ಮಹಾಸಭಾ ರಾಜ್ಯಾಧ್ಯಕ್ಷ

ಬೆಂಗಳೂರು, ಡಿ.26: ಪರಿಶಿಷ್ಟ ಪಂಗಡ (ಎಸ್ಟಿ)ದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲೇ ಎಸ್ಟಿ ಮೀಸಲಾತಿ ಶೇ.7.5ಕ್ಕೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಶಾಸಕರ ಸಾಮೂಹಿಕ ರಾಜೀನಾಮೆ ಅಸ್ತ್ರ ಪ್ರಯೋಗಕ್ಕೆ ತೆರೆಮರೆಯಲ್ಲೇ ಸಿದ್ಧತೆ ನಡೆಸಿದ್ದಾರೆ.

ವೀರಶೈವ ಲಿಂಗಾಯತ, ಒಕ್ಕಲಿಗ, ಕುರುಬ, ಪರಿಶಿಷ್ಟ ಜಾತಿ (ಎಸ್ಸಿ)ಯ ನಂತರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಪಂಗಡ(ಎಸ್ಟಿ)ಗಳ ಸಮುದಾಯದ ಒಟ್ಟು 17 ಮಂದಿ ಶಾಸಕರಿದ್ದಾರೆ. ಆದರೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇಲ್ಲ ಮತ್ತು ಸೂಕ್ತ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ ಎಂಬ ಕೂಗಿದೆ. ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯಗಳಿಗೆ ಪ್ರಸಕ್ತ ಶೇ.3ರಷ್ಟು ಮೀಸಲಾತಿ ನೀಡುತ್ತಿದ್ದು ಅದನ್ನು ಶೇ.7.5ಕ್ಕೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರ ಸ್ವಾಮೀಜಿ ಬೀದಿಗಿಳಿದಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅಡಕತ್ತರಿಯಲ್ಲಿ ಸಿಲುಕಿದೆ.

ಆಡಳಿತಾರೂಢ ಬಿಜೆಪಿಯಿಂದ ಸಚಿವ ಬಿ.ಶ್ರೀರಾಮುಲು, ಶಿವನಗೌಡ ನಾಯಕ್, ರಾಜೂಗೌಡ, ರಮೇಶ್ ಜಾರಕಿಹೊಳಿ, ಎನ್.ವೈ.ಗೋಪಾಲಕಷ್ಣ, ಎಸ್.ವಿ.ರಾಮಚಂದ್ರ, ಸೋಮಲಿಂಗಪ್ಪ, ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಬಿ.ನಾಗೇಂದ್ರ, ಕಂಪ್ಲಿ ಗಣೇಶ್, ಬಸವನಗೌಡ ದದ್ದಲ್, ಇ.ತುಕಾರಾಂ, ರಘುಮೂರ್ತಿ, ಅನಿಲ್ ಚಿಕ್ಕಮಾದು, ಜೆಡಿಎಸ್‌ನಿಂದ ರಾಜಾವೆಂಕಟಪ್ಪನಾಯಕ್ ಚುನಾಯಿತರಾಗಿದ್ದಾರೆ. ಜತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪ್‌ಗೌಡ ಪಾಟೀಲ್ ಆಯ್ಕೆಯಾಗಿದ್ದರು. ಬಿಜೆಪಿಯ 8, ಕಾಂಗ್ರೆಸ್‌ನ 7 ಮತ್ತು ಜೆಡಿಎಸ್‌ನ ಓರ್ವ ಶಾಸಕ ಸೇರಿದಂತೆ ಎಸ್ಟಿ ಸಮುದಾಯದ 17 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಈ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಇಲ್ಲ. ಸೂಕ್ತ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ. ಅಲ್ಲದೆ ಸಿಎಂ ಅಥವಾ ಡಿಸಿಎಂ ಸೇರಿದಂತೆ ಉನ್ನತ ರಾಜಕೀಯ ಹುದ್ದೆಯನ್ನೂ ನೀಡಿಲ್ಲ. ಹೀಗಾಗಿ ಎಸ್ಟಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿ ಮಾರ್ಚ್ ಮೊದಲ ವಾರದಲ್ಲಿ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಬೃಹತ್ ಸಮಾವೇಶ ಏರ್ಪಡಿಸಲು ತಯಾರಿ ನಡೆಸಿದೆ. ಎಸ್ಟಿ ಮೀಸಲಾತಿ ಹೆಚ್ಚಳದ ಬೇಡಿಕೆ ಹಿನ್ನೆಲೆಯಲ್ಲಿ ಶ್ರೀರಾಮುಲು ಡಿಸಿಎಂ ಹುದ್ದೆ, ಶಾಸಕ ರಾಜೂಗೌಡ ಮಂತ್ರಿ ಸ್ಥಾನ ‘ತ್ಯಾಗ’ ಮಾಡಿದ್ದರು. ಇದೀಗ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಲೇಬೇಕು ಎಂದು ವಾಲ್ಮೀಕಿ ಸಮುದಾಯ ಪಟ್ಟು ಹಿಡಿದಿದೆ. ಅಲ್ಲದೆ, ಶಾಸಕರ ರಾಜೀನಾಮೆಯ ಅಸ್ತ್ರ ಪ್ರಯೋಗಕ್ಕೂ ಸಿದ್ಧತೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಕೇಂದ್ರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ, ‘ಅರ್ಹ’ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಂಪುಟ ವಿಸ್ತರಣೆ ತಲೆಬಿಸಿ ನಡುವೆಯೇ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವುದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸಂಕಷ್ಟ ತರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

Please follow and like us:
error