ವ್ಯಕ್ತಿಗತವಾಗಿ ಕ್ರಮ ಕೈಗೊಳ್ಳಿ, ಒಂದು ಸಮುದಾಯವನ್ನು ಗುರಿಯಾಗಿಸಬೇಡಿ: ಡಿಕೆಶಿ

ಬೆಂಗಳೂರು, ಎ.20: ನಿನ್ನೆ ಪಾದರಾಯನಪುರದಲ್ಲಿ ನಡೆದ ಘಟನೆ ಸಂಬಂಧ ವ್ಯಕ್ತಿಗತವಾಗಿ ಕ್ರಮ ಕೈಗೊಳ್ಳಿ, ಒಂದು ಸಮುದಾಯವನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಸರಕಾರಕ್ಕೆ  ಮನವಿ ಮಾಡಿದ್ದಾರೆ.

ಸದಾಶಿವ ನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಆದರೆ ಸರ್ಕಾರ ಇಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸುವ ಬದಲು, ವ್ಯಕ್ತಿಗತವಾಗಿ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಸರ್ಕಾರದ ಯಾವುದೇ ನಿರ್ಧಾರಕ್ಕೆ ನಾವು ಸಹಕಾರ ನೀಡುತ್ತೇವೆ. ನಮ್ಮ ಬೆಂಬಲ ಸರ್ಕಾರಕ್ಕೆ ಸದಾ ಇರಲಿದೆ ಎಂದಿದ್ದಾರೆ.

ನಾನು ಸಿಎಂ ಬಳಿ ಮನವಿ ಮಾಡುತ್ತೇನೆ. ಇದು ವ್ಯಕ್ತಿಗಳು ಮಾಡಿದ ಅಪರಾಧ. ಸಮಾಜ ಮಾಡಿದ ಅಪರಾಧ ಅಲ್ಲ. ವ್ಯಕ್ತಿಗಳ ಅಪರಾಧವನ್ನು ಸಮಾಜದ ಅಪರಾಧವೆಂಬಂತೆ ಬಿಂಬಿಸುವುದು ಸರಿಯಲ್ಲ. ನಾವು ಮನವಿ ಮಾಡುತ್ತೇವೆ, ಇದನ್ನು ವ್ಯಕ್ತಿಗತ ಅಪರಾಧವೆಂದು ಪರಿಗಣಿಸಿ, ಸಮಾಜದ ಮೇಲೆ ಕ್ರಮ ಬೇಡ. ಕಾನೂನಿನ ವಿರುದ್ಧವಾಗಿ, ಸರ್ಕಾರದ ವಿರುದ್ಧವಾಗಿ ಕಾನೂನು ಮುರಿಯಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಾಕಷ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಶಾಂತಿ ಭಂಗ ನೀಡುವ ಮಾತನ್ನಾಡಿದ್ದಾರೆ. ಕೆಲವರು ಪರಿಸ್ಥಿತಿಯನ್ನು ಹೇಗೆ ಬದಲಿಸಲು ಹೋಗಿದ್ದಾರೆ ಎನ್ನುವುದು ಗೊತ್ತಿದೆ. ಅವರ ವಿರುದ್ಧ ನಾವು ಹೇಳಿಕೆ ನೀಡುವುದಿಲ್ಲ. ನಿಮ್ಮ ನಾಯಕರ ಹೇಳಿಕೆಯನ್ನು ಗಮನಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಡಿಕೆಶಿ ಹೇಳಿದರು.

 

Please follow and like us:
error