ಶಬ್ದ ಮಾಲಿನ್ಯ ತಡೆಯಲು ಒತ್ತಾಯಿಸಿ ಎಸ್.ಪಿ. ಗೆ ಮನವಿ

ಕೊಪ್ಪಳ:  ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ವಾಹನಗಳಲ್ಲಿ ಭಾರಿ ಶಬ್ದದ ಧ್ವನಿ ವರ್ಧಕಗಳ ಬಳಕೆ ತಡೆಯಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಪಸ್ಥಿತಿಯಲ್ಲಿ ವೈರ್‌ಲೇಸ್ ಇನ್ಸ್‌ಪೆಕ್ಟರ್ ಮಲ್ಲನಗೌಡ ಅವರಿಗೆ, ಹಾಗೂ ಪ್ರದೇಶಿಕ ಸಾರಿಗೆ ಅಧಿಕಾರಿ(ಆರ್,ಟಿ,ಒ) ನೂರುಅಹ್ಮದ ಬಾಷಾ ಅವರಿಗೆ ಪ್ರತ್ಯೆಕ ಮನವಿ ಅರ್ಪಿಸಲಾಯಿತು. ನಮ್ಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಟ್ರಾಕ್ಟರ್, ಟಂ ಟಂ,ಆಟೋ, ಟಾಟಾ ಎಸ್‌ಯಂತ ವಿವಿಧ ವಾಹನಗಳಿಗೆ ಅತ್ಯಂತ ಹೆಚ್ಚಿನ ಶಬ್ದ ಬರುವ ಧ್ವನಿವರ್ಧಕ ಪೆಟ್ಟಿಗೆಗಳನ್ನು ಕಟ್ಟಿಕೊಂಡು ಭಾರಿ ಶಬ್ದದಿಂದ ಹಾಡುಗಳನ್ನು ಹಾಕಿಕೊಂಡು ಊರುಗಳಲ್ಲಿ ತಿರುಗುವುದರಿಂದ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಅಲ್ಲದೆ ವಯೋವೃದ್ಧರು, ಬಿ,ಪಿ, ಶುಗರ್, ಹಾರ್ಟ್ ಸಮಸ್ಯೆ, ಬಸರಿ ಬಾಣಂತಿ, ಚಿಕ್ಕ ಶಿಶುಗಳಿಗೆ ಅಲ್ಲದೆ ಸಾರ್ವಜನಿಕರಿಗೆ ಅತ್ಯಂತ ತೊಂದರೆಯಾಗುತ್ತದೆ. ಈ ಧ್ವನಿವರ್ಧಕಗಳನ್ನು ರಾತ್ರಿ ಹೊತ್ತಿನಲ್ಲೂ ಸಹ ಹಾಕಿಕೊಂಡು ಗಾಡಿ ಒಡಿಸುವುದರಿಂದ ರಸ್ತೆ ಬದಿಯ ಜನರ ನೆಮ್ಮದಿ ಹಾಳಾಗುತ್ತಿದೆ ಎಂದು ಮುಖಂಡರು ದೂರಿದರು. ಧ್ವನಿವರ್ಧಕಗಳ ಬಳಕೆ ಮಾಡುವುದನ್ನು ನಿಷೇದ ಮಾಡಬೇಕು. ಆದಾಗ್ಯೂ ಹಾಗೊಂದು ವೇಳೆ ಧ್ವನಿವರ್ಧಕಗಳನ್ನು ಬಳಸುತ್ತಿದ್ದರೆ ಅಂತಹ ವಾಹನ ಚಾಲಕರ ಮೇಲೆ ದಂಡ, ಮತ್ತಿತರ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡು ಜನರಿಗಾಗುವ ತೊಂದರೆಗಳನ್ನು ತಪ್ಪಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸಹಾ ಕಾರ್ಯದರ್ಶಿ ಡಾ. ಕೆ. ಎಸ್. ಜನಾರ್ಧನ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್, ಎ, ಗಫಾರ್. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಯೋಜಕ ತಿಪ್ಪಯ್ಯ ಸ್ವಾಮಿ ಹಿರೇಮಠ, ಜಿಲ್ಲಾ ಚಾಲಕರ ಸಮಿತಿಯ ಸಂಚಾಲಕ ಶಿವಪ್ಪ ಚಲವಾದಿ ಮುಂತಾದವರು ಒತ್ತಾಯಿಸಿದರು.

Please follow and like us:
error